

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಅಬಕಾರಿ ಇಲಾಖೆಯಿಂದ ರೋಟರಿ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ರಕ್ತದಾನ, ನೇತ್ರದಾನ ಶಿಬಿರ ಹಾಗೂ ಏಡ್ಸ್ ಜಾಗೃತಿ ಕಾರ್ಯ ಕ್ರಮ ನಡೆಯಿತು. ೬೧ ಜನ ರಕ್ತದಾನ ಮಾಡಿದರು. ೧೬ ಜನ ನೇತ್ರದಾನ ಮಾಡಲು ಒಪ್ಪಿಗೆ ನೀಡಿದರು.
ಅಬಕಾರಿ ನಿರೀಕ್ಷಕಿ ವಿ. ಸ್ವರ್ಣಶ್ರೀ ಮಾತನಾಡಿ, ರಕ್ತ ಹಾಗೂ ನೇತ್ರ ದಾನಕ್ಕೆ ದೇಶದಲ್ಲಿ ಬೇಡಿಕೆ ಹೆಚ್ಚಿದೆ. ಜನಜಾಗೃತಿ ಕೊರತೆಯಿಂದ ಬೇಡಿಕೆ ಗೆ ತಕ್ಕಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ವಿಜ್ಞಾನ ಅಭಿವೃದ್ಧಿಯಾದರು ರಕ್ತ ತಯಾರಿಸಲು ಸಾಧ್ಯವಾಗಿಲ್ಲ. ಗ್ರಾಮೀಣ ಭಾಗದಲ್ಲಿ ರಕ್ತದಾನ ಹಾಗೂ ನೇತ್ರದಾನ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯತೆ ಇದೆ ಎಂದರು.
ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ಕಾಳಿಮಾಡ ಕರುಂಬಯ್ಯ ಮಾತನಾಡಿ, ರಕ್ತದಾನ ಶಿಬಿರ ಹೆಚ್ಚು ಆಯೋಜಿಸಿದರೆ ಜೀವ ಉಳಿಸಲು ಸಹಕಾರಿ ಆಗಲಿದೆ. ಯುವಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕೆಂದರು. ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರ ಡಾ. ಕೃಪಾಲಿನಿ ನೇತ್ರದಾನ ಮಹತ್ವ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕಿ ಸುನೀತಾ ಮುತ್ತಣ್ಣ ಏಡ್ಸ್ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮಡಿಕೇರಿ ರೋಟರಿ ಸಂಸ್ಥೆ ಅಧ್ಯಕ್ಷ ಕಾರ್ಯಪ್ಪ ಮಾತನಾಡಿ, ಸಮಾಜ ಸೇವೆಗೆ ರೋಟರಿ ಸಂಸ್ಥೆ ಸದಾ ಸಹಕಾರ ನೀಡುತ್ತದೆ ಎಂದರು.
ಎಚ್‌ಡಿಎಫ್‌ಸಿ ಬ್ಯಾಂಕ್ ವ್ಯವಸ್ಥಾಪಕ ನಾರಾಯಣ ಮಾತನಾಡಿ, ಸಮಾಜ ಸೇವೆಯಲ್ಲಿ ಪಾಲ್ಗೊಳ್ಳುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.