ಸರ್ಕಾರದ ಯೋಜನೆಗಳ ಮೂಲಕ ಪ್ರಗತಿ ಸಾಧಿಸಬೇಕು

madivala
Published on

ಮಡಿಕೇರಿ:

ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಿಂದ ಶೈಕ್ಷಣಿಕ ಶಾಲಾ ಯೋಜನೆ, ಗಂಗಾ ಕಲ್ಯಾಣ, ಸ್ವಾವಲಂಬಿ ಸಾರಥಿ(ಟ್ಯಾಕ್ಸಿ), ಸ್ವಯಂ ಉದ್ಯೋಗ ಸಾಲ ಯೋಜನೆ(ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದಲ್ಲಿ), ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ ಹೀಗೆ ಹಲವು ಯೋಜನೆಗಳಿದ್ದು, ಇವುಗಳನ್ನು ಬಳಸಿಕೊಂಡು ಸಾಮಾಜಿಕ ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸುವಂತೆ ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶನಿವಾರ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಅಭಿವೃದ್ಧಿಯತ್ತ ಮುನ್ನಡೆಯಬೇಕು. ಮಡಿವಾಳ ಮಾಚಿದೇವರ ಆದರ್ಶಗಳನ್ನು ತಿಳಿದುಕೊಳ್ಳುವಂತಾಗಬೇಕು ಎಂದರು.

ನಿವೃತ್ತ ಶಿಕ್ಷಕ ಬಿ.ಸಿ.ಶಂಕರಯ್ಯ ಮಾತನಾಡಿ ಮಡಿವಾಳ ಮಾಚಿದೇವರು 12 ನೇ ಶತಮಾನದಲ್ಲಿ ನಾಡಿನಲ್ಲಿ ತಮ್ಮದೇ ಆದ ಕ್ರಾಂತಿ ಉಂಟು ಮಾಡಿದ್ದಾರೆ. 12ನೇ ಶತಮಾನದಲ್ಲಿ ಬಸವಾದಿ ಶರಣರ ಜೊತೆ ಮಡಿವಾಳ ಮಾಚಿದೇವರು ತಮ್ಮ ವೃತ್ತಿಯನ್ನು ಗೌರವಿಸಿ ಸಮಾಜದಲ್ಲಿ ಎಲ್ಲರೂ ಸಮಾನರೂ ಎಂಬ ಸಂದೇಶ ಸಾರಿದ್ದಾರೆ.

ಮಡಿವಾಳ ಮಾಚಿದೇವರ ವೈಚಾರಿಕತೆ, ವೈಜ್ಞಾನಿಕತೆ ಮೆಚ್ಚುವಂಥದ್ದು, ಮಡಿವಾಳ ಮಾಚಿದೇವರ ವಚನಗಳು ಶ್ರೇಷ್ಠವಾಗಿದ್ದು, ಪ್ರತಿಯೊಂದು ವಚನಗಳು ಅರ್ಥಪೂರ್ಣವಾಗಿವೆ. ಮಡಿವಾಳ ಮಾಚಿದೇವರು 12 ನೇ ಶತಮಾನದಲ್ಲಿ ವಚನಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ್ದಾರೆ. ಮಡಿವಾಳ ಮಾಚಿದೇವರು ಬಟ್ಟೆ ಶುಚಿಗೊಳಿಸುವ ಮೂಲಕ ಶುದ್ಧವಾಗಿದ್ದರೆ ಜೀವನವೇ ಸಾರ್ಥಕ ಎಂಬುದನ್ನು ಸಾರಿದ್ದಾರೆ.

12 ನೆಯ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲು-ಕೀಳು ತಾರತಮ್ಯ, ಅಸ್ಪೃಶ್ಯತೆ, ಮೂಢ ನಂಬಿಕೆಗಳ ಸೃಷ್ಟಿ, ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇವುಗಳೆಲ್ಲವುಗಳಿಂದ ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು, ಬಡವರು, ದೀನ ದಲಿತರು ನಿರಾಶೆ-ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು. ಸರ್ವರಿಗೂ ಸಮಪಾಲು-ಸಮಬಾಳು ಒದಗಿಸಲು ಬಸವ-ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರಗಣ್ಯ ಬಳಗದಲ್ಲಿ ಮಡಿವಾಳ ಮಾಚಿದೇವ ಅತ್ಯಂತ ಪ್ರಕಾಶಮಾನವಾಗಿ ಕಂಡುಬರುವರು ಎಂದು ಪ್ರತಿಪಾದಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ದೊಡ್ಡೇಗೌಡ ಮಾತನಾಡಿ ಮಡಿವಾಳ ಮಾಚಿದೇವರ ಜೀವನ ಮೌಲ್ಯವನ್ನು ತಿಳಿದುಕೊಳ್ಳಬೇಕು. ಕಾಯಕವೇ ಕೈಲಾಸವೆಂಬAತೆ ವೃತ್ತಿಯಿಂದ ದೇವರನ್ನು ಕಾಣಬೇಕು ಎಂದು ಶರಣರು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಪ್ರತಿಯೊಂದು ವೃತ್ತಿಯನ್ನು ಗೌರವಿಸಬೇಕು ಎಂದರು.

ಮಡಿವಾಳರ ಅಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಜಿ.ಸುಕುಮಾರ್ ಮಾತನಾಡಿ ಸರ್ಕಾರದ ವತಿಯಿಂದ ಫೆ.1 ರಂದು ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಗುತ್ತದೆ. ಮಡಿವಾಳರ ಅಭಿವೃದ್ಧಿ ಸಂಘದಿAದ ಫೆ. 16 ರಂದು ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬ್ಲಾಸಂ ಶಾಲೆಯ ಮುಖ್ಯೋಪಾಧ್ಯಾಯರಾದ ಅನಸೂಯ ಮಾತನಾಡಿದರು.

ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಿ.ಪಿ. ಕವಿತಾ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ಮಹಾದೇವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಶಿವಶಂಕರ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net