

ಮಡಿಕೇರಿ: ಪ್ರತೀ ಕುಟುಂಬಕ್ಕೂ ಸ್ವಂತ ನಿವೇಶನ ಹೊಂದುವ ಹಾಗೂ ಮನೆ ನಿರ್ಮಿಸುವ ಕನಸು ಇರುತ್ತದೆ. ಬಡ ಕುಟುಂಬಗಳ ಕನಸು ನನಸು ಮಾಡಲು ಸರ್ಕಾರ ಮುಂದಾಗಿದೆ. ವಸತಿ ರಹಿತ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗುತ್ತಿದೆ ಎಂದು ಮಡಿಕೇರಿ ಶಾಸಕರು ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕಿನ ೮ ಗ್ರಾಮ ಪಂಚಾಯಿತಿಗಳ ವಸತಿ ರಹಿತ ೨೬೦ ಫಲಾನುಭಗಳಿಗೆ ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಯ ಮನೆ ನಿರ್ಮಾಣದ ಆದೇಶ ಪತ್ರ ಶುಕ್ರವಾರ ವಿತರಿಸಿ ಮಾತನಾಡಿದರು.
ಬಸವ ವಸತಿ ಯೋಜನೆಯಲ್ಲಿ ೧.೬೨ ಲಕ್ಷ ರೂ., ಅಂಬೇಡ್ಕರ್ ವಸತಿ ಯೋಜನೆಯಡಿ ೨ ಲಕ್ಷ ರೂ. ಸಹಾಯಧನ ದೊರೆಯಲಿದೆ. ಜನವರಿ, ಫೆಬ್ರವರಿ ಒಳಗೆ ಮನೆ ನಿರ್ಮಿಸಿಕೊಳ್ಳುವಂತೆ ಶಾಸಕರು ಸಲಹೆ ನೀಡಿದರು. ಸರ್ಕಾರದ ನಿಯಮದಂತೆ ಮನೆ ನಿರ್ಮಿಸಿಕೊಳ್ಳ ಬೇಕು. ಮನೆ ನಿರ್ಮಾಣ ನಂತರ ತಮಗೆ ಬೇಕಾದಂತೆ ಮನೆ ಉನ್ನತ್ತೀಕರಿಸಿಕೊಳ್ಳಬಹುದೆಂದರು.
ವಸತಿ ಸಚಿವ ವಿ.ಸೋಮಣ್ಣ ಕೊಡಗು ಜಿಲ್ಲೆಯ ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚುವರಿಯಾಗಿ ೧೦ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ೨೦೨೪ರ ಅವಧಿಯೊಳಗೆ ಮನೆ ಇಲ್ಲದ ಪ್ರತೀ ಬಡವರಿಗೆ ಮನೆ ನಿರ್ಮಿಸಿಕೊಡುವುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಬಡವರು ಸರ್ಕಾರದ ಸೌಲಭ್ಯ ಬಳಸಿಕೊಳ್ಳಬೇಕೆಂದರು.
ರಾಜ್ಯ ಸರ್ಕಾರದಿಂದ ಶೇ.೪೦, ಕೇಂದ್ರ ಸರ್ಕಾರದಿಂದ ಶೇ.೬೦ ರಷ್ಟು ಹಣ ಬಿಡುಗಡೆಯಾಗಲಿದೆ. ಹಂತ ಹಂತವಾಗಿ ಮನೆ ನಿರ್ಮಿಸಿಕೊಳ್ಳ ಬೇಕೆಂದರು. ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ವಿವಿಧ ಬಗೆಯ ಟೂಲ್ ಕಿಟ್‌ಗಳನ್ನು ಶಾಸಕರು ಇದೇ ಸಂದರ್ಭ ವಿತರಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೇಖರ್ ಮಾತನಾಡಿ, ಕೆ.ನಿಡುಗಣೆ, ಗಾಳಿಬೀಡು, ಹೊದ್ದೂರು, ಮರಗೋಡು,
ಮೂರ್ನಾಡು, ಕಡಗದಾಳು, ಹೊಸ್ಕೇರಿ, ಮಕ್ಕಂದೂರು ಗ್ರಾಪಂ ವ್ಯಾಪ್ತಿಯ ೨೬೦ ಫಲಾನುಭಗಳಿಗೆ ಮನೆ ನಿರ್ಮಾಣ ಆದೇಶ ಪತ್ರ ವಿತರಿಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಜಗದೀಶ್, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಅನಿಲ್ ಬಗಟಿ, ತಾಲೂಕು ಕಾರ್ಮಿಕ ಅಧಿಕಾರಿ ಎಂ.ಎಂ. ಯತ್ನಟ್ಟಿ, ಜಿಪಂ ಸಹಾಯಕ ಕಾರ್ಯದರ್ಶಿ ಜೀವನ್ ಕುಮಾರ್, ವಸತಿ ನೋಡಲ್ ಅಧಿಕಾರಿ ಭಾನುಪ್ರಕಾಶ್ ಮತ್ತಿತರರು ಇದ್ದರು.