

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಮಡಿಕೇರಿಯ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಅರ್ಜಿಗಳು ಸಕಾಲದಲ್ಲಿ ವಿಲೇವಾರಿಯಾಗುತ್ತಿಲ್ಲ ಎಂದು ಕೊಡಗು ಜಿಲ್ಲಾ ವಾಹನ ಚಾಲಕರ ಮತ್ತು ಮಾಲೀಕರ ಸಂಘ ಅಧ್ಯಕ್ಷ ಎಂ.ಎ. ಉಸ್ಮಾನ್ ಆರೋಪಿಸಿದ್ದಾರೆ. ೧೦ ದಿನಗಳೊಳಗೆ ಪರಿಸ್ಥಿತಿ ಸುಧಾರಿಸದಿ ದ್ದಲ್ಲಿ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಯೊಬ್ಬರು ವಿನಾಕಾರಣ ಅರ್ಜಿ ತಿರಸ್ಕರಿಸುತ್ತಿದ್ದಾರೆ. ಮಡಿಕೇರಿ ನಗರದಿಂದ ೯ ಕಿ.ಮೀ ದೂರದಲ್ಲಿರುವ ಆರ್‌ಟಿಒ ಕಚೇರಿಗೆ ನಿತ್ಯ ಹೋಗಿ ಬರಲು ವಾಹನ ಚಾಲಕರು ಪರದಾಡುತ್ತಿದ್ದಾರೆ. ಖಾಸಗಿ ಸಂಸ್ಥೆಯೊಂದರ ವಾಹನಗಳನ್ನು ಮಾತ್ರ ನೋಂದಣಿ ಮಾಡುತ್ತಿ
ರುವ ಅಧಿಕಾರಿ, ಇತರ ವಾಹನ ಮಾಲೀಕರ ಮತ್ತು ಚಾಲಕರ ವಾಹನಗಳನ್ನು ನೋಂದಣಿ ಮಾಡದೆ ಸತಾಯಿಸುತ್ತಿದ್ದಾರೆ. ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.
ಅಧಿಕಾರಿ ಮುಕ್ತವಾಗಿ ಅರ್ಜಿದಾರರಿಗೆ ಸಿಗುತ್ತಿಲ್ಲ, ಚಾಲಕರ ಸಮಸ್ಯೆ ಆಲಿಸುತ್ತಿಲ್ಲ. ಕಚೇರಿ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಇಲ್ಲಸಲ್ಲದ ನೆಪವೊಡ್ಡಿ ಅರ್ಜಿ ತಿರಸ್ಕರಿಸಲಾಗುತ್ತಿದೆ. ನಿತ್ಯ ಮಾನಸಿಕ ಕಿರುಕುಳದಿಂದಾಗಿ ಚಾಲಕರು ಬೇಸತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ವಾಹನ ಮಾಲೀಕರು ತಮ್ಮ ವಾಹನ ಮಾರಾಟ ಮಾಡಲಾಗದೆ ಚಿಂತೆಗೀಡಾಗಿದ್ದಾರೆಂದು ದೂರಿದ್ದಾರೆ.
ಚಾಲಕರಿಗೆ ತೊಂದರೆ ನೀಡುತ್ತಿರುವ ಅಧಿಕಾರಿಯನ್ನು ತಕ್ಷಣ ವರ್ಗಾವಣೆಗೊಳಿಸದಿದ್ದಲ್ಲಿ ಜಿಲ್ಲೆಯ ಎಲ್ಲಾ ವಾಹನ ಚಾಲಕರು ತಮ್ಮ ತಮ್ಮ ವಾಹನಗಳನ್ನು ಆರ್‌ಟಿಒ ಕಚೇರಿ ಎದುರು ನಿಲ್ಲಿಸಿ ಧರಣಿ ನಡೆಸಲಿದ್ದಾರೆ. ಸಾರಿಗೆ ಆಯುಕ್ತರಿಗೆ ಅಧಿಕಾರಿ ವಿರುದ್ಧ ದೂರು ನೀಡಲಾಗಿದೆ ಎಂದಿದ್ದಾರೆ.