

ಮೈಸೂರು: ಹನ್ನೆರಡನೇ ಶತಮಾನದಲ್ಲಿ ಸಮಾಜದಲ್ಲಿ ಸಮಾನತೆ ತರುವ ಸಲುವಾಗಿ ಹೋರಾಡಿದ ವೀರರಲ್ಲಿ ಶ್ರೀ ಮಡಿವಾಳ ಮಾಚಿದೇವರು ಒಬ್ಬರು ಎಂದು ಮೈಲ್ಯಾಕ್ ಅಧ್ಯಕ್ಷ ಕೌಟಿಲ್ಯ ರಘು ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಮಡಿವಾಳ ಮಾಚಿ ದೇವರ ಜಯಂತಿಯಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಶೋಷಣೆ, ಜಾತೀಯತೆ, ಶಿಕ್ಷಣ, ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಆ ವೇಳೆ ಮಡಿವಾಳ ಮಾಚಿದೇವರು ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದರು ಎಂದರು.
ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಮಾತನಾಡಿ, ಸಣ್ಣ ಸಮಾಜಗಳನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ತರಬೇಕು. ಹಿಂದುಳಿದ ವರ್ಗಗಳನ್ನು ಒಟ್ಟುಗೂಡಿಸುವ ಮುಖೇನ ತೀರ ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಮೇಯರ್ ಶಿವಕುಮಾರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಜೋಗಿ ಮಂಜು, ನಗರ ಪ್ರಧಾನ ಕಾರ್ಯದರ್ಶಿ ವಾಣೀಶ್ ಕುಮಾರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾ ನಂದೀಶ್, ಮುಖಂಡರಾದ ಗಿರಿಧರ್, ಗೋಪಾಲ್, ಮಣಿರತ್ನಂ, ಶಂಕರ್ ಇತರರಿದ್ದರು.