ಮಡಿವಾಳ ಮಾಚಿದೇವರ ಪರಾಕ್ರಮ ಮಾದರಿ

2 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶರಣ ಕ್ರಾಂತಿಯ ಪ್ರಮುಖರಾಗಿ ಗುರುತಿಸಿಕೊಂಡ ಮಡಿವಾಳ ಮಾಚಿದೇವರು ಬಸವನಿಷ್ಠರು. ಅವರ ಭಕ್ತಿ, ಪರಾಕ್ರಮಗಳು ಇತರರಿಗೆ ಮಾದರಿಯಾಗಿದ್ದವು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.

ನಗರದ ಆಲೂರು ವೆಂಕಟರಾವ್​ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನದ ಶರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬರು. ಮಡಿವಾಳ ಮಾಚಿದೇವರು ಹಿಮಾಲಯದಷ್ಟು ಅಚಲರಾದವರು. ದೃಢ ನಿರ್ಧಾರ ಹೊಂದಿದವರು. ಕನ್ನಡ ನಾಡಿಗೆ ಹೊಸ ಭರವಸೆ, ಸಾಮಾಜಿಕ ಬದಲಾವಣೆ ಮೂಡಿಸಿದ್ದ ಶಿವಶರಣರ ವಚನಗಳನ್ನು ಮಕ್ಕಳು ಪಠಣೆ ಮಾಡಿ, ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಜೀವನ ಮಾರ್ಗ ತೊರಿಸುವ ವಚನಗಳು ಮುಂದಿನ ಪೀಳಿಗೆಯವರಿಗೆ ಹಸ್ತಾಂತರವಾಗಬೇಕು. ಈ ನಿಟ್ಟಿನಲ್ಲಿ ಕ್ರಿಯಾತ್ಮಕವಾದ ಕಾರ್ಯಗಳು ಆಗಬೇಕು ಎಂದರು.

ಜನರಲ್ಲಿ ನಮ್ಮ ರಾಜ್ಯ ಮತ್ತು ರಾಷ್ಟ್ರದ ಸಾಮಾಜಿಕ, ಧಾರ್ಮಿಕ ವೈವಿಧ್ಯತೆ, ಭಾವೈಕ್ಯತೆ ಮತ್ತು ಸಹಿಷ್ಣುತೆಯನ್ನು ಮೂಡಿಸಲು ಅನೇಕ ಮಹಾತ್ಮರ, ಶರಣರ ಜಯಂತಿ ಆಚರಿಸಲಾಗುತ್ತಿದೆ. ಶರಣರ ಸಂದೇಶಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸವಾಗಬೇಕು ಎಂದರು.

ಸಂಶೋಧಕ ಡಾ. ಬಾಳಪ್ಪ ಈರಪ್ಪ ಚಿನಗುಡಿ ವಿಶೇಷ ಉಪನ್ಯಾಸ ನೀಡಿದರು. ಶ್ರೀ ಬಸವಾನಂದ ಸ್ವಾಮೀಜಿ, ಪಾಲಿಕೆ ಸದಸ್ಯೆ ಅನಿತಾ ಚಳಗೇರಿ, ವೈ.ಡಿ. ನವಲಗುಂದ, ಮಡಿವಾಳಪ್ಪ ಮಡಿವಾಳರ, ಯಲ್ಲಪ್ಪ ಬೆಂಡಿಗೇರಿ, ಪದಾಧಿಕಾರಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net