

ಮಡಿಕೇರಿ: ಮಡಿಕೇರಿಯಲ್ಲಿ ವಾರದ ಸಂತೆ ನಡೆಯುವ ಶುಕ್ರವಾರ ದಿನ ಪ್ರತಿಭಟನೆ, ಪ್ರತಿಭಟನಾ ಮೆರವಣಿಗೆಗೆ ಅನುಮತಿ ನೀಡ ಬಾರದು. ಯಾವುದೇ ದಿನಗಳಲ್ಲಿಯೂ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ಅಥವಾ ರಸ್ತೆತಡೆಗೆ ಅವಕಾಶ ನೀಡಬಾರ ದೆಂದು ಒತ್ತಾಯಿಸಿ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಘಟಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಅಲ್ಪಸಂಖ್ಯಾತರ ಘಟಕ ನಗರಾಧ್ಯಕ್ಷ ಕೆ.ಜಿ. ಪೀಟರ್ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆಗಳ ಬಗ್ಗೆ ಲಿಖಿತ ಮನವಿ ಪತ್ರದಲ್ಲಿ ವಿವರಿಸಿದ್ದಾರೆ.
ದೇಶದ ಹೆಮ್ಮೆಯ ವೀರಸೇನಾನಿ ಜನರಲ್ ಕೆ.ಎಸ್. ತಿಮ್ಮಯ್ಯ ಪ್ರತಿಮೆ ಇರುವ ಸ್ಥಳ ಅತ್ಯಂತ ಗೌರವಯುತ ಪ್ರದೇಶ. ಆದರೆ, ಇತ್ತೀಚಿನ ದಿನಗಳಲ್ಲಿ ಈ ವೃತ್ತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ಅಗೌರವದ ವಾತಾವರಣ ಸೃಷ್ಟಿಯಾಗುತ್ತಿದೆ. ಕೊಡಗಿನ ಶಿಸ್ತಿನ ವಾತಾವರಣಕ್ಕೆ ಧಕ್ಕೆಯಾಗುತ್ತಿದೆ. ವೃತ್ತದ ಪಕ್ಕದಲ್ಲೇ ಜಿಲ್ಲಾಸ್ಪತ್ರೆ ಇದೆ. ಮೈಸೂರು, ಮಂಗಳೂರು ಹೆದ್ದಾರಿಯೂ ಹಾದು ಹೋಗುತ್ತದೆ.
ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ಅಥವಾ ರಸ್ತೆ ತಡೆ ಪ್ರತಿಭಟನೆ ನಡೆಸುವುದರಿಂದ ಆಸ್ಪತ್ರೆಗೆ ರೋಗಿಗಳನ್ನು ಸಕಾಲದಲ್ಲಿ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್‌ನಲ್ಲಿ ಬರುವ ಅಥವಾ ಮೈಸೂರು, ಮಂಗಳೂರು ಆಸ್ಪತ್ರೆಗೆ ತೆರಳುವ ರೋಗಿಗಳು ಗಂಟೆಗಟ್ಟಲೆ ರಸ್ತೆಯಲ್ಲೇ ಬಾಕಿಯಾದ ಉದಾಹರಣೆಗಳಿವೆ ಎಂದು ಗಮನ ಸೆಳೆಯಲಾಗಿದೆ.
ರಸ್ತೆತಡೆ ಸಂದರ್ಭ ನೂರಾರು ವಾಹನಗಳು ಕಿಲೋಮೀಟರ್ ದೂರ ಸಾಲುಗಟ್ಟಿ ನಿಂತಿರುತ್ತವೆ. ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಅಗತ್ಯ ವಸ್ತುಗಳನ್ನು ಸಕಾಲದಲ್ಲಿ ತಲುಪಿಸಲು ಲಾರಿ ಚಾಲಕರಿಗೆ ಅಸಾಧ್ಯವಾಗಿದೆ. ಬಸ್ ಪ್ರಯಾಣಿಕರಂತು ಗಂಟೆಗಟ್ಟಲೆ ಬಸ್‌ನಲ್ಲೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸರ್ಕಾರಿ ನೌಕರರಿಗೆ, ಆಸ್ಪತ್ರೆ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗು ತ್ತಿಲ್ಲ ಎಂದಿದ್ದಾರೆ.
ಪ್ರತಿಭಟನೆ ನಡೆಸುವವರು ಮತ್ತು ಇತರರು ಮುಖಾಮುಖಿಯಾಗುವುದರಿಂದ ಘರ್ಷಣೆ ನಡೆಯುತ್ತಿದೆ. ಅಲ್ಲದೆ ಸಾರ್ವಜನಿಕ ಶಾಂತಿಭಂಗವಾಗುತ್ತಿದೆ ಎಂದು ಗಮನ ಸೆಳೆದರು.
ಇತ್ತೀಚಿನ ದಿನಗಳಲ್ಲಿ ಮಡಿಕೇರಿ ನಗರದಲ್ಲಿ ಪ್ರತಿಭಟನೆಗಳು ಮತ್ತು ಪ್ರತಿಭಟನಾ ಮೆರವಣಿಗೆಗಳು ಶುಕ್ರವಾರ ದಿನವೇ ಹೆಚ್ಚಾಗಿ ನಡೆಯುತ್ತಿದೆ. ಶುಕ್ರವಾರ ವಾರದ ಸಂತೆ ದಿನವಾಗಿದ್ದು, ಪ್ರತಿಭಟನೆಗಳಿಂದ ಜನಜೀವನಕ್ಕೆ ಅಡಚಣೆಯಾಗುತ್ತಿದೆ. ಗಂಟೆಗಟ್ಟಲೆ ವಾಹನಗಳು ನಿಲುಗಡೆ ಗೊಳ್ಳುವುದರಿಂದ ಪ್ರಯಾಣಿಕರಿಗೆ ಹಾಗೂ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ.
ಗ್ರಾಮೀಣ ಭಾಗದ ಜನರು ಹಾಗೂ ಕೂಲಿಕಾರ್ಮಿಕರು ಅಗತ್ಯ ವಸ್ತುಗಳ ಖರೀದಿಗಾಗಿ ಸಂತೆ ದಿನವಾದ ಶುಕ್ರವಾರ ಮಡಿಕೇರಿಗೆ ಆಗಮಿಸುತ್ತಾರೆ. ಪ್ರತಿ ಶುಕ್ರವಾರ ಸಾವಿರಾರು ಜನರಿಂದ ಮಡಿಕೇರಿ ನಗರ ತುಂಬಿರುತ್ತದೆ. ಈ ನಡುವೆಯೇ ಪ್ರತಿಭಟನೆ ನಡೆದಾಗ ವಸ್ತು ಖರೀದಿಗೆ ಬಂದ ಜನರಿಗೆ ತೊಂದರೆ ಎದುರಾಗುತ್ತಿದೆ.
ವಾಹನದಟ್ಟಣೆ ಹೆಚ್ಚಾಗಿ ಪರ ಊರುಗಳಿಗೆ ತೆರಳುವವರಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಶುಕ್ರವಾರದ ಪ್ರತಿಭಟನೆ ಗಳಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುವುದಲ್ಲದೆ ಕಾನೂನು ಸುವ್ಯವಸ್ಥೆಗೂ ಭಂಗ ಬರುತ್ತಿದೆ. ಇತ್ತೀಚೆಗೆ ಎರಡು ರಾಜಕೀಯ ಪಕ್ಷಗಳು ಶುಕ್ರವಾರ ದಿನದಂದೇ ಪ್ರತಿಭಟನೆಗೆ ಕರೆ ಕೊಟ್ಟ ಕಾರಣದಿಂದ ಮುಂಜಾಗೃತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಯಿತು.
ನಿಷೇಧಾಜ್ಞೆಯಿಂದಾಗಿ ಜಿಲ್ಲೆಯ ಜನ ಮತ್ತು ವರ್ತಕರು ಸಾಕಷ್ಟು ಕಷ್ಟನಷ್ಟ ಅನುಭಸಿದರು. ಮಡಿಕೇರಿ ಸಂತೆ ರದ್ದಾಗಿ ವ್ಯಾಪಾರಿಗಳು ಅಪಾರ ನಷ್ಟ ಎದುರಿಸು ವಂತಾಯಿತು. ಪ್ರವಾಸಿಗರನ್ನೇ ನಂಬಿರುವ ವಿವಿಧ ವಾಣಿಜ್ಯ ಕೇಂದ್ರಗಳು ಹಾಗೂ ಉದ್ಯೋಗಿಗಳು ಕೂಡ ನಷ್ಟಕ್ಕೊಳಗಾದರೆಂದು ಪತ್ರದಲ್ಲಿ ಉಲ್ಲೇಖಿಸ ಲಾಗಿದೆ.
ನಿಯೋಗದಲ್ಲಿ ಉಪಾಧ್ಯಕ್ಷ ಎಂ.ಎಚ್. ಶೌಕತ್, ಸಂಘಟನಾ ಕಾರ್ಯದರ್ಶಿ ರೆಹಮಾನ್ ಖಾನ್, ಖಜಾಂಚಿ ಎಂ.ಎಚ್. ಅಜೀಜ್, ನಗರ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಂ.ಎಂ. ಯಾಕುಬ್, ಸಂಘಟನಾ ಕಾರ್ಯದರ್ಶಿ ಎಂ.ಬಿ. ಕೌಶರ್ ಇದ್ದರು.