

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಜನೋತ್ಸವ ಮಡಿಕೇರಿ ದಸರಾಕ್ಕೆ ಸರ್ಕಾರ ಮಂಜೂರು ಮಾಡಿರುವ ೧ ಕೋಟಿ ರೂಪಾಯಿಯಲ್ಲಿ ಹೆಚ್ಚಿನ ಹಣ ಮಂಟಪ ಹಾಗೂ ಕರಗ ಗಳಿಗೆ ನೀಡುವಂತೆ ಮಂಟಪ ಸಮಿತಿಯವರು ಪಟ್ಟುಹಿಡಿದಿದ್ದಾರೆ.
ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ಕಾವೇರಿ ಕಲಾಕ್ಷೇತ್ರದಲ್ಲಿ ಆಯೋಜಿ ಸಿದ್ದ ಸಭೆಯಲ್ಲಿ ಮಂಟಪ ಸಮಿತಿಯವರು ಹೆಚ್ಚಿನ ಅನುದಾನಕ್ಕೆ ಬಿಗಿಪಟ್ಟುಹಿಡಿದರು. ದಶಮಂಟಪಗಳಿಗೆ ತಲಾ ೩.೩೦ ಲಕ್ಷ ಹಾಗೂ ೪ ಶಕ್ತಿ ದೇವತೆಗಳ ಕರಗಗಳಿಗೆ ತಲಾ ೨ ಲಕ್ಷ ರೂ.ನಂತೆ ಒಟ್ಟು ೪೧ ಲಕ್ಷ ರೂ. ಹಂಚಿಕೆ ಮಾಡಿರುವುದಾಗಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಹೇಳಿದರು. ಇದಕ್ಕೆ ಒಪ್ಪದ ಮಂಟಪ ಸಮಿತಿಯವರು ಹೆಚ್ಚಿನ ಹಣ ನೀಡಬೇಕೆಂದು ಪಟ್ಟುಹಿಡಿದರು.
ಮಂಟಪ ಹಾಗೂ ಕರಗಳಿಗೆ ಒಟ್ಟು ೬೦ ಲಕ್ಷ ರೂ. ನೀಡಬೇಕು. ಕಳೆದ ವರ್ಷ ಕೋವಿಡ್ ನಡುವೆಯೂ ರಾಜ್ಯ ಸರ್ಕಾರದಿಂದ ೧ ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಈ ವರ್ಷ ಹೆಚ್ಚಿನ ಅನುದಾನಕ್ಕೆ ಪ್ರಯತ್ನಿಸಬೇಕಾಗಿತ್ತೆಂದು ದಶಮಂಟಪ ಸಮಿತಿ ಅಧ್ಯಕ್ಷ ಮನು ಮಂಜುನಾಥ್ ಆಗ್ರಹಿಸಿದರು.
ನಿಮ್ಮನ್ನು ಮಂಟಪ- ಕರಗಗಳಿಗೆ ಹೆಚ್ಚಿನ ಅನುದಾನ ತರುವಂತೆ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ, ನೀವು ಹೀಗೆ ಮಾಡುವುದು ಸರಿಯಲ್ಲ ಎಂದು ಕೆ.ಎಸ್. ರಮೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ಹಠಕ್ಕೆ ಬಿದ್ದರೆ ಏನೂ ಮಾಡಲಾಗದೆಂದು ರಮೇಶ್ ತಿರುಗೇಟು ನೀಡಿದರು.
ಜಿಎಸ್‌ಟಿ ರಹಿತವಾಗಿ ಮಂಟಪ- ಕರಗಗಳಿಗೆ ಹಣ ನೀಡಲಾಗುತ್ತಿದೆ ಎಂದು ಕಾರ್ಯಾಧ್ಯಕ್ಷರು ಮನವರಿಕೆ ಮಾಡಲು ಪ್ರಯತ್ನಿಸಿದರು. ಸರ್ಕಾರದಿಂದ ಹೆಚ್ಚಿನ ಅನುದಾನಕ್ಕೆ ಪ್ರಯತ್ನಿಸಲಾಗುವುದು. ಹೆಚ್ಚುವರಿ ಅನುದಾನ ಬಿಡುಗಡೆಯಾದ್ದಲ್ಲಿ ಮಂಟಪ- ಕರಗಗಳಿಗೆ ಹಂಚಿಕೆ ಮಾಡಲಾಗುವುದೆಂದು ಅಧ್ಯಕ್ಷೆ ಭರವಸೆ ನೀಡಿದರು. ಇದಕ್ಕೆ ಮಂಟಪ್ಪ ಸಮಿತಿಯವರು ಒಲ್ಲದ ಮನಸ್ಸಿನಲ್ಲಿ ಒಪ್ಪಿಗೆ ಸೂಚಿಸಿದರು.
ಮಡಿಕೇರಿ ನಗರ ದಸರಾ ಸಮಿತಿ ಶೀಘ್ರ ಹೊಸ ಬೈಲಾ ರಚಿಸಬೇಕು. ಬೈಲಾ ರಚನೆಗೆ ಸಂಬಂಧಿಸಿದ್ದಂತೆ ಪೌರಾಯುಕ್ತರು ಸಭೆ ಕರೆಯ ಬೇಕು. ದಸರಾ ಆಚರಣೆಗೆ ಸಂಬಂಧಿಸಿದ್ದಂತೆ ಖರ್ಚು- ವೆಚ್ಚದ ಕ್ರಿಯಾಯೋಜನೆ ರೂಪಿಸಿಕೊಳ್ಳಬೇಕೆಂದು ಹಿರಿಯರಾದ ಟಿ.ಪಿ. ರಮೇಶ್ ಸಲಹೆ ನೀಡಿದರು.
ರಾಜ್ಯ ಸರ್ಕಾರ ಮಂಜೂರು ಮಾಡಿರುವ ೧ ಕೋಟಿ ರೂ. ಅನುದಾನ ಶೀಘ್ರ ಬಿಡುಗಡೆ ಆಗುವಂತೆ ಮಾಡಬೇಕು. ಸಕಾಲದಲ್ಲಿ ಮಂಟಪ ಹೊರಡಿಸಬೇಕು. ಜನಮೆಚ್ಚುವ ರೀತಿ ಮಂಟಪಗಳು ಪ್ರದರ್ಶನ ನೀಡಬೇಕು. ವಿನೂತನ ಸಾಂಸ್ಕೃತಿಕ ಕಾರ್ಯಕ್ರಮ ಮಾಡಬೇಕೆಂದು ಮಾಜಿ ಕಾರ್ಯಾಧ್ಯಕ್ಷ ಜಿ.ರಾಜೇಂದ್ರ ಹೇಳಿದರು.
ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ದಸರಾ ಸಮಿತಿ ಖಜಾಂಚಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಶ್ವೇತಾ ಪ್ರಶಾಂತ್, ನಿಕಟಪೂರ್ವ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಹಿರಿಯರಾದ ಎಸ್.ಸಿ. ಸುಬ್ರಮಣಿ, ಸತೀಶ್ ಪೈ ಮತ್ತಿತರರು ಇದ್ದರು.
ಅನುದಾನ ಹಂಚಿಕೆ
೧ ಕೋಟಿ ರೂ. ಹಣದಲ್ಲಿ ಶೇ.೧೮ ರಷ್ಟು ಜಿಎಸ್‌ಟಿ (೧೮ ಲಕ್ಷ) ಪಾವತಿಸಬೇಕು. ಉಳಿದ ೮೨ ಲಕ್ಷ ರೂ.ನಲ್ಲಿ ಮಂಟಪ- ಕರಗಗಳಿಗೆ ೪೧ ಲಕ್ಷ, ಕವಿಗೋಷ್ಠಿಗೆ ೫೦ ಸಾವಿರ, ಸಾಂಸ್ಕೃತಿಕ ಕಾರ್ಯಕ್ರಮ್ಕಕೆ ೧೩ ಲಕ್ಷ, ಬಹುಮಾನ, ಸ್ಮರಣಿಕೆಗೆ ೫ ಲಕ್ಷ, ವೇದಿಕೆ ಮತ್ತು ಅಲಂಕಾರಕ್ಕೆ ೧೫.೫೦ ಲಕ್ಷ, ಪೂಜೆ ಸೇರಿದ್ದಂತೆ ಇತರೆ ಖರ್ಚುಗಳಿಗೆ ೨.೮೦ ಲಕ್ಷ ರೂಪಾಯಿ ಅನುದಾನ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಹೇಳಿದರು.
**
ಜನೋತ್ಸವ ಮಡಿಕೇರಿ ದಸರಾ ವಿಜೃಂಭಣೆಯಿಂದ ಆಚರಿಸಲು ಸರ್ವರೂ ಸಹಕರಿಸಬೇಕು. ಮೈಸೂರು ಹೊರತು ಪಡಿಸಿದ್ದಂತೆ ಮಡಿಕೇರಿ ದಸರಾ ನಾಡಿನಲ್ಲಿ ಪ್ರಖ್ಯಾತಿ ಹೊಂದಿದೆ. ನಾಡಿನ ಪ್ರತಿಭೆಗಳ ಕಲಾ ಪ್ರದರ್ಶನಕ್ಕೆ ದಸರಾ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗುವುದು. ವಿವಿಧ ಚಟುವಟಿಕೆ ಮೂಲಕ ಜನೋತ್ಸವ ಅದ್ದೂರಿಯಾಗಿ ಆಚರಿಸಲಾಗುವುದು. ನೆರವಂಡ ಅನಿತಾ ಪೂವಯ್ಯ, ಅಧ್ಯಕ್ಷೆ, ಮಡಿಕೇರಿ ನಗರ ದಸರಾ ಸಮಿತಿ.