ಅಜ್ಜಮಾಡ ದೇವಯ್ಯ ಪ್ರತಿಮೆ ಅನಾವರಣ

7mdks3
Published on

ಮಡಿಕೇರಿ: ಪಾಕಿಸ್ತಾನ ನೆಲದಲ್ಲಿ ದೇಶಕ್ಕಾಗಿ ಬಲಿದಾನ ಗೈದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಅವರ ಕಂಚಿನ ಪ್ರತಿಮೆ ಲೋಕಾರ್ಪಣೆಗೊಂಡಿದೆ. ನಿವೃತ್ತ ಸೇನಾಧಿಕಾರಿ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ, ವೀರಸೇನಾನಿಯ ಪತ್ನಿ ಸುಂದರಿ ದೇವಯ್ಯ ಸೋಮವಾರ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿರುವ ಪ್ರತಿಮೆ ಅನಾವರಣ ಮಾಡಿದರು.


ಕೊಡವ ಮಕ್ಕಡ ಕೂಟ, ಅಜ್ಜಮಾಡ ಕುಟುಂಬ ಹಾಗೂ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಸ್ಮಾರಕ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ದೇವಯ್ಯ ಅವರ 55ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಳೆಯ ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿ ನಡೆಯಿತು. ಗಣ್ಯ ಅತಿಥಿಗಳು ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರ ಗುಣಗಾನ ಮಾಡಿದರು.


ದೇಶಕ್ಕಾಗಿ ಬಲಿದಾನಗೈದ ವೀರಸೇನಾನಿಯ ಅತ್ಯುತ್ತಮ ಪ್ರತಿಮೆ ಸ್ಥಾಪಿಸಿರುವ ಅಜ್ಜಮಾಡ ಕುಟುಂಬಸ್ಥರ ಕಾರ್ಯ ಶ್ಲಾಘನೀಯ. ಕೊಡಗಿನ ಇಬ್ಬರು ಮಾತ್ರ ಮಹಾವೀರ ಚಕ್ರ ಪುರಸ್ಕಾರಕ್ಕೆ ಭಾಜನರಾಗಿದ್ದು, ಅದರಲ್ಲಿ ದೇವಯ್ಯ ಅವರು ಕೂಡ ಒಬ್ಬರೆಂದು ಏರ್‌ಮಾರ್ಷಲ್ ಕೆ.ಸಿ. ಕಾರ್ಯಪ್ಪ ಅಭಿಮಾನದಿಂದ ಹೇಳಿದರು.


ದೇಶಕ್ಕಾಗಿ ಬಲಿದಾನಗೈದ ತನ್ನ ಪತಿಯ ಪ್ರತಿಮೆ ಮಡಿಕೇರಿಯಲ್ಲಿ ಸ್ಥಾಪಿಸಿರುವುದು ತುಂಬಾ ಸಂತೋಷವಾಗಿದೆ. ಇದಕ್ಕಾಗಿ ಅಜ್ಜಮಾಡ ಕುಟುಂಬಸ್ಥರು ಹಾಗೂ ಕೊಡವ ಮಕ್ಕಡ ಕೂಟದವರು ತುಂಬಾ ಶ್ರಮಪಟ್ಟಿದ್ದಾರೆ. ಪ್ರತಿಮೆ ಸ್ಥಾಪನೆಗೆ ಶ್ರಮಪಟ್ಟ ಎಲ್ಲರಿಗೂ ಧನ್ಯವಾದ ಎಂದು ದೇವಯ್ಯ ಅವರ ಪತ್ನಿ ಸುಂದರಿ ದೇವಯ್ಯ ಹೇಳಿದರು.


ಸೇನಾನಿಗಳ ನಾಡು: ದೇಶಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಯ ಪ್ರತಿಮೆ ಸ್ಥಾಪನೆ ಶ್ಲಾಘನೀಯ. ಪರ- ವಿರುದ್ಧದ ನಡುವೆಯೂ ನಗರಸಭೆ ಸದಸ್ಯರು ಒಮ್ಮತದಿಂದ ಪ್ರತಿಮೆ ಸ್ಥಾಪನೆಗೆ ಒಪ್ಪಿಗೆ ನೀಡಿದ್ದಾರೆ. ಕೊಡಗು ವೀರಸೇನಾನಿಗಳ ನಾಡು. ದೇಶಕ್ಕಾಗಿ ಬಲಿದಾನಗೈದವರ ಪ್ರತಿಮೆ ಸ್ಥಾಪನೆ ಮಾಡಿರುವುದು ಒಳ್ಳೆಯ ಕಾರ್ಯ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಹೇಳಿದರು. ರಾಷ್ಟ್ರಕ್ಕಾಗಿ ಜೀವ ತ್ಯಾಗ ಮಾಡಿದವರ ಪರಿಚಯ ಯುವಜನರಿಗೆ ಮಾಡಿಕೊಡುವ ಅಗತ್ಯತೆ ಇದೆ ಎಂದರು.


ಮಡಿಕೇರಿಯಲ್ಲಿ ಇಂದು ಇತಿಹಾಸ ನಿರ್ಮಾಣವಾಗಿದೆ:
55 ವರ್ಷದ ಹಿಂದೆ (1965) ಸ್ಕ್ವಾಡ್ರನ್ ಲೀಡರ್ ದೇವಯ್ಯ ದೇಶಕ್ಕಾಗಿ ಬಲಿದಾನ ಮಾಡಿದ್ದಾರೆಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ- ಜನರಲ್ ಕೆ.ಎಸ್. ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ (ನಿವೃತ್ತ) ಹೇಳಿದರು.


ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ- ಜನರಲ್ ಕೆ.ಎಸ್. ತಿಮ್ಮಯ್ಯ ಫೋರಂ ಸಂಚಾಲಕ, ನಿವೃತ್ತ ಮೇಜರ್ ಬಿದ್ದಂಡ ನಂದ ನಂಜಪ್ಪ, ಪ್ರತಿಮೆ ಸ್ಥಾಪನೆ ರೂವಾರಿ ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜೀರ ಬಿ. ಅಯ್ಯಪ್ಪ, ಅಜ್ಜಮಾಡ ಕುಟುಂಬ ಅಧ್ಯಕ್ಷ ಅಜ್ಜಮಾಡ ಲವ ಕುಶಾಲಪ್ಪ, ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸುಳ್ಯದ ದೇರಣ್ಣ ಗೌಡ, ಕಾಳಿಮಾಡ ರಾಣ, ಬಾಳೆಯಡ ಮಾದಪ್ಪ ಮಾತನಾಡಿ ಅಜ್ಜಮಾಡ ಬಿ. ದೇವಯ್ಯ ಅವರ ಗುಣಗಾನ ಮಾಡಿದರು.


ಅಜ್ಜಮಾಡ ಕುಟುಂಬ ಕಾರ್ಯದರ್ಶಿ ಅಜ್ಜಮಾಡ ಬೋಪಣ್ಣ, ಖಜಾಂಚಿ ಅಜ್ಜಮಾಡ ಚಂಗಪ್ಪ, ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರ ಪುತ್ರಿ ಸ್ಮಿತಾ ದೇವಯ್ಯ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಪ್ರಮುಖರಾದ ಅಜ್ಜಮಾಡ ಶಂಕ್ರು ನಾಚಪ್ಪ, ಅಪ್ಪಚಟ್ಟೋಳಂಡ ಮನು ಮುತ್ತಪ್ಪ, ಉಳ್ಳಿಯಡ ಪೂವಯ್ಯ, ಚಂಟ್ರಮಾಡ ಕಾಶಿ, ಮುಂಜಂದೀರ ರಾಜ, ಜಿ. ಚಿದ್ವಿಲಾಸ್, ಮಂಡೇಪಂಡ ರತನ್ ಕುಟ್ಟಯ್ಯ, ಮಣವಟ್ಟೀರ ಚಿಣ್ಣಪ್ಪ, ಚೈಯ್ಯಂಡ ಸತ್ಯ ಗಣಪತಿ, ಸತ್ಯ ಕರ್ಕೇರ ಗೌರವ ಮತ್ತಿತರರು ಗೌರವ ನಮನ ಸಲ್ಲಿಸಿದರು.

ನಾಲ್ವರಿಗೆ ಸನ್ಮಾನ: ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಅವರ ಪತ್ನಿ ಸುಂದರಿ ದೇವಯ್ಯ, ಪ್ರತಿಮೆ ಸ್ಥಾಪನೆ ರೂವಾರಿ ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜೀರ ಬಿ. ಅಯ್ಯಪ್ಪ, ಶಿಲ್ಪಿ ಅಶೋಕ್ ಗುಡಿಗಾರ್, ಗುತ್ತಿಗೆದಾರ ಅಜ್ಜಮಾಡ ಸುಮನ್ ಅವರನ್ನು ಅಜ್ಜಮಾಡ ಕುಟುಂಬದ ಪರವಾಗಿ ಸನ್ಮಾನಿಸಲಾಯಿತು. ಸನ್ಮಾನಿತರ ಪರಿಚಯವನ್ನು ಕೊಡವ ಮಕ್ಕಡ ಕೂಟದ ಬಾಳೆಯಡ ದಿವ್ಯಾ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net