

ಹನೂರು: ಮಡಿವಾಳ ಮಾಚಿದೇವರು ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಪಾಲಿಸುವುದರ ಮೂಲಕ ಸಮಾಜಕ್ಕೆ ಶುದ್ಧ ಕಾಯಕದ ಮಹತ್ವವನ್ನು ತಿಳಿಸಿಕೊಟ್ಟ ಮಹಾನ್ ಶಿವಶರಣ. ಪ್ರತಿಯೊಬ್ಬರೂ ಅವರ ಆದರ್ಶ ಪಾಲಿಸಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಸಭಾಂಗಣದಲ್ಲಿ ಗುರುವಾರ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
12ನೇ ಶತಮಾನದಲ್ಲಿ ಬಡ ಹಾಗೂ ಕೆಳ ವರ್ಗದ ಜನರು ಜಾತೀಯತೆ, ಅಸ್ಪಶ್ಯತೆ, ದುರ್ಬಲರ ಶೋಷಣೆ, ಮೂಢನಂಬಿಕೆ ಹಾಗೂ ಶಿಕ್ಷಣದಲ್ಲಿ ಅವಕಾಶ ಸಿಗದೆ ಅಸಮಾನತೆಯಿಂದ ತುಳಿತಕ್ಕೆ ಒಳಗಾಗಿದ್ದರು. ಸಮಾಜದಲ್ಲಿ ಅಸಮಾನತೆ ತೊಲಗಿಸಲು ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಇವರಲ್ಲಿ ಮಡಿವಾಳ ಮಾಚಿದೇವರು ಅಗ್ರಗಣ್ಯ ಸ್ಥಾನದಲ್ಲಿ ಒಬ್ಬರೆನಿಸಿದ್ದಾರೆ. ಇವರು ಕಾಯಕನಿಷ್ಠೆಗೆ ಹೆಚ್ಚಿನ ಒತ್ತು ನೀಡಿದ್ದರು. ಶೋಷಿತ ವರ್ಗದ ಏಳಿಗೆಗೆ ಶ್ರಮಿಸಿದ್ದರು. ಇವರು ರಚಿಸಿದ ವಚನಗಳು ಉತ್ತಮ ಸಮಾಜಕ್ಕೆ ದಾರಿದೀಪವಾಗಿವೆ. ಈ ದಿಸೆಯಲ್ಲಿ ಸಮುದಾಯದ ಜನರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದರ ಜತೆಗೆ ಸಂಘಟಿತರಾಗಬೇಕಿದೆ. ಆಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಬಿಇಒ ಎಂ.ಶಿವರಾಜು ಮಾತನಾಡಿ, ಮಡಿವಾಳ ಮಾಚಿದೇವರು ಕಾಯಕದಲ್ಲಿ ನಿಷ್ಕಲ್ಮಶ ಹಾಗೂ ಪರಿಶುದ್ಧತೆ ಇರಬೇಕು ಎಂದು ಸಮಾಜಕ್ಕೆ ತೋರಿಸಿಕೊಟ್ಟರು. ಪ್ರತಿಯೊಬ್ಬರೂ ಇವರ ವಚಗಳನ್ನು ಓದುವುದರ ಮೂಲಕ ಆದರ್ಶಗಳನ್ನು ಪಾಲಿಸಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಎಸ್ಸಿಗೆ ಸೇರಿಸಿ: ಶ್ರೀ ವೀರ ಮಡಿವಾಳ ಸಂಘದ ತಾಲೂಕು ಅಧ್ಯಕ್ಷ ವಿಜಯ್ ಮಾತನಾಡಿ, ತಾಲೂಕಿನಲ್ಲಿ ಮಡಿವಾಳ ಸಮುದಾಯಕ್ಕೆ ಸೇರಿದ ಸುಮಾರು 4 ಸಾವಿರ ಜನರಿದ್ದಾರೆ. ಸಮುದಾಯ ಭವನವಿಲ್ಲದೆ ಸಭೆ, ಸಮಾರಂಭ, ಮದುವೆ ಹಾಗೂ ಇನ್ನಿತರ ಕಾರ್ಯಗಳನ್ನು ಕೈಗೊಳ್ಳಲು ತುಂಬ ತೊಂದರೆ ಅನುಭವಿಸುವಂತಾಗಿದೆ. ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ 2014ರಿಂದಲೂ ಹೋರಾಟ ಮಾಡಲಾಗುತ್ತಿದೆ. ಆದರೆ ಈವರೆಗೂ ಸಾಧ್ಯವಾಗಿಲ್ಲ. ಈ ಬಗ್ಗೆ ಧ್ವನಿ ಎತ್ತುವುದರ ಮೂಲಕ ಸಮುದಾಯಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಪಟ್ಟಣದಲ್ಲಿ ಸಮುದಾಯಕ್ಕೆ ಸೇರಿದ ನಿವೇಶನದಲ್ಲಿ ಸಮುದಾಯ ಭವನ ನಿರ್ಮಿಸಿಕೊಡಲಾಗುವುದು. ಈ ಸಂಬಂಧ ಕ್ರಿಯಾಯೋಜನೆ ಸಲ್ಲಿಸಿ ವರದಿ ಸಲ್ಲಿಸುವಂತೆ ತಿಳಿಸಿದರು. ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ, ಮುಖಂಡರಾದ ರಮೇಶ, ಶಿವಶಂಕರ್, ರಾಜಣ್ಣ, ರಾಚಪ್ಪಶೆಟ್ಟಿ, ಕೆಂಪಶೆಟ್ಟಿ, ಬಸವರಾಜು, ನಂದೀಶ್, ಸಿದ್ದರಾಜು, ಶಾಂತರಾಜು, ಗ್ರಾಮ ಆಡಳಿತ ಅಧಿಕಾರಿಗಳಾದ ಶೇಷಣ್ಣ, ಕಾವ್ಯಾ ಇನ್ನಿತರರು ಇದ್ದರು.