ಪ್ರಗತಿಪಥದತ್ತ ಕೊಡಗು ಏಲಕ್ಕಿ ಸಂಘ

28mdko5 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘ ಪ್ರಗತಿಪಥದತ್ತ ಸಾಗುತ್ತಿದೆ. ಏಲಕ್ಕಿ, ಕರಿಮೆಣಸು ಮತ್ತಿತರ ಸಾಂಬಾರ ಪದಾರ್ಥಗಳನ್ನು ರೈತರು ಹಾಗೂ ಸದಸ್ಯರಿಂದ ಸಂಗ್ರಹಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ನಮ್ಮಲ್ಲಿ ಮಧ್ಯವರ್ತಿ ಅಥವಾ ಕಮಿಷನ್ ಏಜೆಂಟ್‌ಗಳಿಗೆ ಅವಕಾಶವಿಲ್ಲವೆಂದು ಸಂಘದ ಅಧ್ಯಕ್ಷ ಸೂದನ ಎಸ್.ಈರಪ್ಪ ತಿಳಿಸಿದ್ದಾರೆ.

ಸಂಘ ಪ್ರಸಕ್ತ ಸಾಲಿನಲ್ಲಿ ೮.೭೦ ಲಕ್ಷ ರೂ. ಲಾಭ ಗಳಿಸಿದೆ. ಕಳೆದ ೪೦ ವರ್ಷಗಳಿಂದ ಸ್ಥಗಿತಗೊಂಡಿದ್ದ ಏಲಕ್ಕಿ ಮಾರಾಟ ವ್ಯವಹಾರವನ್ನು ಕಳೆದ ವರ್ಷದಿಂದ ಆರಂಭಿಸಲಾಗಿದೆ. ರೈತರು ಹಾಗೂ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮಡಿಕೇರಿಯಲ್ಲಿರುವ ಸಂಘದ ಕಟ್ಟಡದಲ್ಲಿ ಸಾಂಬಾರ ಪದಾರ್ಥಗಳ ಮಾರಾಟ ಮಳಿಗೆ ತೆರೆಯಲಾಗಿದೆ. ಇದು ಲಾಭದ ಹಾದಿಯಲ್ಲಿ ಸಾಗುತ್ತಿದೆ. ಏಲಕ್ಕಿ, ಕಾಫಿ, ಕರಿಮೆಣಸು, ಜೇನು, ಏಲಕ್ಕಿ ಮಾಲೆ ಸೇರಿದಂತೆ ಕೊಡಗಿನ ಸಾಂಪ್ರದಾಯಿಕ ಖಾದ್ಯ ಮಾರಾಟ ಮಾಡಲಾಗುತ್ತಿದೆ. ಸ್ಥಳೀಯ ಗ್ರಾಹಕರು ಹಾಗೂ ಪ್ರವಾಸಿಗರು ಮಳಿಗೆಯಲ್ಲಿ ಮಾರಾಟವಾಗುತ್ತಿರುವ ಉತ್ಪನ್ನಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಜಿಲ್ಲೆಯ ಬೆಳೆಗಾರರನ್ನು ಪ್ರೋತ್ಸಾಸುವ ಭರವಸೆ ನೀಡಿದ್ದಾರೆ.

ಮಧ್ಯವರ್ತಿಗಳು ಅಥವಾ ಕಮಿಷನ್ ಏಜೆಂಟ್‌ಗಳಿಗೆ ಅವಕಾಶ ನೀಡದೆ ಇರುವುದರಿಂದ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಾಂಬಾರ ಪದಾರ್ಥ ದೊರೆಯುತ್ತಿದೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಉತ್ತಮ ಗುಣಮಟ್ಟದ ಪದಾರ್ಥಗಳನ್ನಷ್ಟೇ ಬೆಳೆಗಾರರಿಂದ ಖರೀದಿಸಿ ಗ್ರಾಹಕರಿಗೆ ನೀಡಲಾಗುತ್ತಿದೆ. ಗುಣಮಟ್ಟ ಆಧರಿಸಿ ಬೆಳೆಗಾರರ ಉತ್ಪನ್ನಗಳಿಗೆ ಯೋಗ್ಯ ಬೆಲೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಏಲಕ್ಕಿ ಬೆಳೆಗಾರರಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ೧೯೩೯ ರಲ್ಲಿ ಸ್ಥಾಪನೆಯಾದ ಸಂಘ, ಏಷ್ಯಾ ಖಂಡದಲ್ಲಿಯೇ ಹೆಸರುವಾಸಿಯಾಗಿತ್ತು. ಕೊಡಗಿನ ಏಲಕ್ಕಿ ವಿಶ್ವವ್ಯಾಪಿ ಹೆಸರು ಪಡೆದಿತ್ತು ಮತ್ತು ಏಲಕ್ಕಿಯೇ ಇಲ್ಲಿನ ಪ್ರಮುಖ ಸಾಂಬಾರ ಬೆಳೆಯಾಗಿತ್ತು. ಜುಲೈ ತಿಂಗಳಿನಿಂದ ಕೊಡಗಿನಾದ್ಯಂತ ಏಲಕ್ಕಿ ಘಮಘುಸುತ್ತಿತ್ತು. ಏಲಕ್ಕಿ ಬೆಳೆಯಿಂದ ಪರಿಸರ ಸಮತೋಲನ ಕಾಯ್ದುಕೊಂಡಿತ್ತು. ಕಟ್ಟೆ ರೋಗ ಮತ್ತಿತರ ಕಾರಣಗಳಿಂದ ೩೫ ವರ್ಷಗಳಿಂದ ಕೊಡಗಿನಲ್ಲಿ ಏಲಕ್ಕಿ ಕೃಷಿ ಹಿನ್ನಡೆ ಅನುಭವಿಸಿತು. ಇದರಿಂದ ಬೆಳೆಗಾರರು ಏಲಕ್ಕಿಯ ಮೇಲಿನ ಆಸಕ್ತಿ ಕಳೆದು ಕೊಂಡರು.

ಕೇರಳ ಕಡೆಯಿಂದ ನಿಧಾನವಾಗಿ ಕೊಡಗಿಗೆ ಏಲಕ್ಕಿ ಬೆಳೆ ಹರಿದು ಬಂತು. ಏಲಕ್ಕಿಗಾಗಿಯೇ ಸ್ಥಾಪಿತವಾದ ಕೊಡಗು ಏಲಕ್ಕಿ ಸಹಕಾರ ಸಂಘ ಕಷ್ಟ ಅನುಭವಿಸಿತು. ಸಂಘವನ್ನು ಮುನ್ನಡೆಸುವುದಕ್ಕಾಗಿ ಮಡಿಕೇರಿ ಕೇಂದ್ರ ಕಚೇರಿ ಹಾಗೂ ಸೋಮವಾರಪೇಟೆಯ ಶಾಖೆಯಲ್ಲಿ ಹತ್ಯಾರು ಮಳಿಗೆ ಆರಂಭಿಸಲಾಯಿತು.

೨೦೨೦ ರಲ್ಲಿ ತಾವು ಅಧ್ಯಕ್ಷರಾಗಿ ಅಧಿಕಾರಿ ವಹಿಸಿಕೊಂಡ ನಂತರ ಮತ್ತೆ ಕೊಡಗಿನ ಏಲಕ್ಕಿ ಖರೀದಿಸಲು ಆರಂಭಿಸಲಾಯಿತು. ಬೆಳೆಗಾರರು ಉತ್ತಮ ಸ್ಪಂದನೆ ನೀಡುತ್ತಿದ್ದಾರೆ. ರೈತ ಹಾಗೂ ಗ್ರಾಹಕರ ಪರ ಕಾರ್ಯನಿರ್ವಹಿಸುತ್ತಿರುವ ಏಲಕ್ಕಿ ಮಾರಾಟ ಸಹಕಾರ ಸಂಘವನ್ನು ಸರ್ವರು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net