ಮಡಿಕೇರಿ ತಹಸೀಲ್ದಾರ್ ಎಡವಟ್ಟು !

2mdkm9
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಇದು ಮಡಿಕೇರಿ ತಹಸೀಲ್ದಾರ್ ಎಡವಟ್ಟು. ಒಂದು ತಿಂಗಳ ಹಿಂದೆ ಕನ್ನಡದಲ್ಲಿ ಒಬಿಸಿ ಪ್ರಮಾಣ ಪತ್ರ ನೀಡಲಾಗಿದೆ. ಆದರೆ, ಇದೇ ಪ್ರಮಾಣ ಪತ್ರ ಇಂಗ್ಲಿಷ್‌ನಲ್ಲಿ ನೀಡುವಂತೆ ಅರ್ಜಿ ಸಲ್ಲಿಸಿದಾಗ, ಅದು ನೀಡಲು ಸಾಧ್ಯವಿಲ್ಲ ಎಂದು ಕಾನೂನು ಮಾತನಾಡುತ್ತಿರುವುದು ವಿಶೇಷ.

ಯುಪಿಎಸ್‌ಸಿ ನಡೆಸುವ ಪ್ರಾಥಮಿಕ ಪರೀಕ್ಷೆ ಎದುರಿಸಲು ಸಿದ್ಧರಾಗುತ್ತಿರುವ ಯು.ಬಿ.ಮೋಕ್ಷಿತಾ ಇಂಗ್ಲಿಷ್‌ನಲ್ಲಿ ಒಬಿಸಿ ಪ್ರಮಾಣ ಪತ್ರ ಪಡೆಯಲು ವಿಫಲರಾಗಿದ್ದಾರೆ. ಸಂಪಾಜೆ ಹೋಬಳಿ ವ್ಯಾಪ್ತಿಯ ಮೇಲ್‌ಚೆಂಬು ಗ್ರಾಮದ ನಿವಾಸಿ ಊರುಬೈಲು ಕೆ.ಬಾಲಚಂದ್ರ-ಗೀತಾ ದಂಪತಿ ಪುತ್ರಿಯಾದ ಈಕೆ ಗುಜರಾತಿನ ಗೌರವ್ ಪಟೇಲ್ ಅವರನ್ನು ವಿವಾಹವಾಗಿದ್ದಾರೆ. ವಿವಾಹ ಬಳಿಕ ಪತಿಯೊಂದಿಗೆ ಮಡಿಕೇರಿಯಲ್ಲಿ ನೆಲೆಸಿದ್ದ ಈಕೆ ಪ್ರಸ್ತುತ ಬೆಂಗಳೂರಿನಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ಅಭ್ಯಾಸದಲ್ಲಿ ತೊಡಗಿದ್ದಾರೆ.

ಮಡಿಕೇರಿ ತಾಲೂಕು ಕಚೇರಿಯಿಂದ ಯು.ಬಿ.ಮೋಕ್ಷಿತಾ ಜನವರಿ 24 ರಂದು ತಹಸೀಲ್ದಾರ್ ಪಿ.ಎಸ್.ಮಹೇಶ್ ಸಹಿ ಮಾಡಿರುವ ಹಿಂದುಳಿದ ವರ್ಗಗಳ ಪ್ರವರ್ಗ 3(ಎ) ವ್ಯಾಪ್ತಿಗೆ ಬರುವ ಗೌಡ ಜಾತಿಗೆ ಸೇರಿದವರೆಂದು ಕನ್ನಡದಲ್ಲಿ ಪ್ರಮಾಣ ಪತ್ರ ಪಡೆದಿದ್ದಾರೆ. ವಾರ್ಷಿಕ ಆದಾಯ 3 ಲಕ್ಷ ರೂಪಾಯಿ ಎಂದು ಪ್ರಮಾಣ ಪತ್ರದಲ್ಲಿ ದೃಢೀಕರಿಸಲಾಗಿದೆ.

ಯುಪಿಎಸ್‌ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೇಂದ್ರ ಒಬಿಸಿ ಪ್ರಮಾಣ ಪತ್ರ ಆಂಗ್ಲ ಭಾಷೆಯಲ್ಲಿ ಬೇಕೆಂದು ಮೋಕ್ಷಿತ ಫೆಬ್ರವರಿ 24 ರಂದು ಮಡಿಕೇರಿ ತಹಸೀಲ್ದಾರ್ ಕಚೇರಿಗೆ ಲಿಖಿತ ಅರ್ಜಿ ಸಲ್ಲಿಸಿದ್ದರು. ಮಾರ್ಚ್ 3 ರೊಳಗೆ ಪ್ರಮಾಣ ಪತ್ರ ಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಕನ್ನಡ ಭಾಷೆಯಲ್ಲಿ ಪ್ರಮಾಣ ಪತ್ರ ನೀಡುವಾಗ ಇಲ್ಲದ ತೊಡಕು, ಇಂಗ್ಲೀಷ್ ಭಾಷೆಯಲ್ಲಿ ಪ್ರಮಾಣ ಪತ್ರ ನೀಡಲು ಕೋರಿದಾಗ ಎದುರಾಗಿದೆ. ಪತಿಯ ಆದಾಯದ ಅಧಿಕೃತ ದಾಖಲೆ ಸಲ್ಲಿಸಿದ್ದಲ್ಲಿ ಪರಿಶೀಲಿಸಿ, ಪ್ರಮಾಣ ಪತ್ರ ನೀಡಲಾಗುವುದೆಂದು ತಹಸೀಲ್ದಾರ್ ಪಿ.ಎಸ್. ಮಹೇಶ್ ಭರವಸೆ ನೀಡಿದ್ದರು.

ಒಬಿಸಿ ಪ್ರಮಾಣ ಪತ್ರ ಪಡೆಯಲು ಪತಿಯ ಆದಾಯದ ಅಗತ್ಯ ಇಲ್ಲ ಎಂದು ವಕೀಲರು ಮಾಹಿತಿ ನೀಡಿದ್ದಾರೆ. ಹೀಗಿದ್ದರೂ, ಪತಿಯ ಆದಾಯದ ಮಾಹಿತಿ ಕೇಳುತ್ತಿದ್ದಾರೆ. ಇಂದಿಗೂ ನನ್ನ ಎಲ್ಲ ದಾಖಲಾತಿಗಳು ಮೇಲ್ ಚೆಂಬು ಗ್ರಾಮದ ವಿಳಾಸದನ್ವಯ ಇದೆ. ಪಡಿತರ ಚೀಟಿ, ಆಧಾರ ಕಾರ್ಡ್ ಎಲ್ಲವೂ ತಂದೆ ಹೆಸರಿನೊಂದಿಗೆ ಇದೆ. ಗುಜರಾತಿನಲ್ಲಿರುವ ಪತಿಯ ವಿಳಾಸದ ಯಾವ ದಾಖಲೆಯೂ ಮಾಡಿಸಿಲ್ಲ ಎಂದು ಮೋಕ್ಷಿತ ಹೇಳುತ್ತಾರೆ.
ಮೇಲ್‌ಚೆಂಬು ಗ್ರಾಮದಲ್ಲಿ ನೆಲೆಸಿಲ್ಲ ಎಂದು ಸಂಪಾಜೆ ಗ್ರಾಮಲೆಕ್ಕಿಗರು ಮೋಕ್ಷಿತ ಅರ್ಜಿ ತಿರಸ್ಕೃರಿಸಿ, ತಾಲೂಕು ಕಚೇರಿಗೆ ರವಾನಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅದಕ್ಕೂ ಮೊದಲು, ಸಂಪಾಜೆ ಗ್ರಾಮ ನಿರೀಕ್ಷಕರು ಪತಿಯ ಆದಾಯ ದಾಖಲೆ ಸಲ್ಲಿಸುವಂತೆ ಸೂಚನೆ ನೀಡಿದ್ದರು.
ಮೇಲ್ ಚೆಂಬು ನಿವಾಸಿಯಲ್ಲ ಎಂದು ಯು.ಬಿ.ಮೋಕ್ಷಿತ ಅರ್ಜಿ ತಿರಸ್ಕರಿಸುವುದಾದಲ್ಲಿ ಜನವರಿ 24 ರಂದು ಮಡಿಕೇರಿ ತಹಸೀಲ್ದಾರ್ ಪಿ.ಎಸ್.ಮಹೇಶ್ ಸಹಿ ಮಾಡಿರುವ ಹಿಂದುಳಿದ ವರ್ಗಗಳ ಪ್ರವರ್ಗ 3 (ಎ) ಪ್ರಮಾಣ ಪತ್ರ ಹೇಗೆ ನೀಡಿದ್ದಾರೆಂಬ ಪ್ರಶ್ನೆ ಎದ್ದಿದೆ. ಒಂದು ತಿಂಗಳ ಅವಧಿಯಲ್ಲಿ ಕಾನೂನು ಬದಲಾಗಿದೆಯೇ ಎಂಬ ಜಿಜ್ಞಾಸೆ ಕಾಡಲಾರಂಭಿಸಿದೆ.

3 ಹೆಚ್ಚುವರಿ ವರ್ಷ: ಹಿಂದುಳಿದ ವರ್ಗಗಳ ಪ್ರವರ್ಗ 3(ಎ) ಪ್ರಮಾಣ ಪತ್ರ ಪಡೆಯುವುದರಿಂದ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಮೂರು ಹೆಚ್ಚುವರಿ ವರ್ಷ ಸಿಗಲಿದೆ. ಸಾಮಾನ್ಯ ವರ್ಗದವರಿಗೆ 32 ಪ್ರಾಯದವರೆಗೆ ಪರೀಕ್ಷೆ ಬರೆಯಬಹುದಾಗಿದ್ದು, ಪ್ರವರ್ಗ 3(ಎ) ಅವರಿಗೆ 35 ವರ್ಷದವರೆಗೂ ಅವಕಾಶ ದೊರೆಯಲಿದೆ. ಸಾರ್ವಜನಿಕ ಉದ್ಯೋಗದಲ್ಲಿ ಪ್ರವರ್ಗ 3(ಎ) ಅವರಿಗೆ ಶೇ.27ರಷ್ಟು ಮೀಸಲಾತಿ ದೊರೆಯಲಿದೆ. ಇದರ ಪ್ರಯೋಜನ ಪಡೆಯಲು ಮೋಕ್ಷಿತ ಪ್ರಮಾಣ ಪತ್ರ ಪಡೆಯಲು ಹರಸಾಹಸ ಪಟ್ಟು, ವಿಫಲರಾಗಿದ್ದಾರೆ.

ಒಬಿಸಿ ಕಾನೂನು: ಪಾಲಕರ ಮೂರು ವರ್ಷದ ಆದಾಯ ಗಮನದಲ್ಲಿಟ್ಟುಕೊಂಡು ಹಿಂದುಳಿದ ವರ್ಗಗಳ ಪ್ರವರ್ಗ 3(ಎ) ಪ್ರಮಾಣಪತ್ರ ನೀಡಲಾಗುತ್ತದೆ. ಪತಿಯ ಆದಾಯ ಪರಿಗಣಿಸುವ ಅಗತ್ಯ ಇಲ್ಲ. ತಹಸೀಲ್ದಾರ್ ಪ್ರಮಾಣ ಪತ್ರ ನೀಡಲು ನಿರಾಕರಿಸಿದಲ್ಲಿ ಜಿಲ್ಲಾಧಿಕಾರಿಗೆ ಅಹವಾಲು ಸಲ್ಲಿಸಬಹುದು. ಜಿಲ್ಲಾಧಿಕಾರಿಯೂ ಒಬಿಸಿ ಪ್ರಮಾಣ ಪತ್ರ ನೀಡಲು ನಿರಾಕರಿಸಿದಲ್ಲಿ ಹೈಕೋಟರ್‌ನಲ್ಲಿ ದಾವೆ ಹೂಡಬಹುದೆಂದು ಮುಂಬೈ ವಕೀಲ ಅಜಯ್ ಸೇಥಿ ಹೇಳುತ್ತಾರೆ.

ಜನವರಿ 24 ರಂದು ಮಡಿಕೇರಿ ತಹಸೀಲ್ದಾರ್ ಪಿ.ಎಸ್.ಮಹೇಶ್ ಸಹಿ ಮಾಡಿರುವ ಹಿಂದುಳಿದ ವರ್ಗಗಳ ಪ್ರವರ್ಗ 3(ಎ) ಪ್ರಮಾಣ ಪತ್ರ ಸಿಕ್ಕಿದೆ. ಇಂಗ್ಲೀಷ್‌ನಲ್ಲಿ ಈ ಪ್ರಮಾಣ ಪತ್ರ ನೀಡುವಂತೆ ಫೆಬ್ರವರಿ 24ರಂದು ಅರ್ಜಿ ಸಲ್ಲಿಸಿದ್ದು, ಈಗ ಕಾನೂನು ಮಾತನಾಡುತ್ತಿದ್ದಾರೆ. ಪ್ರಮಾಣ ಪತ್ರ ನೀಡಲು ಪತಿಯ ಆದಾಯದ ಅವಶ್ಯಕತೆ ಇಲ್ಲ ಎಂದು ವಕೀಲರು ತಿಳಿಸಿದ್ದಾರೆ. ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಲು ನಿರ್ಧರಿಸಿದ್ದೇನೆ.
ಯು.ಬಿ.ಮೋಕ್ಷಿತಾ

ಪಾಲಕರ ಆಧಾರದಲ್ಲಿ ಜಾತಿ ಪ್ರಮಾಣ ಪತ್ರ ನೀಡಬಹುದು. ಆದರೆ, ಯು.ಬಿ. ಮೋಕ್ಷಿತ ವಿವಾಹವಾಗಿದ್ದು, ಹಿಂದುಳಿದ ವರ್ಗಗಳ ಪ್ರವರ್ಗ 3(ಎ) ಪ್ರಮಾಣ ಪತ್ರ ನೀಡಲು ಪತಿಯ ಆದಾಯದ ಮಾಹಿತಿ ಬೇಕಾಗಿದೆ. ತಡವಾಗಿ ಪತಿಯ ಆದಾಯ ಮಾಹಿತಿ ನೀಡಿದ್ದು, ಇದನ್ನು ಪರಿಶೀಲಿಸಿ ಪ್ರಮಾಣ ಪತ್ರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು.
ಪಿ.ಎಸ್.ಮಹೇಶ್ ಮಡಿಕೇರಿ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net