

ಹುಬ್ಬಳ್ಳಿ: ವಾಯುಪುತ್ರ ಸ್ಪೋರ್ಟ್ಸ್ ಫೌಂಡೇಷನ್ ಮತ್ತು ಶ್ರೀ ಶಂಕ್ರಣ್ಣ ಕಲ್ಲಪ್ಪ ಚಿಲ್ಲಣ್ಣವರ ಆಶ್ರಯದಲ್ಲಿ ದೆಹಲಿ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಆಯ್ಕೆಯಾದ ಮಡಿವಾಳೇಶ ಅಶೋಕ ಚಿಲ್ಲಣ್ಣವರ ಅವರಿಂದ ಗುರುವಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಅಶೋಕ ಚಿಲ್ಲಣ್ಣವರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಉಣಕಲ್ನ ಕಲ್ಮೇಶ್ವರ ಓಣಿಯ ಶ್ರೀ ಕಲ್ಮೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಆ. 12ರಂದು ಮಧ್ಯಾಹ್ನ 12 ಗಂಟೆಗೆ ಈ ಸಮಾರಂಭವು ಜರುಗಲಿದೆ ಎಂದರು.
ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಶ್ರೀನಿವಾಸ ಶಾಸ್ತ್ರಿ ಮಾತನಾಡಿ, ಇದು ಧಾರವಾಡಕ್ಕೆ ಖುಷಿ ತಂದಿದೆ. ಮುಂದೊಂದು ದಿನ ಈ ಹುಡುಗ ಒಲಿಪಿಂಕ್ನಲ್ಲಿ ಪದಕ ಪಡೆದೇ ಪಡೆಯುತ್ತಾನೆ ಎಂದು ವಿಶ್ವಾಸದ ನುಡಿಗಳನ್ನಾಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯದ್ಭುತ ಪ್ರತಿಭೆಗಳಿವೆ. ಇವರ ತಯಾರಿಗೆ ಕ್ರೀಡಾ ವಿಶ್ವವಿದ್ಯಾಲಯ ಅಗತ್ಯ. ಈ ನಿಟ್ಟಿನಲ್ಲಿ ಮಣಿಪುರದಲ್ಲಿರುವ ಕೇಂದ್ರ ಕ್ರೀಡಾ ವಿಶ್ವವಿದ್ಯಾಲಯದ ಒಂದು ಶಾಖೆಯನ್ನು ಧಾರವಾಡದಲ್ಲಿ ಆರಂಭಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಧನಾತ್ಮಕ ಚಿಂತನೆ ಮಾಡಬೇಕು ಎಂದು ವಿನಂತಿಸಿದರು.
ಪ್ರಮುಖರಾದ ಸಂತೋಷ ಇಂಚಲ, ಸಿದ್ದು ಮಾಯಣ್ಣವರ, ಸುರೇಶ ಬಾಗಮ್ಮನವರ ಸುದ್ದಿಗೋಷ್ಠಿಯಲ್ಲಿದ್ದರು.