

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಸಮಾಜದ ಎಲ್ಲೆಡೆ ಹಬ್ಬಿರುವ ಭ್ರಷ್ಟಾಚಾರದಿಂದ ಪ್ರತಿಯೊಬ್ಬರೂ ಆಕ್ರೋಶಿತರಾಗಿದ್ದಾರೆ. ಭ್ರಷ್ಟಾಚಾರದಿಂದ ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರ ಕೆಲಸ ಕಾರ್ಯ ಸುಲಭವಾಗಿ ಆಗುತ್ತಿಲ್ಲ. ಹಣ ಕೊಟ್ಟರೆ ಮಾತ್ರ ಕೆಲಸ ಮಾಡಿಕೊಡುವ ವಾತಾವರಣ ಸೃಷ್ಟಿಯಾಗಿದೆ. ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಹಾಕಲು ಕರ್ನಾಟಕ ಲೋಕಾಯುಕ್ತಕ್ಕೆ ಪರಮಾಧಿಕಾರ ಕೊಡಬೇಕೆಂಬ ಜನಾಭಿಪ್ರಾಯ ವ್ಯಕ್ತವಾಗುತ್ತಿದೆ.
ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಮೂಲಕ ಭ್ರಷ್ಟರ ಬೇಟೆ ಮಾಡುತ್ತಾರೆ. ದೂರಿನ ಆಧಾರದಲ್ಲಿ ಯೂ ಭ್ರಷ್ಟರ ಮೇಲೆ ಲೋಕಾಯುಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ನಡೆದ ಸಂದರ್ಭ ದಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸುವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆ ಸಂಗ್ರಹಿಸಿ ಲೋಕಾಯುಕ್ತಕ್ಕೆ ವೈಯುಕ್ತಿಕವಾಗಿ ದೂರು ನೀಡುವವರು ಇದ್ದಾರೆ.
ದಾಖಲೆ ಸಹಿತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಲ್ಲಿ ಭ್ರಷ್ಟರಿಗೆ ಕಾನೂನಿನ್ವಯ ಕ್ರಮವಾಗಲಿದೆ. ಭ್ರಷ್ಟಾಚಾರದ ಬಗ್ಗೆ ಪ್ರತಿಯೊಬ್ಬರೂ ಮಾತನಾಡುತ್ತಾರೆ. ಆದರೆ, ದಾಖಲೆ ಸಹಿತ ಲೋಕಾಯುಕ್ತಕ್ಕೆ ನಿರೀಕ್ಷಿತ ದೂರು ಬರುತ್ತಿಲ್ಲ ಎಂದು ಕೊಡಗು ಜಿಲ್ಲಾ ಪ್ರವಾಸದಲ್ಲಿರುವ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹೇಳುತ್ತಾರೆ.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾಗಿದೆ. ಆದರೆ, ಬೆಕ್ಕಿಗೆ ಗಂಟೆ ಕಟ್ಟುವವರು ಯಾರೆಂಬ ಪ್ರಶ್ನೆ ಎದ್ದಿದೆ. ಲೋಕಾಯುಕ್ತದೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ. ಲೋಕಾಯುಕ್ತ ಕಾಯ್ದೆಯನ್ವಯ ತಮ್ಮ ಇತಿಮಿತಿ ಒಳಗೆ ಲೋಕಾಯುಕ್ತ ಕಾರ್ಯನಿರ್ವಹಿಸುತ್ತಿದೆ. ಭ್ರಷ್ಟರ ಮೇಲೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಸರ್ಕಾರಕ್ಕಿದೆ. ಶಿಕ್ಷೆ ನೀಡುವ ಅವಕಾಶ
ನ್ಯಾಯಾಲಯಕ್ಕಿದೆ ಎನ್ನುತ್ತಾರೆ. ಉಪ ಲೋಕಾಯುಕ್ತರು ಮೂರು ದಿನದ ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಲೌಡ್ ಸ್ಪೀಕರ್‌ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ.
**
ಸರ್ಕಾರಿ ಕಚೇರಿಯಲ್ಲಿ ಅನಗತ್ಯವಾಗಿ ಜನರ ಕೆಲಸ ವಿಳಂಬವಾಗುತ್ತಿರುವುದು, ಸರ್ಕಾರಿ ಕೆಲಸಕ್ಕೆ ಹಣದ ಬೇಡಿಕೆ ಇಡುವುದು ಸೇರಿ ದ್ದಂತೆ ವಿವಿಧ ರೀತಿಯ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದಂತೆ ಸಾರ್ವಜನಿಕರು ದಾಖಲೆ ಸಹಿತ ಲೋಕಾಯುಕ್ತಕ್ಕೆ ದೂರು ಸಲ್ಲಿಸಬೇಕು. ಹೆಚ್ಚು ದೂರು ಸಲ್ಲಿಸುವುದರಿಂದ ಭ್ರಷ್ಟರಲ್ಲಿ ಭಯ ಮೂಡುತ್ತದೆ. ಲೋಕಾಯುಕ್ತದ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದೇನೆ. ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ, ಉಪ ಲೋಕಾಯುಕ್ತರು.
**
ಪ್ರತಿಯೊಂದು ಕ್ಷೇತ್ರದಲ್ಲಿಯೂ ಇಂದು ಭ್ರಷ್ಟಾಚಾರ ವ್ಯಾಪಕವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಹಣ ನೀಡದೆ ಸಾರ್ವಜನಿಕರ ಕೆಲಸ ಆಗುವುದಿಲ್ಲ ಎಂಬ ವಾತಾವರಣವಿದೆ. ಭ್ರಷ್ಟಾಚಾರ ನಿರ್ಮೂಲ ಮಾಡುವ ಉದ್ದೇಶದಿಂದ ಕರ್ನಾಟಕ ಲೋಕಾಯುಕ್ತ ಸ್ಥಾಪನೆ ಮಾಡಿದೆ. ಆ ಉದ್ದೇಶಕ್ಕೆ ಪೂರಕವಾಗಿ ಕೆಲಸ ಮಾಡಬೇಕಾಗಿದೆ. ಬಿ.ಎ. ಸುಭಾಷಿಣಿ, ಖಾಸಗಿ ಉದ್ಯೋಗಿ, ಪೊನ್ನಂಪೇಟೆ.
**
ಪ್ರಜೆಗಳ ಕಲ್ಯಾಣಕ್ಕಾಗಿ ಸರ್ಕಾರ ರೂಪಿಸಿದ ನಾಗರಿಕ ಸೌಲಭ್ಯ, ಯೋಜನೆ ಪಾರದರ್ಶಕವಾಗಿ ನಾಗರಿಕರಿಗೆ ತಲುಪಿಸುವುದು ನಿಜವಾದ ಪ್ರಜಾಪ್ರಭುತ್ವ. ತಂತ್ರಗಾರಿಕೆಗೆ ಒಳಪಟ್ಟ ವ್ಯವಸ್ಥೆಯಿಂದ ಜನಸಾಮಾನ್ಯರು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಭ್ರಷ್ಟಾಚಾರ ನಿರ್ಮೂಲನೆ ಗೆ ಲೋಕಾಯುಕ್ತ ಮತ್ತಷ್ಟು ಪರಿಣಾಮಕಾರಿಯಾಗಬೇಕು. ಪ್ರತಿಮಾ ಹರೀಶ್ ರೈ, ಉಪನ್ಯಾಸಕಿ, ವಿರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜು.
**
ಭ್ರಷ್ಟಾಚಾರ ಹಾಗೂ ಲಂಚದ ಹಾವಳಿಯಿಂದ ಬಡವರು ಬದುಕಲು ಸಾಧ್ಯವಾಗುತ್ತಿಲ್ಲ. ಕೆಲ ಸರ್ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೆ ಬಡವರ ಕೆಲಸ ಆಗುತ್ತಿಲ್ಲ. ಬಲಿಷ್ಠವಾದ ಲೋಕಾಯುಕ್ತ ಬೇಕು. ನಿಷ್ಠಾವಂತ ಅಧಿಕಾರಿಗಳು ಲೋಕಾಯುಕ್ತಕ್ಕೆ ಬೇಕು. ಲಂಚಕೋರರನ್ನು ಹಿಡಿದು ಕೆಲಸದಿಂದ ವಜಾ ಮಾಡಿ, ಜೈಲಲ್ಲಿ ಕೊಳೆಯುವಂತೆ ಮಾಡಬೇಕು. ಕೆ.ಬಿ. ಜಯಪ್ರಕಾಶ್, ಖಜಾಂಚಿ, ಸೋಮವಾರಪೇಟೆ ತಾಲೂಕು ಮೊಗೇರ ಸಂಘ .
**
ಲೋಕಾಯುಕ್ತಕ್ಕೆ ಪರಮಾಧಿಕಾರ ಕೊಡಬೇಕು. ಸರ್ಕಾರದ ಹಸ್ತಕ್ಷೇಪದಿಂದ ಭ್ರಷ್ಟಾಚಾರಿಗೆ ಶಿಕ್ಷೆಯಾಗುತ್ತಿಲ್ಲ. ಲೋಕಾಯುಕ್ತ ಎಫ್‌ಐಆರ್ ಮಾಡಿ, ಅವರೇ ಶಿಕ್ಷೆ ಪ್ರಕಟಿಸಬೇಕು. ಕಾನೂನು ತಿದ್ದುಪಡಿ ಮಾಡಬೇಕಿದೆ. ಇಲ್ಲದಿದ್ದರೆ ಲೋಕಾಯುಕ್ತಕ್ಕೆ ಸಿಕ್ಕಬಿದ್ದ ಲಂಚಕೋರ ಅಧಿಕಾರಿಗಳಿಗೆ ಸರ್ಕಾರವೇ ಬಡ್ತಿ ಕೊಟ್ಟು ಕಳುಹಿಸುತ್ತಿದೆ. ನೂರಾರು ಕೋಟಿ ತಿಂದವರು ಜೈಲಿಗೋದ ನಿದರ್ಶನಗಳಿಲ್ಲ. ಕೆ.ಎ.ಆದಂ, ವರ್ತಕ, ಸೋಮವಾರಪೇಟೆ.
**
ಯಾವುದೇ ರಾಜಕೀಯ ಪಕ್ಷದ ಹಿಡಿತದಲ್ಲಿ ಲೋಕಾಯುಕ್ತ ಕಾರ್ಯನಿರ್ವಹಿಸದಂತೆ ನೋಡಿಕೊಳ್ಳಬೇಕಿದೆ. ಸ್ವತಂತ್ರವಾಗಿ ಸೇವೆ ನೀಡಲು ಅವಕಾಶ ಮಾಡಿಕೊಡಬೇಕು. ಅಧಿಕಾರಿ, ಸಿಬ್ಬಂದಿ ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ಕಾರ್ಯನಿರ್ವಹಿಸದಂತೆ ಎಚ್ಚರ ವಹಿಸಬೇಕು. ಲೋಕಾಯುಕ್ತ ಪೊಲೀಸ್ ಅಧಿಕಾರಿ- ಸಿಬ್ಬಂದಿ ಪ್ರಾಮಾಣಿಕ ವ್ಯಕ್ತಿಗಳಾಗಿರಬೇಕು. ಪಿ.ಜಿ. ರಾಜಶೇಖರ್, ವರ್ತಕ, ಗೋಣಿಕೊಪ್ಪ.
**
ಭ್ರಷ್ಟ ವ್ಯವಸ್ಥೆಯನ್ನು ಬುಡಸಮೇತ ಕಿತ್ತು ಹಾಕುವುದರಲ್ಲಿ ಲೋಕಾಯುಕ್ತದ ಪಾತ್ರ ಮುಖ್ಯವಾಗಿದೆ. ರಾಜಕೀಯ ನಾಯಕರ ಒತ್ತಡಕ್ಕೆ ಮಣಿಯದ ರೀತಿ ಲೋಕಾಯುಕ್ತ ರಚಿಸಬೇಕು. ಭ್ರಷ್ಟಚಾರ ಬಯಲು ಮಾಡುವರಿಗೆ ತೊಂದರೆ ಆಗದಂತೆ ಮತ್ತು ಕಾನೂನಿನ ಕಪಿಮುಷ್ಠಿಯಲ್ಲಿ ನರಳದಂತೆ ನೋಡಿಕೊಂಡಾಗ ಮಾತ್ರ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡಲು ಸಾಧ್ಯವಾಗುತ್ತದೆ. ಸತ್ಯ ಕರ್ಕೇರ, ಸಾಮಾಜಿಕ ಕಾರ್ಯಕರ್ತ, ಮಡಿಕೇರಿ.
**
ಲೋಕಾಯುಕ್ತ ಸಂಪೂರ್ಣ ಸ್ವಾಯತ್ತ ಸಂಸ್ಥೆಯಾಗಬೇಕು. ಸರ್ಕಾರದ ಹಸ್ತಕ್ಷೇಪಕ್ಕೆ ಅವಕಾಶವಾಗದಂತೆ ಪ್ರತ್ಯೇಕ ಸಂಸ್ಥೆಯಾಗಿ ರೂಪಿಸಬೇಕು. ಭ್ರಷ್ಟರ ಮೇಲೆ ಕಾನೂನು ಕ್ರಮವಾಗುತ್ತಿಲ್ಲ. ಈ ಬೇಸರ ಜನವಲಯದಲ್ಲಿದೆ. ಲೋಕಾಯುಕ್ತ ಸಾರ್ವಜನಿಕರ ಧ್ವನಿ ಯಾಗಿ ಕೆಲಸ ಮಾಡಬೇಕು. ಬಾಳೆಯಡ ಕಿಶನ್ ಪೂವಯ್ಯ, ವಕೀಲರು, ಮಡಿಕೇರಿ.