ವಿಪತ್ತು ಸಂಭವಿಸಿದ ತಕ್ಷಣ ಸಂತ್ರಸ್ತರಿಗೆ ಸ್ಪಂದಿಸಿ

19mdkn1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ


ವಿಪತ್ತು ಸಂಭವಿಸಿದ ತಕ್ಷಣ ತಡಮಾಡದೇ ನಮ್ಮ ಕೈಲಾದ ಆರೈಕೆಯ ನೆರವನ್ನು ಸಂತ್ರಸ್ಥರಿಗೆ ನೀಡುವುದು ಮಾನವೀಯತೆಯ ದೃಷ್ಟಿಯಿಂದ ಮುಖ್ಯವಾಗಬೇಕೆಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಎಸ್. ಗೋಪಿನಾಥ್ ಹೇಳಿದರು.

ಪ್ರಥಮ ಚಿಕಿತ್ಸೆಯಿಂದಾಗಿ ಅನೇಕರ ಜೀವ ಉಳಿಸಲು ಸಾಧ್ಯವಿದೆ ಎಂಬುದನ್ನು ಎಂದಿಗೂ ಮರೆಯಬಾರದು. ರೋಗಿಯ ಜೀವ ಅತೀ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಥಮ ಚಿಕಿತ್ಸೆ ನೀಡುವುದನ್ನು ಆದ್ಯತೆಯಾಗಿಸಿದೆ ಎಂದು ಹೇಳಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೊಡಗು ಘಟಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆದಿಂದ ಪರಿಪೋಷಣಂ ಯೋಜನೆಯಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ, ಜೂನಿಯರ್ ರೆಡ್‌ಕ್ರಾಸ್ ಕೌನ್ಸಿಲರ್‌ಗಳಿಗೆ ರೆಡ್‌ಕ್ರಾಸ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಮಾನವೀಯ ತತ್ವಗಳು, ವಿಪತ್ತು ನಿರ್ವಹಣೆ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಎಲ್ಲರೂ ವೈದ್ಯರಾಗಲು ಸಾಧ್ಯವಿಲ್ಲ. ಸಮಸ್ಯೆಯಾದಾಗ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸುವ ಅವಕಾಶ ಬಳಸಿಕೊಳ್ಳಬೇಕು. ಅಪಘಾತ, ಹೃದಯಾಘಾತವಾದಾಗ ಅಂಬ್ಯುನೆಲ್ಸ್ಗಾಗಿ ಕಾಯದೇ, ಮೊದಲು ನಮಗೆ ತಿಳಿದಿರುವ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ದು ಮುಂದಿನ ಹಂತದ ಚಿಕಿತ್ಸೆ ನೀಡಬೇಕೆಂದರು.

ಕೊಡಗಿನಲ್ಲಿ ಪ್ರಕತ್ತಿ ಹೆಚ್ಚಾಗಿರುವುದರಿಂದ ಪ್ರಕತ್ತಿ ಸಂಬಂಧಿತ ವಿಕೋಪಗಳೂ ಇಲ್ಲಿ ಸಹಜವಾಗಿರುತ್ತದೆ. ಇಂಥ ವಿಕೋಪದ ಸಂದರ್ಭದಲ್ಲಿ ಪ್ರಾಣ ಹಾನಿ ತಪ್ಪಿಸಲು ಎಲ್ಲರೂ ಗಮನ ಹರಿಸಬೇಕು. ಶಿಕ್ಷಕ ವರ್ಗ, ಸ್ವಯಂಸೇವಕರಿಗೆ ಪ್ರಥಮ ಚಿಕಿತ್ಸೆ ಮಾನವೀಯ ತತ್ವಗಳ ನೆಲೆಗಟ್ಟಿನಲ್ಲಿ ನೀಡುವ ರೆಡ್‌ಕ್ರಾಸ್ ಕಾರ್ಯಾಗಾರ ಶ್ಲಾಘನೀಯ ಎಂದು ಪ್ರಶಂಶಿಸಿದರು.

ಹಿರಿಯ ಪತ್ರಕರ್ತ ಬಿ.ಜಿ. ಅನಂತಶಯನ ಮಾತನಾಡಿ, ದೇಶದ ಸಂಸ್ಕೃತಿ ಉಳಿಯಬೇಕಾದರೆ ಅಲ್ಲಿ ಸುಸಂಸ್ಕತ ನಾಗರಿಕತೆ ಅಗತ್ಯ. ಇತರೆಲ್ಲಾ ವಿದ್ಯೆಗಳಿಗಿಂತ ಮಾನವೀಯತೆ ಗುಣ ಅತ್ಯಂತ ಮುಖ್ಯವಾಗಿದೆ. ಮಾನವೀಯತೆಯಿಂದಾಗಿ ಆರೋಗ್ಯಕರ ಸಮಾಜದ ನಿರ್ಮಾಣ ಸಾಧ್ಯವಿದೆ ಎಂದರು.

ಸುಸಂಸ್ಕೃತ, ಸುಶಿಕ್ಷಿತ ನಾಗರಿಕತೆಗೆ ಶಿಕ್ಷಕ ವೃಂದದ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಶಿಕ್ಷಕ ವರ್ಗಕ್ಕೆ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಸೂಕ್ತ ತರಬೇತಿ ನೀಡುವ ಮೂಲಕ ಮಕ್ಕಳ ಆರೋಗ್ಯ ಕಾಳಜಿಗೂ ರೆಡ್ ಕ್ರಾಸ್ ಸಂಸ್ಥೆ ತರಬೇತಿ ಕಾರ್ಯಾಗಾರದ ಮೂಲಕ ಪ್ರಾಧಾನ್ಯತೆ
ನೀಡುತ್ತಿರುವುದು ಶ್ಲಾಘನೀಯ ಎಂದು ಅನಂತಶಯನ ಹೇಳಿದರು.

ರೆಡ್ ಕ್ರಾಸ್ ಕೊಡಗು ಸಭಾಪತಿ ಬಿ.ಕೆ. ರವೀಂದ್ರ ರೈ ಮಾತನಾಡಿ, ರೆಡ್‌ಕ್ರಾಸ್‌ನ ಮಹತ್ವದ ಯೋಜನೆಯಾಗಿ ಕೊಡಗು ಜಿಲ್ಲೆಯ ಪ್ರೌಢ ಶಾಲಾ ಶಿಕ್ಷಕ ಸಮುದಾಯಕ್ಕೆ, ರೆಡ್ ಕ್ರಾಸ್ ಕೌನ್ಸಿಲರ್‌ಗಳಿಗೆ ಪ್ರಥಮ ಚಿಕಿತ್ಸೆ ಮಾನವೀಯ ತತ್ವಗಳ ಆಧಾರದ ಮೇಲೆ ನೀಡುತ್ತಿದೆ.
೬೦ ಶಿಕ್ಷಕರಿಗೆ ಪ್ರಥಮ ಚಿಕಿತ್ಸೆಯ ತರಬೇತಿ ನೀಡಲಾಗುತ್ತಿದೆ ಎಂದರು. ರೆಡ್‌ಕ್ರಾಸ್ ಜಿಲ್ಲಾ ಸಭಾ ಭವನವು ಯಾವುದೇ ವಿಪತ್ತು ಸಂದರ್ಭ ಸಂತ್ರಸ್ಥರ ನೆರವಿಗಾಗಿ ಸಿದ್ಧವಿರುತ್ತದೆ ಎಂದರು.

ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಅನನ್ಯ ಶ್ರೀನಿವಾಸ್ ಮಾತನಾಡಿ, ಶಿಕ್ಷಕರಿಗೆ ಪ್ರಥಮ ಚಿಕಿತ್ಸೆ, ವಿಪತ್ತು ನಿರ್ವಹಣೆಯ ತರಬೇತಿ ನೀಡಿ ಆ ಶಿಕ್ಷಕರು ವಿದ್ಯಾರ್ಥಿಗಳಿಗೆ ತಮ್ಮ ಶಾಲೆಗಳಲ್ಲಿ ಈ ತರಬೇತಿ ನೀಡುತ್ತಾರೆ. ಈ ಮೂಲಕ ಈ ಕಾರ್ಯಾಗಾರ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೇ ವಿಪತ್ತು ನಿರ್ವಹಣೆಯ ಬೆಸುಗೆಯಾಗಿ ಪರಿಣಮಿಸಿದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಅಪಘಾತ ಸಂದರ್ಭ ಪ್ರಥಮ ಚಿಕಿತ್ಸೆ ಮತ್ತು ಜಾಗ್ರತ ವಾಹನ ಚಾಲನೆ ಬಗ್ಗೆ ಮಡಿಕೇರಿ ನಗರ ಸಂಚಾರಿ ಪೊಲೀಸ್ ಠಾಣೆ ಸಹಾಯಕ ಸಬ್‌ಇನ್ಸ್‌ಪೆಕ್ಟರ್ ನಂದ, ಕೊಡಗು ವೈದ್ಯಕೀಯ ಸಂಸ್ಥೆಯ ಡಾ.ರಾಮಚಂದ್ರ ಕಾಮತ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವಯ್ಯ ಪಲ್ಲೇದ್, ರಕ್ತನಿಧಿ ವೈದ್ಯಾಧಿಕಾರಿ ಡಾ.ಕರಂಬಯ್ಯ, ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿ ಕೆ.ಎನ್. ಸುನಿತ ವಿವಿಧ ವಿಚಾರಗಳ ಬಗ್ಗೆ ತರಬೇತಿ ನೀಡಿದರು.

ಜಿಲ್ಲಾ ರೆಡ್ ಕ್ರಾಸ್ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಮುರಳೀಧರ್, ಉಪಾಧ್ಯಕ್ಷ ಎಚ್.ಟಿ. ಅನಿಲ್, ಪರಿಪೋಷಣಂ ಯೋಜನೆ ಸಂಚಾಲಕಿ ಮಿಲನ ರೈ ಪೊನ್ನಮ್ಮ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net