

ಮಡಿಕೇರಿ: ಸಹಕಾರ ಸಂಘಗಳ ಮೂಲಕ ಸಾಲ ಪಡೆದ ರೈತರಿಂದ ಮರುಪಾವತಿ ಅವಧಿ ವಿಸ್ತರಣೆ ಕುರಿತು ಕೇಂದ್ರ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ನಗರದ ಜಿ.ಪಂ.ಭವನದಲ್ಲಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಲಗಾರರು ಜುಲೈನಲ್ಲಿ ಮರುಪಾವತಿ ಮಾಡಬೇಕಾಗಿತ್ತು. ಆದರೆ, ಪ್ರಸ್ತುತ ಸಾಕಷ್ಟು ಸಮಸ್ಯೆ ಇವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಮೂಲಕ ಕೇಂದ್ರ ಮಟ್ಟದಲ್ಲಿ ಚರ್ಚಿಸಿ ಅವಧಿ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಹಣಕಾಸು ಸಚಿವಾಲಯದ ಜತೆ ಚರ್ಚಿಸಿ ನಿರ್ಧಾರ ಕೈಗೊಂಡು ಅಧಿಸೂಚನೆ ಹೊರಡಿಸಲಾಗುವುದು ಎಂದರು.
ಈಗಾಗಲೇ ರಾಜ್ಯದಲ್ಲಿ ಲಕ್ಷಾಂತರ ರೈತರಿಗೆ 3,500 ಕೋಟಿ ರೂ. ಸಾಲ ನೀಡಲಾಗಿದೆ. ಇದನ್ನು ಹೆಚ್ಚು ಮಾಡುವ ಗುರಿ ಹೊಂದಲಾಗಿದೆ. ಏಪ್ರಿಲ್ 1 ರಿಂದ ಸಾಲ ನೀಡುವ ಪ್ರಕ್ರಿಯೆ ಶುರುವಾಗಿದೆ. ಪ್ರತಿಯೊಬ್ಬ ರೈತನಿಗೂ ಸಾಲ ನೀಡಬೇಕೆಂಬ ಗುರಿ ಸರ್ಕಾರಕ್ಕಿದೆ ಎಂದರು.
ರಾಜ್ಯದಲ್ಲಿ 42,685 ಆಶಾ ಕಾರ್ಯಕರ್ತರು ಹಗಲಿರುಳು ಆರೋಗ್ಯ ಪಾಲನೆಗೆ ದುಡಿದಿದ್ದಾರೆ. ಸ್ಥಳೀಯರ ಸಹಕಾರ ಸಂಘಗಳ ಮೂಲಕ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಕೊಡಗು ಜಿಲ್ಲೆ ಸೇರಿ ರಾಜ್ಯದ ಎಲ್ಲಾ ಸಹಕಾರ ಸಂಘಗಳಿಂದ 53 ಕೋಟಿ ರೂ. ಸಂಗ್ರಹಿಸಿ ಕೋವಿಡ್ ಪರಿಹಾರ ನಿಧಿಗೆ ನೀಡಲಾಗಿದೆ. ಈಗಾಗಲೇ 21 ಸಾವಿರ ಆಶಾ ಕಾರ್ಯಕರ್ತೆಯರಿಗೆ ಧನ ಕೈಸೇರಿದೆ. 15 ದಿನದೊಳಗೆ ಉಳಿದವರಿಗೆ ವಿತರಣೆ ಪೂರ್ಣಗೊಳ್ಳಲಿದೆ ಎಂದರು.