ಕೊಡಗಿನ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ 1 ಗಂಟೆ ರಸ್ತೆತಡೆ ಪ್ರತಿಭಟನೆ

15mdkm3 - Copy
Published on

ಮಡಿಕೇರಿ: ನರಹಂತಕ ಹುಲಿ ಕೊಲ್ಲಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದಲ್ಲಿ ಸೋಮವಾರ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ೧ ಗಂಟೆ ರಸ್ತೆತಡೆ ಪ್ರತಿಭಟನೆ ನಡೆಯಿತು.

ಮಧ್ಯಾಹ್ನ ೧೨.೧೫ ಗಂಟೆಯಿಂದ ೧.೧೫ ಗಂಟೆಯವರೆಗೆ ಮಾನವ ಸರಪಳಿ ನಿರ್ಮಿಸುವುದರ ಮೂಲಕ ರಸ್ತೆ ಸಂಚಾರಕ್ಕೆ ತಡೆವೊಡ್ಡ ಲಾಯಿತು. ಇದರಿಂದ ಮಂಗಳೂರು, ಮೈಸೂರು, ವಿರಾಜಪೇಟೆ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡ್ಡಿವುಂಟಾಯಿತು. ರಸ್ತೆ ತಡೆ ಸಂದರ್ಭ ತುರ್ತು ವಾಹನಗಳಿಗೆ ಮಾತ್ರ ತೆರಳಲು ಅವಕಾಶ ನೀಡಲಾಯಿತು.

ಮೂವರು ಹುಲಿ ದಾಳಿಗೆ ಜೀವ ಕಳೆದುಕೊಂಡಿದ್ದು, ಕನಿಷ್ಠ ಸಾಂತನ್ವ ಹೇಳಲು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಆಗಮಿಸಿಲ್ಲ. ಕೊಡಗಿ ಗೆ ಭೇಟಿ ನೀಡುವ ಬದಲು ಪಶ್ಚಿಮಬಂಗಾಳ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ ಎಂದು ಮನು ಸೋಮಯ್ಯ ಪ್ರಶ್ನಿಸಿದರು.

ಕೊಡಗಿಗೆ ಭೇಟಿ ನೀಡುವುದರ ಮೂಲಕ ಅರಣ್ಯ ಸಚಿವರು ಹುಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಪ್ರಾಣಿ, ಪಕ್ಷಿ, ಪರಿಸರ ಬೇಕು. ಕೊಡಗಿನ ಮೂಲನಿವಾಸಿಗಳು ಪರಿಸರ ಪೂಜೆ ಮಾಡುವವರು. ಹುಲಿ, ಪ್ರಾಣಿ ರಕ್ಷಣೆಗೆ ಮಾತ್ರ ಕಾನೂನು ಇರುವುದಾ ಎಂದು ಮನು ಸೋಮಯ್ಯ ಆಕ್ರೋಶ ವ್ಯಕ್ತ ಪಡಿಸಿದರು.

ಪರಿಸರವಾದಿಗಳ ಒತ್ತಡದಿಂದ ಅರಣ್ಯ ಇಲಾಖೆ ಹುಲಿ ಕಾರ್ಯಾಚರಣೆ ಸಮರ್ಪಕವಾಗಿ ಮಾಡುತ್ತಿಲ್ಲ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ದೂಷಿಸಿದರು. ಸಚಿವರು ಹುಡುಗಿಯರ ಹಿಂದೆ ಬಿದ್ದಿದ್ದಾರೆ. ಹುಲಿ ಹಿಂದೆ ಬಿದ್ದಿಲ್ಲ ಎಂದು ಹಿರಿಯರಾದ ಚೆಕ್ಕೇರ ಕಾಶಿ ಕಾಳಯ್ಯ ವ್ಯಂಗ್ಯವಾಡಿದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿದರು.

ಆತ್ಮರಕ್ಷಣೆಗೆ ಕೋವಿ

ಆತ್ಮ ರಕ್ಷಣೆಗೆ ಕಾನೂನಿನಲ್ಲಿ ಬಂದೂಕು ಬಳಸಲು ಅವಕಾಶ ಇದೆ. ಇದನ್ನು ನರಹಂತಕ ಹುಲಿಗೆ ಬಳಸಬೇಕು. ಆ ಸಂದರ್ಭ ಊರಿಗೆ ಊರು, ನಾಡಿಗೆ ನಾಡು ಗುಂಡಿಕ್ಕಿದ್ದ ವ್ಯಕ್ತಿಯ ಬೆಂಬಲಕ್ಕೆ ನಿಲ್ಲಬೇಕೆಂದು ಕೊಡವ ಸಮಾಜಗಳ ಒಕ್ಕೂಟ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಕರೆ ನೀಡಿದರು.

ಮನುಷ್ಯ ಇಲ್ಲದ ಮೇಲೆ ಪ್ರಾಣಿ, ಪಕ್ಷಿ, ಮರ, ಗಿಡ ಏಕೆ ಬೇಕು. ಹುಲಿ ದಾಳಿಗೆ ಮೂವರು ಜೀವ ಕಳೆದುಕೊಂಡಿದ್ದಾರೆ. ಹೀಗಿದ್ದರೂ, ಅರಣ್ಯಾಧಿಕಾರಿಗಳಿಗೆ ಕರುಣೆ, ಕನಿಕರ ಇಲ್ಲ. ಶಾಸನ ಸಭೆಯಲ್ಲಿರುವವರು ಅವರದ್ದೇ ಲೋಕದಲ್ಲಿದ್ದಾರೆ. ಹುಲಿ ಕಾರ್ಯಾಚರಣೆಗೆ ಪಿಸಿಸಿಎಫ್ ಜನ ಬೆಂಬಲ ಕೇಳಿದ್ದರು. ಆದರೆ, ಅರಣ್ಯ ಇಲಾಖೆ ಜವಾಬ್ದಾರಿಯಿಂದ ಕಾರ್ಯಾಚರಣೆ ಮಾಡುತ್ತಿಲ್ಲ ಎಂದು ವಿಷ್ಣು ಕಾರ್ಯಪ್ಪ ಟೀಕಿಸಿದರು.

ಆಸ್ತಿ, ಪ್ರಾಣ ರಕ್ಷಣೆಗೆ ಕೋವಿ ನೀಡಲಾಗಿದೆ. ಶಾಸಕರು ಹೇಳಿದ್ದಂತೆ ಹುಲಿಗೆ ಗುಂಡು ಹೊಡೆಯಲು ಸಾಧ್ಯವಾಗುವುದಿಲ್ಲ. ಕೇಸ್ ದಾಖಲಾದ ಮೇಲೆ ಅವರು ಬರುವುದಿಲ್ಲ. ರೈತ ಸಂಘದ ಹೋರಾಟಕ್ಕೆ ವಕೀಲರ ಸಂಘ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಮಡಿಕೇರಿ ವಕೀಲರ ಸಂಘ ಅಧ್ಯಕ್ಷ ಕಾರೇರ ಕವನ್ ಘೋಷಿಸಿದರು.

ಕೊಡಗಿಗೆ ಬನ್ನಿ ಲಿಂಬಾವಳಿ

ಅರಣ್ಯ ಸಚಿವ ಅರವಿಂದ ಲಿಂಬಾವಳಿ ಕೊಡಗಿಗೆ ಖುದ್ದು ಭೇಟಿ ನೀಡುವುದರ ಮೂಲಕ ನರಹಂತಕ ಹುಲಿ ಹಾವಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಮಾಜಿ ಸಚಿವ ಎಂ.ಸಿ. ನಾಣಯ್ಯ ಆಗ್ರಹಿಸಿದರು. ಒಂದು ದಿನ ಅಧಿವೇಶನ ಬಿಟ್ಟು ಕೊಡಗಿಗೆ ಅರಣ್ಯ ಸಚಿವರು ಆಗಮಿಸಬೇಕೆಂದು ಪಟ್ಟುಹಿಡಿದರು.

ರೈತರ ಹೋರಾಟಕ್ಕೆ ಸರ್ಕಾರ ಸಕಾರತ್ಮಕವಾಗಿ ಸ್ಪಂದಿಸಬೇಕು. ರಾಜಕೀಯ ರಹಿತ ಹೋರಾಟ ನಡೆಯುತ್ತಿದೆ. ಹುಲಿ, ಆನೆ, ಚಿರತೆ ಹಾವಳಿ ಕೊಡಗಿನಲ್ಲಿ ಹೆಚ್ಚಾಗಿದೆ. ಇದು ಬದುಕಿನ ಹೋರಾಟ. ಪ್ರವಾಸಿಗರು ಕೊಡಗಿಗೆ ಬರುವುದು ನಿಂತಲ್ಲಿ ಕೊಡಗು ಉಳಿಯುತ್ತದೆ ಎಂದು ಹೇಳಿದರು.

ಶಾಸಕರ ವಿರುದ್ದ ಆಕ್ರೋಶ

ಬಾಳೆಲೆಯಲ್ಲಿ ಬೆಳೆಗಾರರೊಬ್ಬರು ತಮ್ಮ ತೋಟದಲ್ಲಿದ್ದ ಹಂದಿಗೆ ಗುಂಡು ಹೊಡೆದಿದ್ದಕ್ಕೆ ಶಾಸಕರು ರಕ್ಷಣೆಗೆ ಬರಲಿಲ್ಲ. ಈಗ ಹುಲಿಗೆ ಗುಂಡು ಹೊಡೆಯಲು ಹೇಳುತ್ತಿದ್ದಾರೆಂದು ಕೆಪಿಸಿಸಿ ಸದಸ್ಯ ಕದ್ದಣಿಯಂಡ ಹರೀಶ್ ಬೋಪಣ್ಣ ಅಸಮಾಧಾನ ವ್ಯಕ್ತ ಪಡಿಸಿದರು. ಶಾಸಕರ ಪ್ರಚೋದನೆಯಿಂದ ಹುಲಿಗೆ ಗುಂಡು ಹೊಡೆದ್ದಲ್ಲಿ ನಾಲ್ಕೈದು ವರ್ಷ ಜೈಲಿನಲ್ಲಿರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹುಲಿ ಕೊಲ್ಲಲು ಹೇಳಿ ಒಬ್ಬ ಶಾಸಕ ಕೇರಳದಲ್ಲಿ ಚುನಾವಣೆ ಪ್ರಚಾರಕ್ಕೆ ಹೋಗಿದ್ದಾರೆ. ಶಾಸಕರು ನಮ್ಮನ್ನು ಎಷ್ಟು ಸಲ ಮೂರ್ಖರನ್ನಾಗಿ ಮಾಡುತ್ತಾರೆ. ಹುಲಿಗೆ ಗುಂಡು ಹೊಡೆಯಲು ಶಾಸಕರು ಜನರಿಗೆ ಹೇಳಿರುವುದು ಸರಿಯಲ್ಲ. ೨೫ ವರ್ಷದಿಂದ ಶಾಸಕರಾಗಿರುವವರಿಗೆ ಅರಣ್ಯ ಸಚಿವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಸಿಎಂ ಎದುರು, ಶಾಸನ ಸಭೆಯಲ್ಲಿ ಮಾತನಾಡಲು ಶಾಸಕರಿಗೆ ಧೈರ್ಯವಿಲ್ಲ. ಉಸ್ತುವಾರಿ ಸಚಿವ ರು ಇತ್ತ ಸುಳಿಯುತ್ತಿಲ್ಲ ಎಂದು ಟೀಕಿಸಿದರು.

೩ ಜನರನ್ನು ಕೊಂದಿದ್ದಕ್ಕೆ ಇಷ್ಟೊಂದು ಹೋರಾಟ ಬೇಕಾ ಎಂದು ಅರಣ್ಯಾಧಿಕಾರಿಗಳು ಹೇಳುತ್ತಿದ್ದಾರೆ. ಹುಲಿ ಭಯದಿಂದ ರೈತರು, ಕಾರ್ಮಿಕರು ತೋಟಕ್ಕೆ ಹೋಗುತ್ತಿಲ್ಲ ಎಂದರು.

======

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net