ಸರ್ಕಾರದ ಹಸ್ತಕ್ಷೇಪದಿಂದ ಮುಕ್ತ ಸೌಹಾರ್ದ ಸಹಕಾರಿ ಸಂಸ್ಥೆ

28mdkd1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಸರ್ಕಾರದ ಹಸ್ತಕ್ಷೇಪವಿಲ್ಲದೆ ಸಹಕಾರಿಗಳಿಂದ ನಡೆಯುವ ಸೌಹಾರ್ದ ಸಹಕಾರಿ ಸಂಘಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕೊಡಗು ಸೌಹಾರ್ದ ಪತ್ತಿನ ಸಹಕಾರ ನಿಯಮಿತ ಅಧ್ಯಕ್ಷ ಎಂ.ಪಿ. ಮುತ್ತಪ್ಪ ಮೆಚ್ಚುಗೆ ವ್ಯಕ್ತ ಪಡಿಸಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಆಶ್ರಯದಲ್ಲಿ ದಿ ಫೋರ್ಟ್ ಮರ್ಕರಾ ಹೋಟೆಲ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸೌಹಾರ್ದ ಸಹಕಾರಿ ನಿಯಮಿತಗಳ ಮುಖ್ಯಕಾರ್ಯನಿರ್ವಾಹಕರಗಳ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ಸಹಕಾರಿಗಳಿಂದ ನಡೆಯುವ ಸಹಕಾರ ಸಂಸ್ಥೆಗಳಲ್ಲಿ ಸರ್ಕಾರದ ಹಸ್ತಕ್ಷೇಪ ತಪ್ಪಿಸುವ ಉದ್ದೇಶದಿಂದ ೨೦೦೧ ರಿಂದ ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೆ ಬಂದಿದೆ. ಕೊಡಗಿನಲ್ಲಿ ೧೨ ಸೌಹಾರ್ದ ಸಹಕಾರಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಸಹಕಾರಿ ಸಂಸ್ಥೆಗಳನ್ನು ಸಹಕಾರಿಗಳೇ ನಡೆಸಿಕೊಂಡು ಹೋಗಬೇಕು. ಸರ್ಕಾರದ ಹಿಡಿತದಲ್ಲಿರುವ ಸಹಕಾರಿ ಸಂಸ್ಥೆಗಳು ಸಹಕಾರಿ ತತ್ವಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಸಹಕಾರಿ ಸಂಸ್ಥೆ ಉದ್ದೇಶ ಈಡೇರಲು ಸಹಕಾರಿಗಳು ಪ್ರಾಮಾಣಿಕತೆ, ಬದ್ಧತೆ ಮತ್ತು ನಿಷ್ಠೆಯಿಂದ ಕಾರ್ಯನಿರ್ವ ಹಿಸಬೇಕೆಂದರು.

ಸಹಕಾರಿ ಸಂಸ್ಥೆಯಿಂದ ತನಗೇನು ಪ್ರಯೋಜನ ಸಿಗುತ್ತದೆ ಎಂದು ಯೋಚಿಸುವವರು ಆಡಳಿತ ಮಂಡಳಿ ಜವಾಬ್ದಾರಿ ಹೊತ್ತುಕೊಳ್ಳ ಬಾರದು. ನಾನೇನು ಮಾಡಬಹುದೆಂಬ ಮನೋಭಾವ ಹೊಂದಿರುವವರು ಆಡಳಿತ ವ್ಯವಸ್ಥೆಗೆ ಬರಬೇಕು. ಕಾನೂನು, ನೀತಿ, ನಿಯಮ ಅರಿತುಕೊಂಡು ಮುಖ್ಯಕಾರ್ಯನಿರ್ವಹನಾಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಹೇಳಿದರು.

ಸಾಲ ಸೌಲಭ್ಯ ನೀಡಲು ಸದಸ್ಯರಿಂದ ಠೇವಣಿ ಸಂಗ್ರಹ ಮಾಡಬೇಕು. ಮುಲಾಜಿಗೆ ಒಳಗಾಗಿ ಸಾಲ ನೀಡಬಾರದು. ಸರ್ವ ಸದಸ್ಯರನ್ನೂ ಸಮಾನವಾಗಿ ಕಾಣಬೇಕು. ಹಣಕಾಸಿನ ನಿರ್ವಹಣೆ ಉತ್ತಮವಾಗಿ ಮಾಡಬೇಕು. ತೆರಿಗೆ, ಖಾತೆ ನಿರ್ವಹಣೆ ಬಗ್ಗೆ ಸ್ಪಷ್ಟವಾದ ಅಭಿಪ್ರಾಯ ಹೊಂದಿರಬೇಕೆಂದು ಎಂ.ಪಿ. ಮುತ್ತಪ್ಪ ಸಲಹೆ ನೀಡಿದರು.

ಆರ್ಥಿಕ ಸ್ವಾಯತತ್ತೆ ಸಾಧಿಸುವ ಮುಖ್ಯ ಉದ್ದೇಶದೊಂದಿಗೆ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸ್ವಸಾಮರ್ಥ್ಯದಿಂದ ಅಭಿವೃದ್ಧಿ ಹೊಂದಲು ಇರುವ ವ್ಯವಸ್ಥೆ ಎಂದು ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಂ.ಎಸ್. ಕೃಷ್ಣಪ್ರಸಾದ್ ಹೇಳಿದರು.

ಯಶಸ್ವಿನಿ ಯೋಜನೆ ಸದುಪಯೋಗ ಪಡೆದುಕೊಳ್ಳಲು ಸಹಕಾರ ಸಂಸ್ಥೆ ಸದಸ್ಯತ್ವ ಪಡೆಯಬೇಕು. ಸೌಹಾರ್ದ ಸಹಕಾರ ಸಂಸ್ಥೆ ಕಾರ್ಯ ನಿರ್ವಹಣೆಗೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಮಾಜಿ ನಿರ್ದೇಶಕ ಎಂ.ಕೆ. ಸೋಮಯ್ಯ ಮಾತನಾಡಿ, ಸೌಹಾರ್ದ ಸಹಕಾರಿ ಸಂಸ್ಥೆ ಸರ್ಕಾರದ ಹಸ್ತಕ್ಷೇಪವಿಲ್ಲದೆ ನಡೆಯುವ ಸಹಕಾರಿ ಸಂಸ್ಥೆಯಾಗಿದೆ. ಸಾಲ ವಸೂಲಾತಿಗೆ ಆಡಳಿತ ಮಂಡಳಿಯವರು ಹೆಚ್ಚಿನ ಮುತುವರ್ಜಿ ವಹಿಸಬೇಕೆಂದರು.

ಸೌಹಾರ್ದ ಸಹಕಾರಿ ಸಂಘಗಳ ಕಾರ್ಯನಿರ್ವಹಣೆ, ಜವಾಬ್ದಾರಿ, ಹೊಣೆಗಾರಿಕೆ ಬಗ್ಗೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಪ್ರಾಂತೀಯ ವ್ಯವಸ್ಥಾಪಕ ಶಿವಕುಮಾರ ಬಿರಾದಾರ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ತೆರಿಗೆ ಪಾವತಿ, ಖಾತೆ ನಿರ್ವಹಣೆಗೆ ಸಂಬಂಧಿಸಿದ್ದಂತೆ ಲೆಕ್ಕ ಪರಿಶೋಧಕಾ ಫ್ರಾನ್ಸಿಸ್ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕಿ ಎಂ.ಎನ್. ಹೇಮಾವತಿ ಇದ್ದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ವ್ಯವಸ್ಥಾಪಕ ಆರ್.ಎಸ್. ಸುರೇಶ್ ನಿರೂಪಿಸಿದರು. ಅಕ್ಕಮ್ಮ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net