ಮಡಿಕೇರಿಗೆ ಅಮೃತ್ ೨.೦ ಕುಡಿಯುವ ನೀರು

30MDK01
Published on

ಮಡಿಕೇರಿ:

ಕೇಂದ್ರ ಸರ್ಕಾರದ ಅಮೃತ್ ೨.೦ ಯೋಜನೆಗೆ ಮಡಿಕೇರಿ ನಗರ ಆಯ್ಕೆ ಆಗಿದ್ದು, ಕುಡಿಯುವ ನೀರಿನ ಸೌಲಭ್ಯ ಉತ್ತಮ ಪಡಿಸಲು ೨೦ ಕೋಟಿ ರೂ. ಅನುದಾನ ಸಿಗಲಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಅಜಯ್ ತಿಳಿಸಿದರು. ಶುಕ್ರವಾರ ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಡೆದ ನಗರ ಸಭೆ ಸಾಮಾನ್ಯ ಸಭೆಯಲ್ಲಿ ಯೋಜನೆ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.

೧ ಲಕ್ಷಕ್ಕಿಂತಲೂ ಕಡಿಮೆ ಜನಸಂಖ್ಯೆಯ ನಗರಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಉತ್ತಮ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ಈ ಯೋಜನೆಗೆ ಆಯ್ಕೆ ಆದ ದೇಶದ ನಗರಗಳಲ್ಲಿ ಮಡಿಕೇರಿಯೂ ಒಂದಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ನಡೆಸಿರುವ ಸಮೀಕ್ಷೆ ಪ್ರಕಾರ ಮಡಿಕೇರಿಯಲ್ಲಿ ೧,೪೧೨ ಮನೆಗಳಿಗೆ ಕುಡಿಯುವ ನೀರಿನ ಸಮರ್ಪಕ ಸಂಪರ್ಕ ಇಲ್ಲ. ಯೋಜನೆಯನ್ನು ಸಂಪೂರ್ಣ ಮಡಿಕೇರಿ ನಗರಕ್ಕೆ ವಿಸ್ತರಿಸುವ ಸಲುವಾಗಿ ನೀರು ಸರಬರಾಜು ವ್ಯವಸ್ಥೆಗೆ ನಾಲ್ಕು ವಲಯ ಮಾಡಿಕೊಳ್ಳಲಾಗಿತ್ತು. ಒಟ್ಟು ೧೨೫ ಕಿಮೀ ನೀರು ಸರಬರಾಜು ಮಾಡಬೇಕಾಗುತ್ತದೆ. ಆದರೆ ಪ್ರಸ್ತಾವನೆ ಸಲ್ಲಿಸಿದಷ್ಟು ಹಣ ಸರ್ಕಾರದಿಂದ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಕೊಡುವ ಹಣದಲ್ಲಿ ೧ ವಲಯದ ೫೪ ಕಿ.ಮೀ.ಗೆ ಮಾತ್ರ ನೀರಿನ ಸಂಪರ್ಕ ಕಲ್ಪಿಸಬಹುದು. ಉಳಿದ ಭಾಗಗಳಿಗೆ ೨ನೇ ಹಂತದಲ್ಲಿ ಯೋಜನೆ ರೂಪಿಸಲಾಗುವುದು. ೨೦೨೫ರ ಒಳಗೆ ಮೊದಲ ಹಂತದ ಯೋಜನೆ ಪೂರ್ಣಗೊಂಡು ನೀರು ಪೂರೈಕೆಯ ಗುರಿ ಇದ್ದು, ನಗರಸಭೆಯಿಂದ ನಿರ್ಣಯ ಕೈಗೊಂಡು ಕಳುಹಿಸಿಕೊಡಬೇಕಾಗುತ್ತದೆ ಎಂದರು.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಅಜಯ್ ಮಾಹಿತಿ ನೀಡಿದ ಈ ಯೋಜನೆಗೆ ಸರ್ವ ಸದಸ್ಯರಿಂದಲೂ ಸ್ವಾಗತ ವ್ಯಕ್ತವಾಯಿತು. ಆದರೆ ಮಂಡಳಿಗೆ ಆರಂಭದಲ್ಲಿ ಇರುವ ಉತ್ಸಾಹ ಕೆಲಸ ಶುರು ಮಾಡಿದ ನಂತರ ಇರುವುದಿಲ್ಲ ಎಂದು ಆಕ್ಷೇಪಿಸಿದ ಸದಸ್ಯರು, ಇದಕ್ಕೆ ನಗರದಲ್ಲಿ ಕುಂಟುತ್ತಾ ಸಾಗುತ್ತಿರುವ ಯುಡಿಜಿ ಕಾಮಗಾರಿಯನ್ನು ಉದಾಹರಿಸಿದರು. ಅಲ್ಲದೆ ಮತ್ತೊಮ್ಮೆ ರಸ್ತೆ ಅಗೆದು ನಗರದ ಸೌಂದರ್ಯವನ್ನು ಹಾಳು ಮಾಡಬೇಡಿ ಎಂದು ಸೂಚಿಸಿದರು. ಇದಕ್ಕೆ ಉತ್ತರಿಸಿದ ಅಜಯ್, ಈ ಕಾಮಗಾರಿ ನಿಗದಿತ ಕಾಲಾವಧಿಯೊಳಗೆ ಮುಗಿಸಬೇಕಿದೆ. ಮಡಿಕೇರಿಯಲ್ಲಿ ರಸ್ತೆಗಳು ಚಿಕ್ಕದಾಗಿರುವುದರಿಂದ ರಸ್ತೆ ಬದಿಯಲ್ಲಿ ಕಾಮಗಾರಿ ಮಾಡಲು ಸಾಧ್ಯವಿಲ್ಲ. ರಸ್ತೆಯನ್ನು ಅಗೆಯಲೇ ಬೇಕಾಗುತ್ತದೆ. ನಂತರ ರಸ್ತೆ ದುರಸ್ತಿಗೆ ೪ ಕೋಟಿ ರೂ. ತೆಗೆದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಡಿಕೇರಿಗೆ ನೀರು ಪೂರೈಕೆ ಮಾಡುವ ಕುಂಡಾಮೇಸ್ತ್ರಿಯಲ್ಲಿ ಸಾಕಷ್ಟು ನೀರಿದೆ. ಆದರೆ ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಇಲ್ಲಿಂದ ಕೂಟುಹೊಳೆಗೆ ಸರಿಯಾಗಿ ನೀರು ಹರಿಸುವುದಿಲ್ಲ. ಹಾಗಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ ಎಂದು ಕಾಂಗ್ರೆಸ್ ಸದಸ್ಯ ರಾಜೇಶ್ ಯಲ್ಲಪ್ಪ ಹೇಳಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಡಾ. ಮಂತರ್ ಗೌಡ, ಕುಶಾಲನಗರ ಮಾದರಿಯಲ್ಲಿ ಮಡಿಕೇರಿಯಲ್ಲೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೇ ಕುಡಿಯುವ ನೀರಿನ ವ್ಯವಸ್ಥೆ ನಿರ್ವಹಣೆ ಮಾಡಲಿ. ಇದಕ್ಕೆ ಸಂಬಂಧಿಸಿದಂತೆ ನಗರ ಸಭೆ ನಿರ್ಣಯ ಮಾಡಿ ಕಳಿಸಲಿ ಎಂದು ಸಲಹೆ ನೀಡಿದರು.

ಇದಕ್ಕೂ ಮೊದಲು ಸಭೆ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ಎಸ್‌ಡಿಪಿಐನ ಮನ್ಸೂರ್ ಅಲಿ, ಬೇಸಿಗೆಯಲ್ಲಿ ೧೦ ದಿನ ಮಡಿಕೇರಿ ನಗರಕ್ಕೆ ನೀರು ಪೂರೈಕೆ ಆಗಲಿಲ್ಲ. ಇದಕ್ಕೆ ನಗರಸಭೆ ವೈಫಲ್ಯ ಕಾರಣ. ನಗರಸಭೆ ಸಮಜಾಯಿಷಿಕೆ ಕೊಡಬೇಕು ಎಂದು ಆಗ್ರಹಿಸಿದರು. ಕುಂಡಾ ಮೇಸ್ತ್ರಿಯಿಂದ ಕೂಟುಹೊಳೆಗೆ ಸಮರ್ಪಕವಾಗಿ ನೀರು ಪೂರೈಸಿದರೆ ಮಡಿಕೇರಿಗೆ ನೀರಿನ ಸಮಸ್ಯೆ ಆಗುವುದಿಲ್ಲ. ಹಿಂದಿನ ಅಧ್ಯಕ್ಷರು ಇದ್ದಾಗ ಆಗದಿದ್ದ ಸಮಸ್ಯೆ ಈಗ ಕಂಡುಬಂದಿತ್ತು ಎಂದರು. ಈ ಸಂದರ್ಭ ಮಾತನಾಡಿದ ಆಡಳಿತ ಪಕ್ಷ ಬಿಜೆಪಿನ ಸದಸ್ಯ ರಮೇಶ್ ಮಡಿಕೇರಿಯಲ್ಲಿ ನೀರಿನ ಸಮಸ್ಯೆ ಇಲ್ಲ. ತಾಂತ್ರಿಕ ತೊಂದರೆಯಿಂದ ೨ ದಿನ ಸಮಸ್ಯೆ ಆಗಿದೆ ಅಷ್ಟೇ. ಅಧಿಕಾರಿಗಳು ನಿದ್ದೆಗೆಟ್ಟು ಕೆಲಸ ಮಾಡಿ ಜನರಿಗೆ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಚರ್ಚೆ ಮಧ್ಯೆ ಮಾತನಾಡಿದ ಎಸ್‌ಡಿಪಿಐ ಸದಸ್ಯ ಬಷೀರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆಗೆ ಬಿಜೆಪಿ ಸದಸ್ಯರೊಬ್ಬರು ನಿಂದನೆ ಮಾಡಿದ್ದಾರೆ. ಮಹಿಳೆಯೊಬ್ಬರು ಅಧ್ಯಕ್ಷರಾಗಿರುವ ನಗರಸಭೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿರುವುದು ಖಂಡನೀಯ. ಇದಕ್ಕೆ ಅಧ್ಯಕ್ಷರು ಸಮಜಾಯಿಷಿಕೆ ಕೊಡಬೇಕು ಎಂದು ಒತ್ತಾಯಿಸಿದರು. ಆದರೆ ಇದಕ್ಕೆ ಅವಕಾಶ ಕೊಡದ ಆಡಳಿತ ಪಕ್ಷದ ಸದಸ್ಯರು ಈ ವಿಷಯ ಇತರ ವಿಷಯಗಳಲ್ಲಿ ಚರ್ಚೆ ಮಾಡೋಣ ಎಂದು ಬೇರೆ ವಿಷಯಗಳ ಕಡೆಗೆ ಗಮನಹರಿಸಿದರು. ಈ ವೇಳೆ ಮಾತನಾಡಿದ ರಾಜೇಶ್ ಯಲ್ಲಪ್ಪ ಎಲ್ಲವನ್ನೂ ಅಜೆಂಡಾ ಪ್ರಕಾರ ಚರ್ಚೆ ಎಂದರೆ ಸದಸ್ಯರಿಗೆ ಮಾತನಾಡಲು ಅವಕಾಶ ಸಿಗುವುದಿಲ್ಲ. ಅಜೆಂಡಾ ರಚನೆಗೆ ಮೊದಲು ಸದಸ್ಯರ ಜತೆಯೂ ಚರ್ಚೆ ನಡೆಸಬೇಕು. ಜನರ ಸಮಸ್ಯೆ ಹೇಳಲು ವಿಪಕ್ಷ ಸದಸ್ಯರಿಗೂ ಮಾತಾಡಲು ಅವಕಾಶ ಕೊಡಬೇಕು ಎಂದರು.

ಮಹದೇವ ಪೇಟೆ ರಸ್ತೆ ಸಂಪೂರ್ಣ ಹಾಳಾಗಿದ್ದು, ಕೂಡಲೇ ಡಾಂಬರೀಕರಣ ಆಗಲೇಬೇಕು ಎಂದು ಬಿಜೆಪಿಯ ರಮೇಶ್, ಎಸ್‌ಡಿಪಿಐಯ ಮನ್ಸೂರ್ ಅಲಿ ಒತ್ತಾಯಿಸಿದರು. ಮಡಿಕೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ರಸ್ತೆಗಳು ಉತ್ತಮ ಸ್ಥಿತಿಯಲ್ಲಿ ಇರುವುದು ಅಗತ್ಯ ಎಂದರು.
ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯರು, ನಗರ ಸಭೆ ಪೌರಾಯುಕ್ತ ವಿಜಯ್ ಹಾಗೂ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net