ವಿರಾಜಪೇಟೆ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಅಡೆತಡೆ

5mdkj1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ವಿರಾಜಪೇಟೆ ಕ್ಷೇತ್ರದ ಜನ ಮುಖ್ಯವಾಗಿ ಒಳ್ಳೆಯ ರಸ್ತೆ ಕೇಳುತ್ತಾರೆ. ವಿವಿಧ ಕಾರಣದಿಂದ ರಸ್ತೆ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ವಿಷಾದ ವ್ಯಕ್ತ ಪಡಿಸಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗುರುವಾರ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಪ್ರಕೃತಿ ವಿಕೋಪ, ಕೋವಿಡ್, ಅಕಾಲಿಕ ಮಳೆಯಿಂದ ರಸ್ತೆ ದುಸ್ಥಿತಿಗೆ ತಲುಪಿದೆ. ರಸ್ತೆ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಕಲ್ಲುಕ್ವಾರೆಯವರ ಮುಷ್ಕರ ಮುಗಿದ ತಕ್ಷಣ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಸತತ ೩ ಅವಧಿಯಿಂದ ವಿರಾಜಪೇಟೆ ಕ್ಷೇತ್ರ ಪ್ರತಿನಿಧಿಸುತ್ತಿದ್ದೇನೆ. ಶಾಸಕನಾಗಿ ಆಯ್ಕೆಯಾದ ಸಂದರ್ಭ ವಿರಾಜಪೇಟೆ ಕ್ಷೇತ್ರ ವ್ಯಾಪ್ತಿಯ ರಸ್ತೆಗಳು ವಾಹನ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ರಸ್ತೆ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಮುಂಗಡ ಪತ್ರದಲ್ಲಿ ವಿಶೇಷ ಅನುದಾನ ಘೋಷಿಸಿತ್ತು. ಮೊದಲು ೨೫ ಕೋಟಿ, ತದನಂತರ ೫೦, ೭೫, ೧೦೦ ಕೋಟಿ ರೂ. ಅನುದಾನ ಒದಗಿಸಿದೆ ಎಂದು ಮಾಹಿತಿ ನೀಡಿದರು.

ಕಾಡುಪ್ರಾಣಿ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಪರಿಹಾರ ಮೊತ್ತ ಹೆಚ್ಚಿಸಲಾಗಿದೆ. ರೈಲ್ವೆ ಕಂಬಿ, ಕಂದಕ ನಿರ್ಮಾಣದೊಂದಿಗೆ ಶಾಶ್ವತ ಪರಿಹಾರದತ್ತ ಗಮನ ಹರಿಸಲಾಗಿದೆ. ಪುಂಡಾನೆ ಸೆರೆಹಿಡಿಯಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯಲಾಗುವುದೆಂದರು.

ಜಮ್ಮಾಬಾಣೆಗೆ ಕಂದಾಯ ನಿಗದಿಗೆ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಹೊರಡಿಸಿದ್ದ ಮಾರಕ ಆದೇಶ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದ ೧೫ ದಿನದೊಳಗೆ ಹಿಂಪಡೆಯುವಂತೆ ಮಾಡಿದ್ದೇನೆ. ಕೃಷಿಗೆ ಒಳಪಡದಿದ್ದರೂ ಬಾಣೆ ಜಾಗಕ್ಕೆ ಕಂದಾಯ ನಿಗದಿ ಪಡಿಸಲು ಸರ್ಕಾರ ಸೂಚನೆ ನೀಡಿದರು. ಜಮ್ಮಾಬಾಣೆ ಜಾಗಕ್ಕೆ ಸಂಬಂಧಿಸಿದ್ದಂತೆ ಸಮಸ್ಯೆ ಶಾಶ್ವತ ಪರಿಹಾರ ಆಗಬೇಕೆಂದರು.

ಕೊಡಗನ್ನು ಪೂರ್ಣ ಪ್ರಮಾಣದಲ್ಲಿ ಡೀಮ್ಡ್ ಫಾರೆಸ್ಟ್ ಎಂದು ಬಿಂಬಿಸಲಾಗುತ್ತಿದೆ. ಇದರಿಂದ ರಸ್ತೆ, ನೀರು ಸೇರಿದ್ದಂತೆ ಮೂಲಭೂತ ಸವಲತ್ತು ಒದಗಿಸಲು ಅಡ್ಡಿಯಾಗುತ್ತಿದೆ. ಡೀಮ್ಡ್ ಫಾರೆಸ್ಟ್ ಎಂಬ ಪದವೇ ಇಲ್ಲ. ಕೊಡಗಿನ ಪ್ರತಿಯೊಂದು ಪ್ರದೇಶಕ್ಕೂ ಅಗತ್ಯ ವಸಲತ್ತು ಒದಗಿಸುವುದು ಹಾಗೂ ವಸತಿ ರಹಿತರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಒತ್ತಿ ನೀಡಲಾಗಿದೆ.

ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಮೊದಲ ಬಾರಿಗೆ ೫ ಲಕ್ಷ ರೂ. ಬಿಡುಗಡೆ ಮಾಡಿದ್ದರು. ಹಾಲಿ ಸರ್ಕಾರ ೧ ಕೋಟಿ ರೂ. ಅನುದಾನ ಒದಗಿಸಿದೆ. ಉಮಾಭಾರತಿ ಕೇಂದ್ರ ಕ್ರೀಡಾ ಸಚಿವೆಯಾಗಿದ್ದಾಗ ಪೊನ್ನಂಪೇಟೆಯಲ್ಲಿ ಕೃತಕ ಹುಲ್ಲುಹಾಸಿನ ಹಾಕಿ ಮೈದಾನ ನಿರ್ಮಿಸಲಾಗಿದೆ. ಆ ಮೂಲಕ ಕೊಡಗಿನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ ನೀಡಲಾಗಿದೆ.

ಶಾಸಕನಾಗಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಸದಾಗಿ ೫ ಪ್ರೌಢಶಾಲೆ, ೨ ಪಿಯುಸಿ ಪ್ರಾರಂಭಿಸಲಾಗಿದೆ. ವಿರಾಜಪೇಟೆ ಹಾಗೂ ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಮಡಿಕೇರಿ ಕಾಲೇಜಿಗೆ ಕಟ್ಟಡ ನಿರ್ಮಿಸಲು ನಿವೇಶನ ಹಾಗೂ ಅನುದಾನ ಒದಗಿಸಲಾಗಿದೆ.

ದೇವಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಲಾಗಿದೆ. ತಲಕಾವೇರಿ, ಪಾಡಿ ಶ್ರೀ ಇಗ್ಗುತ್ತಪ್ಪ, ಓಂಕಾರೇಶ್ವರ, ಇರ್ಪು ರಾಮೇಶ್ವರ ದೇವಾಲಯ ಅಭಿವೃದ್ಧಿ ಪಡಿಸಲಾಗಿದೆ. ಮಡಿಕೇರಿಯಲ್ಲಿ ೧ ಕೋಟಿ ರೂ. ವೆಚ್ಚದಲ್ಲಿ ಓಂಕಾರ ಸದನ ನಿರ್ಮಿಸಲಾಗಿದೆ. ಪರಿಸರ ಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕಾನೂನು ಸರಿಯಾಗಿದ್ದು, ಅದನ್ನು ಉಲ್ಲಂಘಿಸುವ ಪ್ರಕ್ರಿಯೆ ಕೆಲವ ರಿಂದ ನಡೆಯುತ್ತಿದೆ ಎಂದು ಅತೃಪ್ತಿ ವ್ಯಕ್ತ ಪಡಿಸಿದರು.

ವೇದಿಕೆಯಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ, ಉಪಾಧ್ಯಕ್ಷ ಬಿ.ಜಿ. ಪ್ರದೀಪ್ ಇದ್ದರು.

ಅಭಿವೃದ್ಧಿ- ದೇಶದ ಭದ್ರತೆ
ತಮ್ಮ ಮತ್ತು ಸರ್ಕಾರದಿಂದ ಆಗಿರುವ ಅಭಿವೃದ್ಧಿ ಕಾರ್ಯ ಹಾಗೂ ದೇಶದ ಭದ್ರತೆ ವಿಷಯ ಮುಂದಿಟ್ಟುಕೊಂಡು ವಿಧಾನಸಭೆ ಚುನಾವಣೆ ಎದುರಿಸಲಾಗುವುದೆಂದು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ನಮ್ಮ ಸರ್ಕಾರದ ಸಾಧನೆ ಜನತೆ ಮುಂದಿಡಲಾಗುವುದು. ಇದರೊಂದಿಗೆ ದೇಶದ ಭದ್ರತೆಗೆ ಮಾರಕವಾಗಿರುವ ವಿಷಯಗಳ ಬಗ್ಗೆ ತಿಳಿಸಿಕೊಡಲಾಗುವುದು. ದೇಶದ ಸುರಕ್ಷತೆಗಾಗಿ ಕೇಂದ್ರ- ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೆ ಆಳ್ವಿಕೆ ನಡೆಸಬೇಕು. ಮತಾಂತರಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಗೆ ತರಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಕೂಡ ಜಾರಿಗೆ ಬಂದಿದೆ. ಈ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಕೂಡ ಸಹಮತ ವ್ಯಕ್ತ ಪಡಿಸಿದೆ ಎಂದರು.

ಅವಕಾಶ ಸಿಕ್ಕರೆ ಸ್ಪರ್ಧೆ
ಬಿಜೆಪಿಯ ನೀತಿ- ನಿಯಮ, ಶಿಸ್ತು, ಚೌಕಟ್ಟಿನಡಿ ನಾನಿದ್ದೇನೆ. ಇದುವರೆಗೂ ನಾನು ಯಾವ ಸ್ಥಾನಮಾನವೂ ಕೇಳಿಲ್ಲ. ಪಕ್ಷ ನೀಡಿದ ಜವಾಬ್ದಾರಿ ನಿರ್ವಹಿಸುತ್ತಾ ಬಂದಿದ್ದೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕತೆ ಸ್ಪರ್ಧಿಸುತ್ತೇನೆ. ಬದಲಾವಣೆ ಮಾಡಲು ನಿರ್ಧರಿಸಿದ್ದಲ್ಲಿ ಅದಕ್ಕೂ ಸಮ್ಮತ್ತಿ ನೀಡುತ್ತೇನೆ ಎಂದು ಕೆ.ಜಿ. ಬೋಪಯ್ಯ ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಕಾಂಕ್ಷಿಗಳಿರುವುದು ಸಹಜ. ಪ್ರತಿಯೊಬ್ಬರು ಕೇಳಬಹುದು. ಆದರೆ, ಪಕ್ಷ ನಿರ್ಧಾರ ಮಾಡುವ ಅಭ್ಯರ್ಥಿ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸಬೇಕು. ಮುಂದಿನ ಚುನಾವಣೆಯಲ್ಲಿ ಯಾರೂ ಸ್ಪರ್ಧಿಸಬೇಕೆಂದು ಪಕ್ಷ ನಿರ್ಧರಿಸುತ್ತದೆ. ಪಕ್ಷದ ನಿರ್ಧಾರಕ್ಕೆ ಬದ್ಧ ಎಂದರು.

ಕೆಟ್ಟ ಚಾಳಿ ಇಲ್ಲ
ನನಗೆ ಕೆಟ್ಟ ಚಾಳಿ ಇಲ್ಲ. ಆ ಕಾರಣಕ್ಕಾಗಿ ನನ್ನ ಮೇಲೆ ಬೇರೆ ರೀತಿಯ ಆರೋಪ ಮಾಡಲು ಸಾಧ್ಯವಾಗುವುದಿಲ್ಲ. ಆ ಕಾರಣಕ್ಕಾಗಿ ಅಭಿವೃದ್ಧಿ ಮಾಡಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯ ಮಾಡದಿದ್ದಲ್ಲಿ ಸತತ ೪ ಬಾರಿ ಶಾಸಕನಾಗಿ ಆಯ್ಕೆ ಯಾಗುತ್ತಿರಲಿಲ್ಲ ಎಂದು ಕೆ.ಜಿ. ಬೋಪಯ್ಯ ಹೇಳಿದರು.
ನನ್ನ ವಿರುದ್ಧ ಅನಗತ್ಯವಾಗಿ ಆರೋಪ ಮಾಡುತ್ತಿರುವವರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಸದಾ ಎಚ್ಚರಿಕೆಯಿಂದ ಮುನ್ನಡೆಯಲು ಆರೋಪಗಳು ಸಹಕಾರಿಯಾಗುತ್ತದೆ. ಅನಗತ್ಯ ಟೀಕೆ- ಟಿಪ್ಪಣಿಗಳಿಗೆ ಮಹತ್ವ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

**
ಬಿಜೆಪಿ ನನ್ನ ಸ್ವಂತ ಮತ್ತು ಅಪ್ಪನ ಆಸ್ತಿಯಲ್ಲ. ನಾನು ಮುಂದಿನ ಚುನಾವಣೆಯಲ್ಲಿ ಯಾರು ಸ್ಪರ್ಧಿಸಬೇಕೆಂದು ನಿರ್ಧಾರ ಮಾಡಲು ಸಾಧ್ಯವಾಗುವುದಿಲ್ಲ. ನನಗೆ ಸಿಗದಿದ್ದರೆ ಬೇರೆ ಯಾರಿಗೆ ನೀಡಬೇಕೆಂದು ಬೆಂಬಲ ನೀಡುತ್ತಿಲ್ಲ. ಟಿಕೆಟ್ ವಿಚಾರಕ್ಕೆ ಸ್ಪರ್ಧಿಸಿದ್ದಂತೆ ಗೊಂದಲ ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇದು ಪಕ್ಷದ ವೇದಿಕೆಯಲ್ಲಿ ಚರ್ಚಿಸುವ ವಿಚಾರ. ಕೆ.ಜಿ. ಬೋಪಯ್ಯ, ವಿರಾಜಪೇಟೆ ಶಾಸಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net