

ಗುಂಡ್ಲುಪೇಟೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ರೈತ ಸಂಘ ಹಾಗೂ ಹಸಿರು ಸೇನೆಯ ಚಾಮರಾಜನಗರ ಜಿಲ್ಲಾ ಸಮಿತಿ ಸಭೆ ನಡೆಸಿ ಜಿಲ್ಲೆ ಹಾಗೂ ತಾಲೂಕು ಘಟಕಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಜಿಲ್ಲಾ ಗೌರವಾಧ್ಯಕ್ಷರಾಗಿ ತಂಗವೇಲು ಗೌಂಡರ್, ಜಿಲ್ಲಾಧ್ಯಕ್ಷರಾಗಿ ಮಾಡ್ರಳ್ಳಿ ಎಸ್. ಮಹಾದೇವಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಕುಂದಕೆರೆ ಸಂಪತ್ತು, ಉಪಾಧ್ಯಕ್ಷರಾಗಿ ಹಾಲಹಳ್ಳಿ ಮಹೇಶ್, ಲಿಂಗಸ್ವಾಮಿ ಹೆಗ್ಗೊಠಾರ, ಸಂಘಟನಾ ಕಾರ್ಯದರ್ಶಿಯಾಗಿ ಪುಟ್ಟರಾಜು ಬೂದಂಬಳ್ಳಿ ಮೋಳೆ, ಕಾರ್ಯಾಧ್ಯಕ್ಷರಾಗಿ ಷಣ್ಮುಖಸ್ವಾಮಿ ಬೆಟ್ಟದ ಮಾದಹಳ್ಳಿ ಆಯ್ಕೆಯಾದರು.
ಗುಂಡ್ಲುಪೇಟೆ ತಾಲೂಕು ಅಧ್ಯಕ್ಷರಾಗಿ ಮಹೇಶ್ ಕಂದೇಗಾಲ, ಹೊಸೂರು ಕಾರ್ಯದರ್ಶಿಯಾಗಿ ಬೆಟ್ಟಹಳ್ಳಿ ಗುರು, ಚಾಮರಾಜನಗರ ತಾಲೂಕು ಅಧ್ಯಕ್ಷರಾಗಿ ಸ್ವಾಮಿನಾಥನ್, ಕಾರ್ಯದರ್ಶಿಯಾಗಿ ಸುಬ್ರಮಣ್ಯ, ಖಜಾಂಚಿಯಾಗಿ ಮಲ್ಲೇಶ್, ಯಳಂದೂರು ತಾಲೂಕು ಅಧ್ಯಕ್ಷರಾಗಿ ವೃಷಭೇಂದ್ರ ಯರಗಂಬಳ್ಳಿ, ಕೊಳ್ಳೇಗಾಲ ತಾಲೂಕು ಅಧ್ಯಕ್ಷರಾಗಿ ಸಿದ್ದರಾಜು, ಹನೂರು ಅಧ್ಯಕ್ಷರಾಗಿ ಚಂಗಡಿ ಕರಿಯಪ್ಪ, ಕಾರ್ಯದರ್ಶಿಯಾಗಿ ಶಾಂತಕುಮಾರ್ ಆಯ್ಕೆಯಾದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಕಟ್ನವಾಡಿ ಡಾ.ಗುರುಪ್ರಸಾದ್ ಮಾತನಾಡಿ, ಅರಣ್ಯಾಧಿಕಾರಿಗಳು ಅರಣ್ಯ ಸಂರಕ್ಷಣೆ ಬಿಟ್ಟು ಉಳಿದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಇಲಾಖೆಯ ಕಾರ್ಯವೈಖರಿಯನ್ನು ಖಂಡಿಸಿದರು.
ಒಂದೆಡೆ ವನ್ಯಜೀವಿಗಳು ಗ್ರಾಮಗಳತ್ತ ಬಂದು ದಾಳಿ ನಡೆಸುತ್ತಿವೆ. ಪುಂಡಾಟ ಆಡುತ್ತಿದ್ದ ಆನೆಯನ್ನು ಸೆರೆಹಿಡಿದು ಕ್ಯಾಂಪಿಗೆ ಬಿಟ್ಟು, ದಸರೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಆನೆಗೆ ಸರಿಯಾಗಿ ಆಹಾರ, ನೀರು ನೀಡದೆ ಅದು ಸಾವಿಗೀಡಾಗಿದೆ. ಅರಣ್ಯದೊಳಗೆ ಹೋಗಿದ್ದ ಯುವಕರನ್ನು ಹಿಡಿದು ಶಿಕ್ಷಿಸುವ ಬದಲು ಗುಂಡಿಕ್ಕುವ ಮೂಲಕ ಕಾನೂನು ಕೈಗೆತ್ತಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿಗೆ ಸಮರ್ಪಕ ಮಳೆ ಬೀಳದೆ ಬರಪೀಡಿತವಾಗಿದ್ದರೂ ಸರ್ಕಾರದಿಂದ ಯಾವುದೇ ನೆರವು ಬಂದಿಲ್ಲ. ಕೃಷಿ ಪಂಪ್‌ಸೆಟ್‌ಗಳಿಗೆ ರಾತ್ರಿ ವೇಳೆ ಕೆಲವೇ ಸಮಯ ತ್ರೀ ಫೇಸ್ ವಿದ್ಯುತ್ ನೀಡುತ್ತಿರುವುದರಿಂದ ರೈತರು ಬೆಳೆದಿರುವ ಬೆಳೆಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ನವೆಂಬರ್ ಬಂದರೂ ತಾಲೂಕಿನ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸದೆ ಬತ್ತಿಹೋಗಿದ್ದು, ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರದ ಯಾವುದೇ ಇಲಾಖೆಯಲ್ಲಿಯೂ ರೈತರಿಗೆ ಅನುಕೂಲವಾಗುತ್ತಿಲ್ಲ. ಕೃಷಿ ಇಲಾಖೆಯಲ್ಲಿ ಟಾರ್ಪಾಲಿನ್ ಸೇರಿದಂತೆ ರೈತರಿಗೆ ಯಾವುದೇ ಸವಲತ್ತುಗಳೂ ದೊರಕುತ್ತಿಲ್ಲ. ಆದ್ದರಿಂದ ರೈತ ಸಂಘ ದೀಪಾವಳಿ ಹಬ್ಬದ ನಂತರ ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ, ಕುಂದಕೆರೆ ಸಂಪತ್ತು, ಹಾಲಹಳ್ಳಿ ಮಹೇಶ್, ಲಿಂಗಸ್ವಾಮಿ ಹೆಗ್ಗೊಠಾರ, ಪುಟ್ಟರಾಜು ಬೂದಂಬಳ್ಳಿ ಮೋಳೆ, ಷಣ್ಮುಖಸ್ವಾಮಿ ಬೆಟ್ಟದಮಾದಹಳ್ಳಿ ಮತ್ತಿತರರಿದ್ದರು.