ಯಶಸ್ವಿಯಾಗಲು ಅಗತ್ಯ ದೇವರ ಅನುಗ್ರಹ - ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ

PTR_19 OCT_1
Published on


ವಿಟ್ಲ: ಬದುಕಿನಲ್ಲಿ ಯಶಸ್ಸು ಕೀರ್ತಿಯನ್ನು ಪಡೆಯಲು ಪ್ರಯತ್ನದ ಜತೆಗೆ ದೇವರ ಅನುಗ್ರಹದ ಅಗತ್ಯವಿದೆ. ಭಗವಂತನಿಗೆ ಬೇಕಾದ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ನಮ್ಮ ಮೂಲಕ ಮಾಡಿಸಿಕೊಳ್ಳುತ್ತಾನೆ. ಊರಿನವರೆಲ್ಲರೂ ಸೇರಿ ಕೃಷ್ಣನ ಸನ್ನಿಧಾನದ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿದ್ದು, ವಿಘ್ನಗಳೆಲ್ಲವನ್ನೂ ನಿವಾರಿಸಿ ಕೆಲಸ ಕಾರ್ಯ ನಡೆದು ಎಲ್ಲರಿಗೂ ಅನುಗ್ರಹಿಸುವಂತಾಗಲಿ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಸಹಯೋಗದಲ್ಲಿ ದ್ವಾದಶಾಕ್ಷರೀಮಂತ್ರದ ಪಂಚ ಲಕ್ಷ ಪಠಣ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಶಾರದಾ ವಿಹಾರದ ಶಾರದಾ ಮಂಟಪದಲ್ಲಿಂದ ಶ್ರೀಗಳನ್ನು ವಿದ್ಯಾರ್ಥಿಗಳ ಸಾಯಿ ಸಿಂಫೋನಿ ಬ್ಯಾಂಡ್ ಸೆಟ್‌ನಲ್ಲಿ ಸ್ವಾಗತಿಸಿ ದೇವಸ್ಥಾನದ ಆವರಣದವರೆಗೆ ವಿದ್ಯಾರ್ಥಿಗಳ ಕುಣಿತ ಭಜನೆ ಮೂಲಕ ಕರೆತರಲಾಯಿತು. ದೇವಸ್ಥಾನದಲ್ಲಿ ವಿದ್ಯಾರ್ಥಿಗಳ ವೇದ ಪಠಣ ಮತ್ತು ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು.

ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಸ್.ಕೃಷ್ಣ ಭಟ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಮಹೇಶ್ ಮಡಿಯಾಲ, ಆರ್ಥಿಕ ಸಮಿತಿ ಸಂಚಾಲಕ ಸತೀಶ್ ಆಳ್ವ, ಕಾರ್ಯಾಧ್ಯಕ್ಷ ಗೋವಿಂದ ಪ್ರಕಾಶ್ ವಧ್ವ, ಕಾರ್ಯದರ್ಶಿ ಭಾಸ್ಕರ ಮಡಿಯಾಲ, ಸಂಚಾಲಕ ಕಾನ ಈಶ್ವರ ಭಟ್, ರೂಪೇಶ್ ರೈ ಮತ್ತಿತರರು ಉಪಸ್ಥಿತರಿದ್ದರು.


ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೋಶಾಧಿಕಾರಿ ಎ.ಪಿ. ಜಯರಾಮ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


ದ್ವಾದಶಾಕ್ಷರೀಮಂತ್ರ ಪಠಣ ಕಾರ್ಯಕ್ರಮಕ್ಕೆ ಚಾಲನೆ:
ಬೆಳಗ್ಗಿನ ಜಾವ ದ್ವಾದಶಾಕ್ಷರೀಮಂತ್ರದ ಪಂಚ ಲಕ್ಷ ಪಠಣ ಕಾರ್ಯಕ್ರಮಕ್ಕೆ ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಚಾಲನೆ ನೀಡಿದರು. ಅಳಿಕೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಘು ಟಿ. ವೈ., ಅಣ್ಣು ಕುಲಾಲ್ ಚೆಂಡುಕಳ, ಆನೆಪದವು ಮಹಾಮಾಯಿ ಭಜನಾ ಮಂದಿರದ ಗೋಪಾಲಕೃಷ್ಣ, ಸದಾಶಿವ ಶಾರದಾ ವಿಹಾರ, ಸದಾಶಿವ ಶೆಟ್ಟಿ ಎಂ., ಬಾಲಕೃಷ್ಣ ಪೂಜಾರಿ ಸಣ್ಣಗುತ್ತು, ಚಂದ್ರಶೇಖರ ಮಡಿಯಾಲ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net