

ಚಿತ್ರದುರ್ಗ: ನಗರದಲ್ಲಿ ನಾಳೆ (ಅ.13ರಂದು) ನಡೆಯಲಿರುವ ರಾಜವೀರ ಮದಕರಿ ನಾಯಕ ಜಯಂತ್ಯುತ್ಸವದಲ್ಲಿ ಎಲ್ಲ ಸಮುದಾಯದ ಜನರು ಪಾಲ್ಗೊಂಡು ಯಶಸ್ಸಿಗೆ ಸಹಕರಿಸುವಂತೆ ನಾಯಕ ಸಂಘದ ತಾಲೂಕಾಧ್ಯಕ್ಷ ಬಿ.ಕಾಂತರಾಜ್ ಮನವಿ ಮಾಡಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ಸವದ ಅಂಗವಾಗಿ ಅಂದು ಕನಕ ವೃತ್ತದಿಂದ ಮದಕರಿ ನಾಯಕ ವೃತ್ತದವರೆಗೆ ಮೆರವಣಿಗೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಚಾಲನೆ ನೀಡುವರು. ಸಚಿವರು, ಶಾಸಕರು, ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು.
ಮದಕರಿ ನಾಯಕ ಸೇರಿ ಮಹನೀಯರ ಪ್ರತಿಮೆಗಳನ್ನು ಅಂದು ವಿಶೇಷವಾಗಿ ಅಲಂಕರಿಸಲಾಗುವುದು. ಉತ್ಸವಕ್ಕೆ ನಮ್ಮನ್ನು ಕರೆದಿಲ್ಲವೆಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮದಕರಿ ನಾಯಕ ವಾಲ್ಮೀಕಿ ಸಮಾಜಕ್ಕಷ್ಟೇ ಸೀಮಿತವಲ್ಲ. ಎಲ್ಲ ಸಮಾಜದವರು ಭಾಗವಹಿಸುವಂತೆ ಈಗಾಗಲೇ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ವೈಯಕ್ತಿಕವಾಗಿ ಆಹ್ವಾನಿಸಲು ಇದು ಖಾಸಗಿ ಕಾರ್ಯಕ್ರಮವಲ್ಲ. ಅಸಮಾಧಾನ ಬಿಟ್ಟು ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು.
ಮದಕರಿ ನಾಯಕನ ನೂತನ ಭಾವಚಿತ್ರವನ್ನು ಮುಖಂಡರು ಇದೇ ವೇಳೆ ಬಿಡುಗಡೆಗೊಳಿಸಿದರು. ಸಂಘದ ಜಿಲ್ಲಾಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ, ಮುಖಂಡರಾದ ಗೋಪಾಲಸ್ವಾಮಿ ನಾಯಕ, ಕಾಟೀಹಳ್ಳಿ ಕರಿಯಪ್ಪ, ಸೋಮೇಂದ್ರ, ಕೇಶವಮೂರ್ತಿ ಇದ್ದರು.