ವಿಜಯವಾಣಿ ಸುದ್ದಿಜಾಲ ಮಡಿಕೇರಿ

Published on

ಅಖಿಲ ಭಾರತ ಹಿಂದೂ ಮಹಾಸಭಾ ಸಂಘಟನೆಯಿಂದ ಹೊರಹೋಗಿ ಅದೇ ಹೆಸರನ್ನು ಬಳಸಿಕೊಂಡು ಕಾರ್ಯ ಚಟುವಟಿಕೆ ನಡೆಸುತ್ತಿದ್ದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಹೂಡಿದ್ದ ದಾವೆಗೆ ಜಯ ದೊರೆತ್ತಿದೆ. ಇದೀಗ ಮೂಲ ಸಂಸ್ಥೆ ಮರುಸಂಘಟಿಸಲಾಗುತ್ತಿದೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಗಿರೀಶ್ ಹೇಳಿದರು.

೧೯೦೭ ರಲ್ಲಿ ಸ್ಥಾಪನೆಗೊಂಡ ಮೊದಲ ರಾಜಕೀಯ ಪಕ್ಷ ಅಖಿಲ ಭಾರತ ಹಿಂದೂ ಮಹಾಸಭಾದಿಂದ ಉಚ್ಛಾಟನೆಗೊಂಡ ರಾಜ್ಯದ ಕೆಲವರು ಸ್ವಯಂಘೋಷಿತ ಪದಾಧಿಕಾರಿಗಳಾಗಿ ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದರು. ಸಂಘಟನೆಯ ಲಾಂಛನ ಹಾಗೂ ಬಾವುಟ ಉಪಯೋಗಿಸಿಕೊಳ್ಳುತ್ತಿದ್ದರು. ಈ ಹಿನ್ನೆಲೆ ಕಾನೂನು ಹೋರಾಟಕ್ಕೆ ಮುಂದಾಗಿದ್ದೆವು. ವಾದ ಆಲಿಸಿದ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೀಗ ಪ್ರತಿ ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಕೊಡಗು ಜಿಲ್ಲಾ ಸಮಿತಿ ರಚನೆ ಮಾಡಲಾಗಿದೆ. ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರ ಗೋಶಾಲೆ, ಗುರುಕುಲ, ಚಿಕಿತ್ಸಾ ಕೇಂದ್ರ ಸ್ಥಾಪಿಸುವುದು, ನಿರ್ಲಕ್ಷ್ಯಕ್ಕೆ ಒಳಗಾಗಿರುವ ದೇವಾಲಯ ಜೀರ್ಣೋದ್ಧಾರಗೊಳಿಸುವುದು ಸಂಘಟನೆ ಗುರಿಯಾಗಿದೆ ಎಂದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ೨ ವಿಧಾನಸಭಾ ಕ್ಷೇತ್ರದಲ್ಲಿಯೂ ಪಕ್ಷದ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ. ಹಿಂದೂಗಳ ಸಂಘಟನೆ ಮಾಡಿ ರಾಮರಾಜ್ಯ ಕಲ್ಪನೆ ಸಾಕರಗೊಳಿಸುವುದು ನಮ್ಮ ಧ್ಯೇಯವಾಗಿದೆ ಎಂದು ಆರ್.ಗಿರೀಶ್ ಮಾಹಿತಿ ನೀಡಿದರು.

ಜಿಲ್ಲಾ ಸಮಿತಿ ರಚನೆ
ಅಖಿಲ ಭಾರತ ಹಿಂದೂ ಮಹಾಸಭಾ ಕೊಡಗು ಜಿಲ್ಲಾಧ್ಯಕ್ಷರಾಗಿ ಅಪ್ಪನೆರವಂಡ ಕಿರಣ್ ಕಾರ್ಯಪ್ಪ, ಉಪಾಧ್ಯಕ್ಷರಾಗಿ ಬಾಚರಣಿಯಂಡ ಧರ್ಮರಾಜ್, ಕಂಬೇಯಂಡ ಸಾಮ್ರಾಟ್, ಪವನ್ ಕುಮಾರ್, ಜಂಟಿ ಕಾರ್ಯದರ್ಶಿಯಾಗಿ ಅಮ್ಮಾಟಂಡ ದೇವಯ್ಯ, ಯುವ ಘಟಕ ಉಪಾಧ್ಯಕ್ಷರಾಗಿ ಕೇಲೇಟಿರ ಪವಿತ್, ಶ್ರಮಿಕ್ ಸಭಾ ವಿಭಾಗ ಅಧ್ಯಕ್ಷರಾಗಿ ರಾಧಾಕೃಷ್ಣ ರೈ, ಕ್ರೀಡಾ ಸಭಾ ಉಪಾಧ್ಯಕ್ಷರಾಗಿ ಕಲಿಯಂಡ ಪೂವಣ್ಣ, ಕಿಸಾನ್ ಸಭಾ ಅಧ್ಯಕ್ಷರಾಗಿ ಕದ್ದಣಿಯಂಡ ಗಿರೀಶ್, ಕಾನೂನೂ ಸಲಹೆಗಾರರಾಗಿ ಅಜ್ಜೆಟ್ಟೀರ ಗೌತಮ್ ನೇಮಕಗೊಂಡಿದ್ದಾರೆ.

ಜಿಲ್ಲಾಧ್ಯಕ್ಷ ಅಪ್ಪನೆರವಂಡ ಕಿರಣ್ ಕಾರ್ಯಪ್ಪ, ಜಂಟಿ ಕಾರ್ಯದರ್ಶಿ ಎ.ಎಂ. ದೇವಯ್ಯ, ಉಪಾಧ್ಯಕ್ಷ ಬಾಚರಣಿಯಂಡ ಧರ್ಮರಾಜು, ರಾಜ್ಯ ಜಂಟಿ ಕಾರ್ಯದರ್ಶಿ ಗೌತಮ್ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net