

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಮಡಿಕೇರಿ ರೋಟರಿ ಸಂಸ್ಥೆ ಆಶ್ರಯದಲ್ಲಿ ಅ.೧೫ ಮತ್ತು ೧೬ ರಂದು ಮಡಿಕೇರಿಯಲ್ಲಿ ಜಿಲ್ಲಾಮಟ್ಟದ ಚೆಸ್ ಪಂದ್ಯಾವಳಿ ಆಯೋಜಿಸ ಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಕೆ.ಸಿ. ಕಾರ್ಯಪ್ಪ ಹೇಳಿದ್ದಾರೆ.
ಮಡಿಕೇರಿಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೩ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ೧೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹಾಗೂ ಮುಕ್ತ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ೧೦೦ ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಅ.೧೨ ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಮುಕ್ತ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ೫ ಸ್ಥಾನ ಪಡೆಯುವವರಿಗೆ ಕ್ರಮವಾಗಿ ೭,೫೦೦, ೫,೦೦೦, ೩,೦೦೦, ೨,೫೦೦ ಹಾಗೂ ೨,೦೦೦ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ. ೧೬ ಮತ್ತು ೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಟ್ರೋಫಿ ನೀಡಲಾಗುತ್ತದೆ ಎಂದು ಕೆ.ಸಿ. ಕಾರ್ಯಪ್ಪ ಮಾಹಿತಿ ನೀಡಿದರು.
ಅ.೧೪ ರಂದು ಆಸಕ್ತರಿಗೆ ಉಚಿತವಾಗಿ ಚೆಸ್ ತರಬೇತಿ ನೀಡಲಾಗುತ್ತದೆ. ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ಜಂಟಿ ಕಾರ್ಯದರ್ಶಿ ಕೆ.ವಿ. ಶ್ರೀಪಾದ್, ಖ್ಯಾತ ಚೆಸ್ ಆಟಗಾರ ಉಮೇಶ್ ತರಬೇತಿ ನೀಡಲಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಚೆಸ್ ಆಟ ಪ್ರಚಾರ ನಡೆಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಹೊಸದಾಗಿ ಚೆಸ್ ಸಂಸ್ಥೆ ಪ್ರಾರಂಭಿಸುವ ಉದ್ದೇಶವೂ ಇದೆ ಎಂದು ಯೂತ್ ಸರ್ವೀಸ್ ನಿರ್ದೇಶಕ ಸಿ.ಟಿ. ಮಂದಣ್ಣ ಹೇಳಿದರು.
ಸ್ಪರ್ಧೆ ಮತ್ತು ತರಬೇತಿ ಬಗ್ಗೆ ಹೆಚ್ಚಿನ ಮಾಹಿತಿಗೆ ಕೆ.ಸಿ. ಕಾರ್ಯಪ್ಪ (೯೮೪೫೦೦೬೩೧೩), ಸಿ.ಟಿ. ಮಂದಣ್ಣ (೯೪೪೮೧೦೮೩೬೪) ಅವರನ್ನು ಸಂಪರ್ಕಿಸಬಹುದು. ಗೋಷ್ಠಿಯಲ್ಲಿ ರೋಟರಿ ಸಂಸ್ಥೆಯ ತೀತಮಾಡ ಪೊನ್ನಣ್ಣ, ಲಲಿತಾ ರಾಘವ ಇದ್ದರು.