

ಮಡಿಕೇರಿ: ಶಾಸಕರ ಮನೆಗೆ ನಾಲ್ಕು ದಿನದಿಂದ ಕರೆಂಟ್ ಇಲ್ಲ. ಅವರೇ ಸುಮ್ಮನ್ನೇ ಇದ್ದಾರೆ. ನಿಮ್ಮದೂ ಏನಿದು ಹಿಂಸೆ ಎಂದು ೫ ದಿನದಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಸೂರ್ಲಬ್ಬಿ ಗ್ರಾಮಸ್ಥರಿಗೆ ಸೆಸ್ಕ್ ಮಾದಾಪುರ ಜೆಇ ನೀಡುತ್ತಿರುವ ಉತ್ತರ. ಸೆಸ್ಕ್ ಉನ್ನತಾಧಿಕಾರಿಗಳ ಗಮನಕ್ಕೆ ತಂದಿದ್ದರೂ ವಿದ್ಯುತ್ ಮಾರ್ಗ ಸರಿ ಪಡಿಸಲು ಸಾಧ್ಯವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಐದು ದಿನದ ಹಿಂದೆ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದಿದ್ದರಿಂದ ವಿದ್ಯುತ್ ಕಂಬ ಮುರಿದು ಹಾನಿಗೀಡಾಗಿತ್ತು. ವಿದ್ಯುತ್ ಕಂಬ ರಸ್ತೆಗೆ ಅಡ್ಡಲಾಗಿ ಭಾಗಿರುವುದನ್ನು ೪ ದಿನಗಳವರೆಗೆ ತೆರವುಗೊಳಿಸದ್ದರಿಂದ ಸೂರ್ಲಬ್ಬಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ ಸಂಚಾರ ಸ್ಥಗಿತ ಗೊಂಡಿತ್ತು. ಬುಧವಾರ ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ವಿದ್ಯುತ್ ಕಂಬ ತೆರವುಗೊಳಿಸಿದ್ದು, ಗುರುವಾರದಿಂದ ಬಸ್ ಸಂಚಾರ ಪ್ರಾರಂಭವಾಗಿದೆ.
ಐದು ದಿನದಿಂದ ನಮ್ಮೂರಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ೨೨ ಮನೆ ಜನ ಕತ್ತಲೆಯಲ್ಲಿ ದಿನ ಕಳೆಯುತ್ತಿದ್ದೇವೆ. ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಜಮಾದಾಪುರ ಜೆಇ ಗಮನಕ್ಕೆ ತಂದಾಗ ಉಡಾಫೆಯಿಂದ ಉತ್ತರಿಸುತ್ತಿದ್ದಾರೆಂದು ಸೂರ್ಲಬ್ಬಿ ಗ್ರಾಮಸ್ಥರಾದ ನಾಪಂಡ ಅರುಣ್ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ಏಳು ತಿಂಗಳಿನಿಂದ ನಮ್ಮೂರಿಗೆ ಸೀಮೆಎಣ್ಣೆ ಪೂರೈಕೆ ಆಗುತ್ತಿಲ್ಲ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ನಮ್ಮೂರಿನ ಜನ ಕತ್ತಲೆಯಲ್ಲಿ ದಿನ ಕಳೆಯುವಂತಾಗಿದೆ. ದೀಪ ಹಚ್ಚಲು ಮಾದಾಪುರದಿಂದ ಡೀಸೆಲ್ ತರುವಂತಾಗಿದೆ ಎಂದು ಸೂರ್ಲಬ್ಬಿ ಗ್ರಾಮಸ್ಥರು ತಮ್ಮ ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ.