ಜಾತಿ ಗಣತಿ ವರದಿ ಜಾರಿಗೆ ಮಡಿವಾಳ ಸಮುದಾಯ ವಿರೋಧ

protest
Published on

ಮೈಸೂರು: ಮಡಿವಾಳ ಸಮುದಾಯದ ಜನಸಂಖ್ಯೆ ಬಗ್ಗೆ ನಿಖರ ಮಾಹಿತಿ ಜಾತಿ ಗಣತಿ ವರದಿಯಲ್ಲಿ ಇರುವ ಸಾಧ್ಯತೆ ಇಲ್ಲದಿರುವುದರಿಂದ ವರದಿ ಜಾರಿಯನ್ನು ವಿರೋಧಿಸುವುದಾಗಿ ಮೈಸೂರು ತಾಲೂಕು ವೀರ ಮಡಿವಾಳರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಕೇಶವ ತಿಳಿಸಿದರು.

ರಾಜ್ಯದಲ್ಲಿ ಸಮುದಾಯದ ಸಂಖ್ಯೆ ಸುಮಾರು 18 ರಿಂದ 20 ಲಕ್ಷ ಇದೆ. ಸಮೀಕ್ಷೆಯನ್ನು ಯಾರು, ಯಾವಾಗ ಮಾಡಿದರು ಎಂಬುದು ನಮ್ಮಂತಹ ಮುಖಂಡರಿಗೇ ಅರಿವಾಗಿಲ್ಲ, ನಮ್ಮ ಮನೆಗಳಿಗೂ ಬಂದಿಲ್ಲ. ಗ್ರಾಮಗಳಲ್ಲಿ ಸಮೀಕ್ಷೆ ಸಮರ್ಪಕವಾಗಿ ನಡೆದಿರಲು ಸಾಧ್ಯವಿಲ್ಲ. ಹೀಗಾಗಿ ಸಿಎಂ ವರದಿ ತಿರಸ್ಕರಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಸಮೀಕ್ಷೆ ವೇಳೆ ಸಮೀಕ್ಷಾಕಾರರು ರಾಜ್ಯದ ಹಲವೆಡೆ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿಲ್ಲ, ಬದಲಿಗೆ ಕುಳಿತಲ್ಲಿಯೇ ಅಂಕಿ-ಅಂಶ ತುಂಬಿದ್ದಾರೆ ಎಂದು ಆಪಾದಿಸಿದರು.

ಪ್ರೊ.ಅನ್ನಪೂರ್ಣಮ್ಮ ಅವರ ವರದಿ ಜಾರಿಗೊಳಿಸಿ ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು. ಈಗಾಗಲೇ ಈ ಕುರಿತು ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಗಮನ ಹರಿಸದಿದ್ದಲ್ಲಿ ಪ್ರತಿಭಟನೆ ಹಾಗೂ ಮುಂಬರುವ ಚುನಾವಣೆ ಬಹಿಷ್ಕಾರದಂತಹ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದೇ ವೇಳೆ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಪದಾಧಿಕಾರಿಗಳಾದ ಎಸ್.ಜೆ.ಪ್ರಶಾಂತ್, ಎಸ್.ಮಾದುರಾಜ್, ದುದ್ದಗೆರೆ ಶಿವಣ್ಣ, ದುದ್ದಗೆರೆ ಜಯರಾಂ, ಬೆಳವಾಡಿ ಮಾದೇವಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net