

ಮುಂಡಗೋಡ: ಸರ್ಕಾರಿ ಪದವಿಪೂರ್ವ ಕಾಲೇಜ್ನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಕಣ್ಣು ನೋವು ಕಾಯಿಲೆ ಕಾಣಿಸಿಕೊಂಡಿದ್ದು, ಪ್ರತಿದಿನ ಹಲವಾರು ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರ್ಕಾರಿ ಪದವಿಪೂರ್ವ ಕಾಲೇಜ್ನ ಪ್ರೌಢ ಶಾಲೆ ವಿಭಾಗದಲ್ಲಿ ಎಂಟರಿಂದ ಹತ್ತನೇ ತರಗತಿಯವರೆಗೆ ಐದು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ, ಕಳೆದ ಒಂದು ವಾರದಿಂದ ಕೆಲವು ವಿದ್ಯಾರ್ಥಿಗಳಿಗೆ ಕಣ್ಣು ನೋವು ಕಾಣಿಸಿಕೊಂಡಿದ್ದು, ಇದು ಸಾಂಕ್ರಾಮಿಕ ರೋಗವಾಗಿರುವ ಪರಿಣಾಮ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ.
ಆರಂಭದಲ್ಲಿ ಒಂದಿಬ್ಬರಲ್ಲಿ ಕಾಣಿಸಿಕೊಂಡಿದ್ದ ಈ ನೋವು, ಇದೀಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತ ಸಾಗುತ್ತಿದೆ. ಕಣ್ಣು ನೋವು ಕಾಣಿಸಿಕೊಂಡ ವಿದ್ಯಾರ್ಥಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಗುತ್ತಿದೆ.
ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿರುವ ಕಣ್ಣು ನೋವು ರೋಗವು ಸಾಂಕ್ರಾಮಿಕ ರೋಗವಾಗಿರುವುದರಿಂದ ಅತಿ ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಈ ಕುರಿತು ಶಾಲೆಯ ಮುಖ್ಯಾಧ್ಯಾಪಕರು ಹೆಚ್ಚು ಜಾಗೃತಿ ವಹಿಸುವ ಅವಶ್ಯವಿದೆ ಎಂಬುದು ಪಾಲಕರ ಮಾತಾಗಿದೆ.
ಕಳೆದ ಒಂದು ವಾರದಿಂದ ಸರ್ಕಾರಿ ಹೈಸ್ಕೂಲ್ನ ವಿದ್ಯಾರ್ಥಿಗಳು ಕಣ್ಣು ನೋವು ಕಾಯಿಲೆಯ ಚಿಕಿತ್ಸೆ ಪಡೆಯುತ್ತಿದ್ದು, ಪ್ರತಿದಿನವೂ ಆರೇಳು ವಿದ್ಯಾರ್ಥಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸಾಂಕ್ರಾಮಿಕ ರೋಗವಾಗಿರುವುದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೂಕ್ತ ಮುಂಜಾಗ್ರತೆ ವಹಿಸಬೇಕು.| ಡಾ. ಚೈತ್ರಾನೇತ್ರ ತಜ್ಞೆ, ಸರ್ಕಾರಿ ಆಸ್ಪತ್ರೆ, ಮುಂಡಗೋಡ
ಒಂದು ವಾರದಿಂದ ವಿದ್ಯಾರ್ಥಿಗಳಿಗೆ ಕಣ್ಣು ನೋವು ರೋಗ ಕಾಣಿಸಿಕೊಂಡಿದ್ದು, ಅಂತಹ ವಿದ್ಯಾರ್ಥಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸುತ್ತಿದ್ದೇವೆ.| ಪರಶುರಾಮ ಕೆ. ಮುಖ್ಯಾಧ್ಯಾಪಕ,ಸರ್ಕಾರಿ ಹೈಸ್ಕೂಲ್, ಮುಂಡಗೋಡ