

ಆನವಟ್ಟಿ: ರಾಜು ತಲ್ಲೂರು ಅವರು ಏಕಮುಖವಾಗಿ ಒಂದು ಪಕ್ಷದ ಪರ ಸಮಾಜವಿದೆ ಎನ್ನುವಂತೆ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಮಡಿವಾಳ ಸಮಾಜದ ಮುಖಂಡರು ಹೇಳಿದರು.
ಆನವಟ್ಟಿಯಲ್ಲಿ ತಾಲೂಕು ಮಡಿವಾಳ ಸಮಾಜದ ಸಭೆಯಲ್ಲಿ ಮಾತನಾಡಿದ ಶಿವಶರಣ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಪಿ.ಹನುಮಂತಪ್ಪ ಹೊಸಳ್ಳಿ, ಮಾಜಿ ಸಿಎಂ ಎಸ್.ಬಂಗಾರಪ್ಪ ಜಿಲ್ಲಾ ಸಂಘಕ್ಕೆ ನಿವೇಶನ ಹಾಗೂ ತಾಲೂಕು ಮಡಿವಾಳರಿಗೆ ಸಮುದಾಯ ಭವನ ಮಂಜೂರು ಮಾಡಿದ್ದರು. ಸಚಿವ ಮಧು ಬಂಗಾರಪ್ಪ ಆನವಟ್ಟಿ ಸಮುದಾಯ ಭವನಕ್ಕೆ 50 ಲಕ್ಷ ರೂ. ಅನುದಾನ ನೀಡಿದ್ದಾರೆ. ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಮಾಚಿದೇವರ ಜಯಂತಿ ಪ್ರಾರಂಭಿಸಿದರು. ನಿಗಮ-ಮಂಡಳಿ ಸ್ಥಾಪನೆ ಮಾಡಿ ಮಡಿವಾಳ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಮಡಿವಾಳ ಸಮಾಜಕ್ಕೆ ಯಾವ ಪಕ್ಷದವರು ಹೆಚ್ಚು ಕೊಡುಗೆ ನೀಡಿದ್ದಾರೆಂಬುದು ಸಮಾಜದ ಪ್ರತಿಯೊಬ್ಬರಿಗೂ ಗೊತ್ತು. ಯಾವ ಪಕ್ಷ ಬೆಂಬಲಿಸಬೇಕು ಎಂಬುದು ಅವರವರ ವೈಯಕ್ತಿಕ ಅಭಿಪ್ರಾಯ ಎಂದು ಮಾಚಿದೇವ ಸಂಘದ ಕಾರ್ಯದರ್ಶಿ ಅಶ್ವಿನ್‌ಕುಮಾರ್ ಹೇಳಿದರು.
ತಾಲೂಕು ಸಂಘದ ಉಪಾಧ್ಯಕ್ಷ ಶಿವಾನಂದಪ್ಪ ಮೂಗೂರು, ಕಾರ್ಯದರ್ಶಿ ಹನುಮಂತಪ್ಪ ನೇರಲಗಿ, ನಿರ್ದೇಶಕರಾದ ಪರಶುರಾಮಪ್ಪ ಕೊಡಳ್ಳಿ, ರಾಜಶೇಖರಪ್ಪ ಆನವಟ್ಟಿ, ಮುಖಂಡರಾದ ರಘುಪತಿ, ಮಂಜಪ್ಪ ಮೇಸ್ಟ್ರು ಕುಬಟೂರು, ಬಸವರಾಜಪ್ಪ ಮೇಸ್ಟ್ರು ಇದ್ದರು.