

ಮಡಿಕೇರಿ: ರೆಡ್‌ಕ್ರಾಸ್ ಸಂಸ್ಥೆಯಿಂದ 1.30 ಕೋಟಿ ರೂ.ವೆಚ್ಚದಲ್ಲಿ ಮಡಿಕೇರಿಯಲ್ಲಿ ನಿರ್ಮಿಸಲಾಗುತ್ತಿರುವ ರೆಡ್‌ಕ್ರಾಸ್ ಭವನ ಕಾಮಗಾರಿಗೆ ಸ್ಟೀವರ್ಟ್ ಹಿಲ್‌ನಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಗುರುವಾರ ಭೂಮಿಪೂಜೆ ನೆರವೇರಿಸಿದರು.
ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಸಭಾಪತಿ ನಾಗಣ್ಣ ಮಾತನಾಡಿ, ಕೊಡಗಿನಲ್ಲಿ 2 ವರ್ಷ ಪ್ರಕೃತಿ ವಿಕೋಪ ಸಂಭವಿಸಿದ್ದನ್ನು ಗಮನಿಸಿದ್ದೇವೆ. ಮುಂದೆ ಪ್ರಕೃತಿ ವಿಕೋಪ ಸಂಭವಿಸಿದ್ದಲ್ಲಿ ರೆಡ್‌ಕ್ರಾಸ್ ಸಂಸ್ಥೆಯಿಂದ ಸಕಾಲದಲ್ಲಿ ಸಂತ್ರಸ್ತರಿಗೆ ಅಗತ್ಯ ನೆರವು ನೀಡುವ ಉದ್ದೇಶದಿಂದ ಮಡಿಕೇರಿಯಲ್ಲಿ ರೆಡ್‌ಕ್ರಾಸ್ ಭವನ ನಿರ್ಮಿಸಲಾಗುತ್ತಿದೆ ಎಂದರು.
ಭವನ ನಿರ್ಮಾಣಕ್ಕೆ ಜಿಲ್ಲಾ ಘಟಕದಲ್ಲಿ 50 ಲಕ್ಷ ರೂ.ಅನುದಾನ ಲಭ್ಯವಿದ್ದು, ರಾಜ್ಯ ಘಟಕದಿಂದ 25 ಲಕ್ಷ ರೂ.ನೀಡಲಾಗಿದೆ. ಮುಂದಿನ ಹಂತದಲ್ಲಿ 10 ಲಕ್ಷ ರೂ.ಅನುದಾನ ನೀಡಲಾಗುವುದು. ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾದ ರೆಡ್‌ಕ್ರಾಸ್‌ಗೆ ಜನಪ್ರತಿನಿಧಿಗಳು ನೀಡುವ ಅನುದಾನ ಬಳಸಿಕೊಂಡು ಸುಸಜ್ಜಿತ ಸಭಾ ಭವನ, ಗೋದಾಮು, ಕಚೇರಿ ನಿರ್ಮಿಸಲಾಗುವುದು ಎಂದರು.
ರೆಡ್‌ಕ್ರಾಸ್ ಕೊಡಗು ಸಭಾಪತಿ ಬಿ.ಕೆ.ರವೀಂದ್ರ ರೈ ಮಾತನಾಡಿ, 1.30 ಕೋಟಿ ರೂ.ವೆಚ್ಚದಲ್ಲಿ 12.50 ಸೆಂಟ್ ಜಾಗದಲ್ಲಿ ನಿರ್ಮಾಣವಾಗುತ್ತಿರುವ ರೆಡ್‌ಕ್ರಾಸ್ ಭವನವನ್ನು 1 ವರ್ಷದಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಿಸಲಾಗುವುದು ಎಂದರು.
ಜಿಲ್ಲಾ ಪ್ರಧಾನ ಕಾರ್ಯದಶಿ ಎಚ್.ಆರ್. ಮುರಳೀಧರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ 1952ರಲ್ಲಿ ರೆಡ್‌ಕ್ರಾಸ್ ಸಂಸ್ಥೆ ಪ್ರಾರಂಭವಾಯಿತು. ಕೊಡಗು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿ.ಎಂ. ಪೂಣಚ್ಚ, ಕಮಿಷನರ್ ಬೇಡಿ ಅವರ ಆಸಕ್ತಿಯಿಂದ ಪ್ರಾರಂಭವಾಯಿತು ಎಂದರು.
ರಾಜ್ಯ ರೆಡ್‌ಕ್ರಾಸ್ ಸಂಸ್ಥೆ ಮಾಜಿ ಪ್ರಧಾನ ಕಾರ್ಯದರ್ಶಿ ಅಶೋಕ್‌ಕುಮಾರ್ ಶೆಟ್ಟಿ ಮಾತನಾಡಿ, ಕೊಡಗು ಜಿಲ್ಲಾ ರೆಡ್‌ಕ್ರಾಸ್‌ನ ಸ್ವಂತ ಭವನದ ಕನಸು ಇದೀಗ ನನಸಾಗುವ ಹಂತದಲ್ಲಿದೆ ಎಂದು ಶ್ಲಾಘಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ವಿಶಾಲ್, ನಿರ್ಮಿತಿ ಕೇಂದ್ರದ ಅಧಿಕಾರಿ ಸಚಿನ್, ಶಕ್ತಿ ಪತ್ರಿಕೆ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ನಗರಸಭೆ ಪೌರಾಯುಕ್ತ ಎಂ.ಎಲ್.ರಮೇಶ್, ರೆಡ್‌ಕ್ರಾಸ್ ಜಿಲ್ಲಾ ಉಪಾಧ್ಯಕ್ಷರಾದ ಎಚ್.ಟಿ.ಅನಿಲ್, ಸ್ಯಾಮ್ ಜೊಸೇಫ್, ನಿರ್ದೇಶಕರಾದ ಪ್ರಸಾದ್‌ಗೌಡ, ಕೆ.ಡಿ.ದಯಾನಂದ್, ಎಂ.ಧನಂಜಯ್, ಕಚೇರಿ ಕಾರ್ಯದರ್ಶಿ ಕೌಶಿ ಪೊನ್ನಮ್ಮ ಮತ್ತಿತರರು ಇದ್ದರು.