ಅಮೀನ್ ಮೊಹಿಸ್ಸಿನ್ ಎಸ್‌ಡಿಪಿಐ ಹುರಿಯಾಳು

ameen mohisin - Copy
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ

ಮಡಿಕೇರಿ ನಗರಸಭೆ ಸದಸ್ಯ ಅಮೀನ್ ಮೊಹಿಸ್ಸಿನ್ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸೋಷಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಖ ಖಚಿತವಾಗಿದೆ. ಕೆಲವೇ ದಿನಗಳಲ್ಲಿ ಅಮೀನ್ ಹೆಸರು ಅಧಿಕೃತವಾಗಿ ಘೋಷಣೆಯಾಗಲಿದೆ.

ಎಸ್‌ಡಿಪಿಐ ಜಿಲ್ಲಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿರುವ ಅಮೀನ್ ಮೊಹಿಸ್ಸಿನ್, ವಕೀಲ/ ಲೆಕ್ಕಪರಿಶೋಧಕ ವೃತ್ತಿಯೊಂದಿಗೆ ಪಕ್ಷದ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಬುದ್ಧಿವಂತಿಕೆ, ಧೈರ್ಯ, ಸಂಘಟನಾ ಸಾಮರ್ಥ್ಯ ಹಾಗೂ ತೀಕ್ಷ್ಣ ಮಾತುಗಾರಿಕೆ ಮೂಲಕ ಗಮನ ಸೆಳೆದಿರುವ ಉತ್ಸಾಹಿ ಯುವ ರಾಜಕರಣಿ ಎಂಎಲ್‌ಎ ಚುನಾವಣೆಯಲ್ಲಿ ಸ್ಪರ್ಧೆ ನಿರ್ಧಾರ ಸಂಚಲನ ಮೂಡಿಸಿದೆ.

ಮಡಿಕೇರಿ ಕ್ಷೇತ್ರಕ್ಕೆ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಮಡಿಕೇರಿ ನಗರಸಭೆ ಸದಸ್ಯ ಮನ್ಸೂರ್ ಆಲಿ, ಎಸ್‌ಡಿಪಿಐ ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಉಸ್ಮಾನ್ ಸುಂಟಿಕೊಪ್ಪ ಹೆಸರು ಪರಿಶೀಲನೆಯಲ್ಲಿತ್ತು. ಮೈಸೂರಿನ ನರಸಿಂಹರಾಜ ಕ್ಷೇತ್ರ ದಲ್ಲಿ ಕಳೆದೆರಡು ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿರುವ ಅಬ್ದುಲ್ ಮಜೀದ್ ೩ನೇ ಬಾರಿಗೆ ಸ್ಪರ್ಧಿಸುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರಕ್ಕೆ ಅಮೀನ್ ಮೊಹಿಸ್ಸಿನ್ ಹೆಸರು ಅಂತಿಮಗೊಳಿಸಲಾಗಿದೆ.

ಮಡಿಕೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ೪೦ ಸಾವಿರ ಮುಸ್ಲಿಂ ಮತದಾರರಿದ್ದು, ಎಸ್‌ಡಿಪಿಐ ಸ್ಪರ್ಧೆಯಿಂದ ಕಾಂಗ್ರೆಸ್- ಜೆಡಿಎಸ್ ಗೆಲುವಿಗೆ ಅಡ್ಡಗಾಲು ಆಗುವುದು ಖಚಿತ. ಕನಿಷ್ಠ ೧೫ ಸಾವಿರ ಮತ ಪಡೆಯುವುದರ ಮೂಲಕ ತನ್ನ ಸಾಮರ್ಥ್ಯ ಪ್ರದರ್ಶಿಸಲು ಎಸ್‌ಡಿಪಿಐ ಮುಖಂಡರು ಸನ್ನದ್ಧರಾಗಿದ್ದಾರೆ.

ಸೋಲು- ಗೆಲುವಿಗಿಂತ ಎಸ್‌ಡಿಪಿಐ ಅಸ್ತಿತ್ವ ಮುಖ್ಯ ಎನ್ನುತ್ತಿದ್ದಾರೆ. ಎಸ್‌ಡಿಪಿಐ ಸ್ಪರ್ಧಿಸಿದ್ದರೂ ಬಿಜೆಪಿ ಗೆಲುವು ಸಾಧಿಸುತ್ತಾ ಬರುತ್ತದೆ. ನಮ್ಮ ಸ್ಪರ್ಧೆ ಬಿಜೆಪಿ ಗೆಲುವಿನ ಸಹಕಾರಿ ಆಗುತ್ತದೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಇನ್ನೊಬ್ಬರ ಸೋಲು- ಗೆಲುವಿನಿಂದ ನಮಗೆ ನಮ್ಮ ಪಕ್ಷದ ಅಸ್ತಿತ್ವ ಮುಖ್ಯ ಎಂದು ಎಸ್‌ಡಿಪಿಐ ನಾಯಕರು ಹೇಳುತ್ತಿದ್ದಾರೆ.

ಎಸ್‌ಡಿಪಿಐ ಬಲ

ಮಡಿಕೇರಿ ನಗರಸಭೆಯಲ್ಲಿ ಐವರು ಎಸ್‌ಡಿಪಿಐ ಸದಸ್ಯರಿದ್ದಾರೆ. ೯ ಸ್ಥಾನದಲ್ಲಿ ಎಸ್‌ಡಿಪಿಐ ಸ್ಪರ್ಧಿಸಿದ್ದು, ಈ ೯ ವಾರ್ಡ್‌ನಲ್ಲಿಯೂ ಕಾಂಗ್ರೆಸ್ ಸೋಲು ಅನುಭವಿಸಿದೆ. ಎಸ್‌ಡಿಪಿಐ ಸ್ಪರ್ಧಿಸಿದ್ದ ೯ ಕ್ಷೇತ್ರದ ಪೈಕಿ ೩ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ೧ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ.

ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್‌ಡಿಪಿಐ ಬೆಂಬಲಿತ ೬ ಗ್ರಾಮ ಪಂಚಾಯಿತಿ ಸದಸ್ಯರು ಚುನಾಯಿತರಾಗಿದ್ದಾರೆ. ಒಟ್ಟು ೨೨ ಗ್ರಾಪಂ ಸ್ಥಾನದಲ್ಲಿ ಎಸ್‌ಡಿಪಿಐ ಬೆಂಬಲಿತರು ಸ್ಪರ್ಧಿಸಿದ್ದರು.

ಕಾಂಗ್ರೆಸ್ ಸಂಧಾನ

ಮಡಿಕೇರಿ ಕ್ಷೇತ್ರದಲ್ಲಿ ಎಸ್‌ಡಿಪಿಐ ಸ್ಪರ್ಧಿಸುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಕಾಂಗ್ರೆಸ್ಸಿನಲ್ಲಿ ಚಡಪಡಿಕೆ ಪ್ರಾರಂಭವಾಗಿದೆ. ೭ ಆಕಾಂಕ್ಷಿಗಳ ನಡುವೆ ಅಭ್ಯರ್ಥಿ ಆಯ್ಕೆಯ ಸವಾಲು ಎದುರಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಎಸ್‌ಡಿಪಿಐ ಸ್ಪರ್ಧೆ ನುಂಗಲಾರದ ತುತ್ತಾಗಿದೆ.

ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್, ಕೊಡಗು ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಪಿ.ಎಂ. ಖಾಸಿಂ ಸಮ್ಮುಖದಲ್ಲಿ ಕಾಂಗ್ರೆಸ್ ಮುಖಂಡರು- ಎಸ್‌ಡಿಪಿಐ ಮುಖಂಡರ ನಡುವೆ ಸೋಮವಾರ ಸುಂಟಿಕೊಪ್ಪದಲ್ಲಿ ಮಹತ್ವದ ಸಂಧಾನದ ಮಾತುಕತೆ ನಡೆದಿದೆ. ಅಲ್ಪಸಂಖ್ಯಾತ ಮತ ವಿಭಜನೆ ಬಿಜೆಪಿಗೆ ವರದಾನವಾಗಲಿದೆ. ನಿಮ್ಮ ಸ್ಪರ್ಧೆ ಕಾಂಗ್ರೆಸ್ಸಿಗೆ ಹಾನಿವುಂಟು ಮಾಡಲಿದೆ ಎಂಬ ಆತಂಕವನ್ನು ಕಾಂಗ್ರೆಸ್ ಮುಖಂಡರು ವ್ಯಕ್ತ ಪಡಿಸಿದ್ದಾರೆ.

ಮುಸ್ಲಿಂ ವಿಚಾರಕ್ಕೆ ಸಂಬಂಧಿಸಿದ್ದಂತೆ ಕಾಂಗ್ರೆಸ್ಸಿಗರು ಗಟ್ಟಿಧ್ವನಿಯಲ್ಲಿ ಮಾತನಾಡುವುದಿಲ್ಲ. ಮುಸ್ಲಿಂ ಪರವಾಗಿಯೂ ನಿಲ್ಲುತ್ತಿಲ್ಲ. ಕೇವಲ ಓಟ್ ಬ್ಯಾಂಕ್ ಆಗಿ ಬಳಸಲಾಗುತ್ತಿದೆ ಎಂಬ ಆಕ್ಷೇಪ ಎಸ್‌ಡಿಪಿಐ ಮುಖಂಡರಿಂದ ವ್ಯಕ್ತವಾಗಿದೆ. ರಾಜ್ಯದಲ್ಲಿ ಒಂದಿಷ್ಟು ಸ್ಥಾನ ಎಂಎಲ್‌ಎ ಸ್ಥಾನ ಎಸ್‌ಡಿಪಿಐಗೆ ಬಿಟ್ಟುಕೊಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

**
ರಾಜ್ಯದ ೧೦೦ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಮಡಿಕೇರಿ ಕ್ಷೇತ್ರ ಅಭ್ಯರ್ಥಿ ಹೆಸರು ೨ನೇ ಪಟ್ಟಿಯಲ್ಲಿ ಪ್ರಕಟ ವಾಗಲಿದೆ. ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಚುನಾವಣಾ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ. ಫೆಬ್ರವರಿ ಅಂತ್ಯದೊಳಗೆ ಅಭ್ಯರ್ಥಿ ಆಯ್ಕೆಯಾಗಲಿದೆ. ಕೆ.ಬಿ. ಅಫ್ಸರ್, ಎಸ್‌ಡಿಪಿಐ ರಾಜ್ಯ ಚುನಾವಣಾ ಉಸ್ತುವಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net