

ಹೊಸನಗರ: ನಗರ ಹೋಬಳಿಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಗೆ ನಿಟ್ಟೂರು ಸಮೀಪದ ಮಡೋಡಿ ಸೇತುವೆ ಪಕ್ಕದ ಮಣ್ಣು ಭಾರಿ ಪ್ರಮಾಣದಲ್ಲಿ ಕೊಚ್ಚಿ ಹೋಗುತ್ತಿದೆ. ಸೇತುವೆ ಪಕ್ಕದಲ್ಲೇ ಮಣ್ಣು ಕೊಚ್ಚಿ ಹೋಗಿ ಕುಸಿತ ಕಂಡು ಬಂದಿದ್ದು ಸಂಚಾರ ಭೀತಿ ಎದುರಾಗಿದೆ.
ರಾಣೇಬೆನ್ನೂರು- ಬೈಂದೂರು 766ಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಮಡೋಡಿ ಸೇತುವೆ ಪಕ್ಕದ ರಸ್ತೆ 4 ವರ್ಷದ ಹಿಂದೆ ಮಳೆಗೆ ಕೊಚ್ಚಿಹೋಗಿತ್ತು. ನಂತರ ಸೇತುವೆಪೂರ್ಣ ಪ್ರಮಾಣದಲ್ಲಿ ಕುಸಿತಕ್ಕೆ ಒಳಗಾಗಿ ಸಂಚಾರ ನಿಷೇಧವಾಗಿತ್ತು. ನಂತರದಲ್ಲಿ ಹೊಸ ಸೇತುವೆ ನಿರ್ಮಾಣವಾಗಿದೆ. ಹೊಸದಾಗಿ ರಸ್ತೆ ನಿರ್ಮಾಣ ಕೂಡ ಮಾಡಲಾಗಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಮಡೋಡಿ ಹೊಳೆ ತುಂಬಿ ಹರಿಯುತ್ತಿದ್ದು ಸೇತುವೆ ಇಕ್ಕೆಲಗಳ ಮಣ್ಣು ಭಾರಿ ಪ್ರಮಾಣದಲ್ಲಿ ಕೊಚ್ಚಿ ಹೋಗುತ್ತಿದ್ದು ಭಯದ ವಾತಾವರಣ ಸೃಷ್ಟಿಯಾಗಿದೆ.
ಕಳೆದ ಮೂರು ವರ್ಷದಿಂದಲೂ ಹೊಸ ಕಾಮಗಾರಿ ನಡೆಯುತ್ತಲೇ ಇದೆ. ಇದೀಗ ಹೊಸ ಸೇತುವೆ ಕೂಡ ನಿರ್ಮಾಣವಾಗಿದೆ. ಆದರೆ ಸೈಡ್ ವಾಲ್, ಪಿಚ್ಚಿಂಗ್ ಕಟ್ಟದ ಹಿನ್ನೆಲೆಯಲ್ಲಿ ಮಣ್ಣು ಸಲೀಸಾಗಿ ಹೊಳೆ ಸೇರುತ್ತಿದೆ. ಇದೇ ಮಾರ್ಗ ಚಿಕ್ಕಪೇಟೆ ಸೇತುವೆಯ ಪಿಚ್ಚಿಂಗ್ ಕುಸಿತ ಬೆನ್ನಲ್ಲೇ ಮಡೋಡಿ ಸ್ಥಿತಿ ಕೂಡ ಇದೇ ರೀತಿಯಾಗಿದೆ.
ರಾಣೇಬೆನ್ನೂರು- ಬೈಂದೂರು ಹೆದ್ದಾರಿಯಲ್ಲಿ ಬರುವ ನಾಗೋಡಿ ತಡೆಗೋಡೆ, ಮಡೋಡಿ ರಸ್ತೆ, ಚಿಕ್ಕಪೇಟೆ ಸೇತುವೆ ಸೇರಿದಂತೆ ಬಹುತೇಕ ಕಾಮಗಾರಿಗಳಿ ಒಂದಿಲ್ಲೊಂದು ಅವಾಂತರ ಸೃಷ್ಟಿ ಮಾಡುತ್ತಿದ್ದು ಕಾಮಗಾರಿಯ ಮೇಲೆಯೇ ಅನುಮಾನ ಮೂಡುತ್ತಿದೆ. ಈ ಭಾಗದಲ್ಲಿ ವ್ಯಾಪಕ ಮಳೆಯಿಂದ ಆಗುತ್ತಿರುವ ತೊಂದರೆಯ ಬಗ್ಗೆ ಅರಿವಿದ್ದರೂ ಕಾಮಗಾರಿಯಲ್ಲಿ ಮುಂಜಾಗ್ರತಾ ಕ್ರಮ ಅಳವಡಿಸಿಕೊಳ್ಳದಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಚಾರಕ್ಕೆ ಭಂಗ ಆಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರಾದ ನಾಗರಾಜ್, ಮಣಿ, ವಿಜಯ್, ಮಡೋಡಿ, ಸಂಪೇಕಟ್ಟೆ, ನಿಟ್ಟೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಶ್ರೀಕ್ಷೇತ್ರ ಕೊಲ್ಲೂರು, ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ, ಕೊಡಚಾದ್ರಿ, ಉತ್ತರ ಕನ್ನಡ, ದಕ್ಷಿಣ ಕನ್ನಡಗಳ ಸಂಪರ್ಕದ ಪ್ರಮುಖ ಮಾರ್ಗ ಇದಾಗಿದೆ. ಈ ಹಿಂದೆ ಸೇತುವೆ ಕುಸಿತ ಕಂಡಾಗ ಬದಲಿ ರಸ್ತೆಯಲ್ಲಿ ಸಂಚಾರಕ್ಕೆ ಅನುವು ನೀಡಲಾಗಿತ್ತು. ಇದರಿಂದಾಗಿ ಮಡೋಡಿ- ಮತ್ತಿಕೈ ರಸ್ತೆ ಕೂಡ ಹದಗೆಟ್ಟು ಗ್ರಾಮಸ್ಥರ ಆಕ್ರೋಶಕ್ಕೆ ತುತ್ತಾಗಿತ್ತು. ಈಗ ಮತ್ತೆ ಅದೇ ಪರಿಸ್ಥಿತಿ ಎದುರಾಗಿದ್ದು ಸಂಚಾರದ ಆತಂಕ ಎದುರಾಗಿದೆ.