ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ

17mdka3 - Copy
Published on

ಮಡಿಕೇರಿ: ಮತದಾರರು ಚುನಾವಣಾ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್‌ನ ಪ್ರತಿ ನ್ಯಾಯಬೆಲೆ ಅಂಗಡಿಗೆ ನೀಡಿದರೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗುವುದೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಹೇಳಿದರು.

ಮಡಿಕೇರಿ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಮಡಿಕೇರಿ ತಾಲೂಕು ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿಗಳು ಹಾಗೂ ಮಾಲೀಕರ ಜೊತೆ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವ ಸಂಬಂಧ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಪಡಿತರ ಚೀಟಿಯಲ್ಲಿ ಅರ್ಹ ಫಲಾನುಭವಿಗಳು ಇಕೆವೈಸಿ ಮಾಡಿಸಿಕೊಳ್ಳಲು ಬಿಟ್ಟು ಹೋಗಿದ್ದಲ್ಲಿ ಇಕೆವೈಸಿ ಮಾಡಿಸಿಕೊಳ್ಳಲು ಅವಕಾಶವಿದೆ. ಆ ನಿಟ್ಟಿನಲ್ಲಿ ಫಲಾನುಭಗಳು ಕಡ್ಡಾಯವಾಗಿ ಇಕೆವೈಸಿ ಮಾಡಿಸಿಕೊಳ್ಳುವಂತೆ ತಿಳಿಸಿದರು.

ಪ್ರಸ್ತುತ ಸರ್ಕಾರದ ಆದೇಶದಂತೆ ಇ-ಕೆವೈಸಿ (ಜೀವ ಮಾಪಕ ಮರು ದೃಢೀಕರಣ) ಕಾರ್ಯ ಮತ್ತೆ ಪ್ರಾರಂಭಿಸಲಾಗಿದೆ. ಈ ಹಿಂದೆ ಇ-ಕೈವೈಸಿ ಮಾಡಿಸಿರದ ಅಂತ್ಯೋದಯ ಅನ್ನಯೋಜನೆ, ಆದ್ಯತಾ ಪಡಿತರ ಚೀಟಿ ಮತ್ತು ಆದ್ಯತೇತರ ಪಡಿತರ ಚೀಟಿಗಳಲ್ಲಿ ಸೇರ್ಪಡೆ ಗೊಂಡಿರುವ ಸದಸ್ಯರು ಕೂಡಲೆ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ತಮ್ಮ ಬೆರಳಚ್ಚನ್ನು ನೀಡಿ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.

ಪಡಿತರ ಚೀಟಿಯಲ್ಲಿ ಈಗಾಗಲೇ ಆಧಾರ್ ಕಾರ್ಡ್ ಜೋಡಣೆಯಲ್ಲಿ ಶೇ.೧೦೦ ರಷ್ಟು ಪ್ರಗತಿ ಸಾಧಿಸಿದೆ. ಆ ನಿಟ್ಟಿನಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಜೋಡಿಸಲು ಸರ್ಕಾರದ ಆದೇಶವಿದೆ. ವೋಟರ್ ಹೆಲ್ಫ್‌ಲೈನ್ ಆ್ಯಪ್ ಮೂಲಕ ಸ್ಮಾರ್ಟ್ ಪೋನ್ ಬಳಕೆದಾರರು ತಮ್ಮ ಮತ್ತು ಕುಟುಂಬದವರ ಮತದಾರರ ಗುರುತಿನ ಚೀಟಿಯ ಸಂಖ್ಯೆಗೆ ಆಧಾರ್ ಜೋಡಣೆ ಮಾಡಬಹುದು. ಇದರೊಂದಿಗೆ ಮತ್ತೊಬ್ಬ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಜೋಡಿಸಬಹುದೆಂದರು.

ಸ್ಮಾರ್ಟ್ ಪೋನ್ ಹೊಂದಿರದ ಹಾಗೂ ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಿಸಲು ತಿಳಿಯದೇ ಇರುವವರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಪ್ರತ್ನಿ ನೀಡಿದರೆ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಿಕೊಡಲಾಗುವುದೆಂದರು.

ಪಡಿತರ ಅಂಗಡಿಯ ಮಾಲೀಕರು ಮತದಾರರಿಂದ ಪಡೆದ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಪ್ರತಿ ಕ್ರೋಢೀಕರಿಸಿ ಸಂಬಂಧಪಟ್ಟ ಗ್ರಾಮಲೆಕ್ಕಿಗರಿಗೆ ಅಥವಾ ಬಿಎಲ್‌ಒಗಳಿಗೆ ನೀಡಿದರೆ ಅವರು ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡುತ್ತಾರೆಂದರು.

ಮತದಾರರ ಗುರುತಿನ ಚೀಟಿ ಹೊಂದಿರುವವರು ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಬಂದು ತಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಜೋಡಣೆ ಮಾಡಿಸಲು ಕಷ್ಟವಾಗಬಹುದು. ಆ ನಿಟ್ಟಿನಲ್ಲಿ ಮತದಾರರಿಗೆ ಸಹಾಯವಾಗಲು ಗ್ರಾಮ ಮಟ್ಟದಲ್ಲಿಯೇ ದಾಖಲೆ ಪಡೆದು ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವ ಕೆಲಸ ಮಾಡಲಾಗುತ್ತದೆ ಎಂದರು.
ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗೆ ಪಡಿತರ ಪಡೆಯಲು ಬಂದ ಸಂದರ್ಭದಲ್ಲಿ ಅಗತ್ಯ ದಾಖಲಾತಿ ನೀಡಿ ಸಹಕರಿಸಬೇಕು. ನ್ಯಾಯಬೆಲೆ ಅಂಗಡಿಯ ಮಾಲೀಕರು ಪಡಿತರ ವಿತರಣೆಗೆ ಮೊದಲನೇ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ಪಡಿತರ ವಿತರಣೆಯಲ್ಲಿ ವಿಳಂಬವಾಗಬಾರದೆಂದರು.

ಮಡಿಕೇರಿ ತಹಸೀಲ್ದಾರ್ ಪಿ.ಎಸ್. ಮಹೇಶ್, ಮಡಿಕೇರಿ ತಾಲೂಕು ಆಹಾರ ನಿರೀಕ್ಷಕಿ ಯು.ಪಿ. ವೀಣಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net