

ಮದ್ದೂರು: ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶ್ರೀ ವೀರ ಮಡಿವಾಳ ಮಾಚಿದೇವರ ಸಂಘ ವತಿಯಿಂದ ಫೆ.26ರಂದು ಮಡಿವಾಳ ಮಾಚಿದೇವರ 5ನೇ ವರ್ಷದ ಜಯಂತಿ ಹಾಗೂ ಶಾಸಕ ಕೆ.ಎಂ.ಉದಯ್ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಬೆಟ್ಟರಾಜು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಂಘದ ಪದಾಧಿಕಾರಿಗಳು ನಿರ್ಧರಿಸಿದ್ದಾರೆ. ಅಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಶ್ರೀ ಉಗ್ರ ನರಸಿಂಹಸ್ವಾಮಿ ದೇಗುಲ ಆವರಣದಿಂದ ತೆರೆದ ವಾಹನದಲ್ಲಿ ಮಡಿವಾಳ ಮಾಚಿದೇವರ ಮೂರ್ತಿಯನ್ನು ವಿವಿಧ ಜಾನಪದ ಕಲಾಪ್ರಕಾರಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಗುವುದು ಎಂದು ಹೇಳಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಕೆಂಗೇರಿ ಗುರುಪೀಠದ ಶ್ರೀ ಯೋಗಾನಂದಪುರಿ ಸ್ವಾಮೀಜಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಕೆ.ಎಂ.ಉದಯ್ ವಹಿಸಲಿದ್ದು, ಮಡಿವಾಳ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ಭಾಗವಹಿಸಲಿದ್ದಾರೆ ಎಂದರು. ಸಂಘದ ಗೌರವಾಧ್ಯಕ್ಷ ಚನ್ನವೀರಯ್ಯ, ಉಪಾಧ್ಯಕ್ಷರಾದ ಸಿ.ಎಚ್.ಶಂಕರ್, ಸಿ.ಬೆಟ್ಟಯ್ಯ, ಜಯರಾಮು, ಖಜಾಂಚಿ ಕೆ.ಉಮಾಶಂಕರ್, ಕಾರ್ಯದರ್ಶಿ ಬಿ.ಪಿ.ಆನಂದ , ಗಿರಿಜಮ್ಮ, ಬಸವರಾಜು, ಎಸ್.ಮಹೇಶ್ ಇದ್ದರು.