ಮಡಿವಾಳ ಸಮುದಾಯದ ಏಳಿಗೆಗಾಗಿ ಶ್ರಮಿಸಲು ಜಿಲ್ಲಾ ಆಡಳಿತ ಬದ್ಧ

2-klr-27
Published on

ಕೋಲಾರ: ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿಪಥದತ್ತ ಸಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮಡಿವಾಳ ಸಮುದಾಯಕ್ಕೆ ಸಲಹೆ ನೀಡಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ನಿಂದ ಶನಿವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಉದ್ಘಾಟಿಸಿ ಮಾತನಾಡಿ, ಹಿಂದುಳಿವ ವರ್ಗಕ್ಕೆ ಸೇರಿದ ಮಡಿವಾಳ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿ ತಂದಿದೆ, ಸಮುದಾಯದ ಏಳಿಗೆಗಾಗಿ ಶ್ರಮಿಸಲು ತಾವೂ ಮತ್ತು ಜಿಲ್ಲಾ ಆಡಳಿತ ಬದ್ಧ ಎಂದರು.

ಜಾತಿ ದ್ವೇಷದಿಂದ ಏನ್ನನ್ನೂ ಸಾಧಿಸಲಾಗದು, ಪರಸ್ವರ ಪ್ರೀತಿ-ವಿಶ್ವಾಸ, ನಂಬಿಕೆಯಿಂದ ಬದುಕುವ ಪ್ರವೃತ್ತಿ ರೂಢಿಸಿಕೊಳ್ಳಬೇಕು, ಮಡಿವಾಳ ಮಾಚಿದೇವರು ತಮ್ಮ ವಚನಗಳಲ್ಲಿ ಈ ವಿಚಾರಗಳನ್ನೇ ಪ್ರತಿಪಾದಿಸಿದ್ದಾರೆ, ಪ್ರತಿಯೊಬ್ಬರು ಇವರ ವನಚಗಳನ್ನು ಓದಿಕೊಂಡು ಸೌಹಾರ್ದತೆಯಿಂದ ಹಾಗೂ ಸಾಮರಸ್ಯದಿಂದ ಜೀವಿಸುವುದನ್ನು ಕಲಿಯಬೇಕೆಂದು ತಿಳಿಸಿದರು.

ಉದ್ಯೋಗ ಮೇಳ: ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಇರಬಾರದೆಂಬ ಉದ್ದೇಶದಿಂದ ಫೆ.11-12ರಂದು ಎರಡು ದಿನ ಉದ್ಯೋಗ ಮೇಳ ಆಯೋಜಿಸಲಾಗಿದೆ, ನಿರುದ್ಯೋಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉದ್ಯೋಗ ಸಂಪಾದಿಸಿಕೊಳ್ಳಬೇಕೆಂದು ಕರೆ ನೀಡಿದರು.

ಜಿಪಂ ಅಧ್ಯಕ್ಷ ಸಿ.ಎಸ್ ವೆಂಕಟೇಶ್ ಮಾತನಾಡಿ. ಮಡಿವಾಳರು ಶಿಸ್ತು ಮತ್ತು ಸಮಯ ಪಾಲನೆಗೆ ಹೆಸರಾಗಿದ್ದಾರೆ, ದೋಬಿ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಇತರರಿಗೆ ಮಾದರಿಯಾಗಿದ್ದಾರೆ, ನಾವಿಂದು ಶುದ್ಧವಾದ ಬಟ್ಟೆಗಳನ್ನು ಧರಿಸಲು ಮಡಿವಾಳ ಸಮುದಾಯವೇ ಕಾರಣ ಎಂದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ಮಡಿವಾಳ ಸಮುದಾಯಕ್ಕೆ ಮೀಸಲಿಡಲಾಗಿದ್ದ ಎರಡು ಎಕರೆ 18 ಕುಂಟೆಯ ಜಾಗಕ್ಕೆ ಇದ್ದ ಅಡೆತಡೆಗಳನ್ನು ಇತ್ಯರ್ಥವಾಗಿದ್ದು, ಇಲ್ಲಿ ತಮ್ಮ ಸಮುದಾಯದ ಚಟುವಟಿಕೆಗಳನ್ನು ನಡೆಸಲು ಜಿಲ್ಲಾ ಆಡಳಿತದಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ನಡೆದ ಪಲ್ಲಕ್ಕಿಗಳ ಮೆರವಣಿಗೆಗೆ ಡಿಸಿ ಜೆ.ಮಂಜುನಾಥ್ ಚಾಲನೆ ನೀಡಿದರು. ಮಡಿವಾಳ ನೌಕರರ ಸಂಘದ ಸಲಹೆಗಾರ ಜಿ.ಚಂದ್ರಪ್ಪ, ತಾಪಂ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ, ತಹಸೀಲ್ದಾರ್ ಶೋಭಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ಉಪ ನಿರ್ದೇಶಕ ಡಿ.ಎಂ ರವಿಕುಮಾರ್, ನಗರಸಭೆ ಸದಸ್ಯರಾದ ಕೆ.ಎಂ.ಮಂಜುನಾಥ್, ವಿ.ಮಂಜುನಾಥ್, ಜಿಲ್ಲಾ ಮಡಿವಾಳ ಸಂಘದ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net