ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಕೋಟಿ ಕಂಠ ಗಾಯನ

28mdko6 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡಗು ಜಿಲ್ಲೆಯ ವಿವಿಧೆಡೆಯಲ್ಲಿ ೬೭ ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶುಕ್ರವಾರ ’ಕೋಟಿ ಕಂಠ ಗಾಯನ’ ಕಾರ್ಯಕ್ರಮ ನಡೆಯಿತು. ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಸಂಸ್ಕೃತಿ ಪ್ರತಿಬಿಂಬಿಸುವಲ್ಲಿ ಸಫಲವಾಯಿತು.

ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ೬೭೬ ಶಾಲೆ, ೬೫ ಪದವಿ ಪೂರ್ವ ಕಾಲೇಜು, ೨೩ ಪದವಿ ಕಾಲೇಜು, ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕ್ರೀಡಾ ವಸತಿ ನಿಲಯ, ಸಂಘ- ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ಪ್ರವಾಸಿ ಸ್ಥಳಗಳು ಕಾರ್ಯಕ್ರಮ ನಡೆಯಿತು.

ರಾಷ್ಟ್ರಕವಿ ಕುವೆಂಪು ಬರೆದಿರುವ ಜಯ ಭಾರತ ಜನನಿಯ ತನುಜಾತೆ…, ಹುುಲಗೋಳ ನಾರಾಯಣರಾಯರು ರಚಿಸಿರುವ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು…, ಕುವೆಂಪು ಬರೆದಿರುವ ಬಾರಿಸು ಕನ್ನಡ ಡಿಂಡಿಮವ…, ಡಾ.ಡಿ.ಎಸ್.ಕರ್ಕಿ ಬರೆದಿರುವ ಹಚ್ಚೇವು ಕನ್ನಡದ ದೀಪ…, ನಾಡೋಜ ಡಾ.ಚೆನ್ನವೀರ ಕಣ ಬರೆದಿರುವ ವಿಶ್ವ ನೂತನ ವಿದ್ಯಾಚೇತನ…, ಡಾ.ಹಂಸಲೇಖ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು… ಹಾಡುಗಳನ್ನು ಹಾಡಲಾಯಿತು.

ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ಮಡಿಕೇರಿ ತಾಲೂಕು ಅಧ್ಯಕ್ಷ ಅಂಬೆಕಲ್ ನವೀನ್‌ಕುಮಾರ್, ಎಸ್ಪಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ, ಸಿಇಒ ಡಾ.ಎಸ್.ಆಕಾಶ್, ಎಡಿಸಿ ಡಾ.ನಂಜುಂಡೇ ಗೌಡ, ಎಸಿ ಯತೀಶ್ ಉಳ್ಳಾಲ್, ಡಿಡಿಪಿಐ ವೇದಮೂರ್ತಿ, ಪಿಡಿಪಿಯು ಪುಟ್ಟರಾಜು, ಸರ್ಕಾರಿ ನೌಕರರ ಸಂಘ ಜಿಲ್ಲಾಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಚ್.ಟಿ. ಅನಿಲ್, ಮಡಿಕೇರಿ ರೋಟರಿ ವುಡ್ಸ್ ಅಧ್ಯಕ್ಷ ಎಸ್.ಎಸ್. ಸಂಪತ್‌ಕುಮಾರ್, ತಹಸೀಲ್ದಾರ್ ಪಿ.ಎಸ್. ಮಹೇಶ್, ಪೌರಾಯುಕ್ತ ವಿಜಯ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಮೋದ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷೆ ರೆಹನಾ ಸುಲ್ತಾನ ಮತ್ತಿತರರು ಪಾಲ್ಗೊಂಡ್ದಿರು.
ಸರ್ಕಾರ ಕೋಟಿ ಕಂಠ ಗಾಯನ ಕಾರ್ಯಕ್ರಮ ಹೆಸರಿನಲ್ಲಿ ಕನ್ನಡ ನಾಡಿನ ಪರಂಪರೆ ಪ್ರತಿಬಿಂಬಿಸುವ ಹಾಡುಗಳನ್ನು ಹಾಡುವಂತೆ ಮಾಡಿರುವುದು ಶ್ಲಾಘನೀಯ ಎಂದು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮೆಚ್ಚುಗೆ ವ್ಯಕ್ತ ಪಡಿಸಿದರು.

ನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ಎಂಬುದನ್ನು ಯಾರೂ ಮರೆಯುವಂತಿಲ್ಲ. ಕನ್ನಡ ಭಾಷೆಯನ್ನು ಪ್ರತಿಯೊಬ್ಬರೂ ಗೌರವಿಸ ಬೇಕು. ಪ್ರತಿಯೊಬ್ಬರು ಕನ್ನಡದಲ್ಲಿ ಮಾತನಾಡಬೇಕು ಮತ್ತು ಬರೆಯಬೇಕು. ಕನ್ನಡೇತರರಿಗೆ ಕನ್ನಡ ಕಲಿಸುವಂತಾಗಬೇಕು. ಕನ್ನಡ ಭಾಷೆ, ನಾಡು, ನುಡಿಗೆ ಮೊದಲ ಆದ್ಯತೆ. ಗಡಿ ಭಾಗದಲ್ಲಿಯೂ ಕನ್ನಡ ಭಾಷೆ ಬೆಳವಣಿಗೆಗೆ ಸರ್ಕಾರದ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಕನ್ನಡ ನಾಡಿನ ಪ್ರಜೆಯಾಗಿ ನಾನು ನನ್ನ ನಾಡು, ನುಡಿಗಳನ್ನು ಪ್ರೀತಿಸುತ್ತೇನೆ ಹಾಗೂ ಗೌರಸುತ್ತೇನೆ. ನಾನು ಕನ್ನಡದಲ್ಲೇ ಮಾತನಾಡುತ್ತೇನೆ, ಕನ್ನಡದಲ್ಲೇ ಬರೆಯುತ್ತೇನೆ, ಕನ್ನಡವನ್ನೇ ಬಳಸುತ್ತೇನೆ ಎಂಬ ಪಣ ತೊಡುತ್ತೇನೆ. ಕನ್ನಡ ನಾಡು, ನುಡಿ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ಧನಾಗಿರುತ್ತೇನೆ. ಕನ್ನಡ ನಾಡಿನಲ್ಲಿರುವ ಕನ್ನಡೇತರ ಬಂಧುಗಳಿಗೆ ಕನ್ನಡ ಕಲಿಸುತ್ತೇನೆ ಎಂದು ಸಂಕಲ್ಪ ಮಾಡುತ್ತೇನೆಂದು ಸದಾಶಿವ ಪಲ್ಲೇದ್ ಸಂಕಲ್ಪವಿಧಿ ಬೋಧಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು. ಶಿಕ್ಷಕ ಸಿ.ವಿ. ನಾಗೇಶ್ ನಿರೂಪಿಸಿದರು. ಮಣಜೂರು ಮಂಜುನಾಥ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net