ವಚನದೊಂದಿಗೆ ಮೌಢ್ಯದ ವಿರುದ್ಧ ಜಾಗೃತಿ ಮೂಡಿಸಿದ ಮಡಿವಾಳ ಮಾಚಿದೇವರು: ಜಿಪಂ ಸಹಾಯಕ ಕಾರ್ಯದರ್ಶಿ ರವೀಂದ್ರ ಹೇಳಿಕೆ

Madiwala Machideva Jayanti mandya
Published on

ಮಂಡ್ಯ: ಬಸವಣ್ಣನವರ ಸಮಕಾಲೀನವರಾದ ಮಡಿವಾಳ ಮಾಚಿದೇವರು 12ನೇ ಶತಮಾನದ ಸಮಾಜದಲ್ಲಿದ್ದ ಮೌಢ್ಯಗಳ ಕುರಿತು ವಚನದ ಮೂಲಕ ಅರಿವು ಮೂಡಿಸಿದರು ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ(ಅಭಿವೃದ್ಧಿ) ರವೀಂದ್ರ ಹೇಳಿದರು.

ನಗರದ ಗಾಂಧಿಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಶ್ರೇಷ್ಟ ವಚನಕಾರರ ಜಯಂತಿಗಳನ್ನು ಆಚರಿಸುತ್ತಾ ಬಂದಿರುವುದು ಬಹಳ ಸಂತೋಷದ ವಿಷಯವಾಗಿದೆ. ವಚನಕಾರರ ವಚನಗಳು ಪ್ರಸ್ತುತ ಸಮಾಜದಲ್ಲಿ ಜನ ಸಾಮಾನ್ಯರ ಧ್ವನಿಯಾಗಿದೆ. ಮಡಿವಾಳ ಮಾಚಿದೇವರ ಬಗ್ಗೆ ಅರಿತು ಅವರ ತತ್ವ ಹಾಗೂ ಆದರ್ಶಗಳನ್ನು ಪಾಲಿಸಬೇಕು. ಮಡಿವಾಳ ಮಾಚಿದೇವರು ಯಾವುದೇ ಒಂದು ವರ್ಗಕ್ಕೆ ಸೀಮಿತವಲ್ಲ. ಅವರ ವಚನಗಳು ಅಂದಿನ ಸಮಾಜದ ಎಲ್ಲ ಶೋಷಿತ ವರ್ಗದ ಪರವಾಗಿದ್ದವು. ಅವರ ಸಾಮಾಜಿಕ ಚಿಂತನೆಗಳು ಇಂದಿನ ಯುವಕರಿಗೆ ಮಾದರಿಯಾಗಲಿ ಎಂದು ಹೇಳಿದರು.

ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್ ಮಾತನಾಡಿ, ಮಡಿವಾಳ ಮಾಚಿದೇವರು ಸಮಾಜದ ಬಗ್ಗೆ ಅಧ್ಯಯನ ನಡೆಸಿ 354ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. 12ನೇ ಶತಮಾನದಲ್ಲಿ ಸಮಾಜದ ದುರ್ಬಲರು, ಶೋಷಿತರು, ಶಿಕ್ಷಣ ವಂಚಿತರ ಬಗ್ಗೆ ತಮ್ಮ ವಚನದಲ್ಲಿ ತಿಳಿಸಿದ್ದಾರೆ ಎಂದರು.

ಮಡಿವಾಳ ಮಾಚಿದೇವರು ಶರಣರ ಬಟ್ಟೆಗಳನ್ನು ಶುಚಿಮಾಡುವುದನ್ನು ತಮ್ಮ ಕಾಯಕವಾಗಿ ಸ್ವೀಕರಿಸಿದ್ದರು. ಜತೆಗೆ ಸಮಾಜದಲ್ಲಿದ್ದ ಮೌಡ್ಯಗಳನ್ನು ಶುಚಿಮಾಡುವ ಕಾಯಕದಲ್ಲಿ ತೊಡಗಿದ್ದರು. ಕೆಲಸದಲ್ಲಿ ಯಾವುದೇ ಕೀಳರಿಮೆ ಭಾವನೆಯಿಲ್ಲದೆ, ಯಾವುದೇ ಕೆಲಸವಾದರೂ ಶ್ರದ್ಧೆ, ನಿಷ್ಟೆಯಿಂದ ಮಾಡುತ್ತಿದ್ದರು. ಬಸವಣ್ಣನವರ ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದಾಗಿದ್ದು, ಸಮಾಜದ ವಿವಿಧ ಭಾಗಗಳಿಂದ ಕಲ್ಯಾಣಕ್ಕೆ ಬರುವವರೆಗೆ ಮಡಿ ಹಾಸಿ ಸ್ವಾಗತಿಸುವ ಕೆಲಸ ಅವರದ್ದಾಗಿತ್ತು. ಇಂದಿನ ಸಮಾಜವು ಮಾಚಿದೇವರ ಸಾಧನೆ, ಕೊಡುಗೆ, ಮಹತ್ವವನ್ನು ಸ್ಮರಿಸಬೇಕು ಎಂದು ಹೇಳಿದರು.

ನಗರಸಭೆ ಸದಸ್ಯ ನಾಗೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಉದಯಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net