

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಮೂಡಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆ ಆವರಣದಲ್ಲಿ ಡಿಸೆಂಬರ ೨೧ ರಿಂದ ೨೮ ರವರೆಗೆ ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ಜಾಂಬೂರಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
ಸಾಂಸ್ಕೃತಿಕ ಜಾಂಬೂರಿ ಮೂಲಕ ಮಕ್ಕಳಿಗೆ ರಾಜ್ಯ ಹಾಗೂ ದೇಶದ ಸಾಂಸ್ಕೃತಿಕ ಶ್ರೀಮಂತಿಕೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ೪೧ ಸಾವಿರ ಮಕ್ಕಳು, ೪ ಸಾವಿರ ಶಿಕ್ಷಕರು ಭಾವಹಿಸಲಿದ್ದಾರೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನೋಂದಣಿ ಮುಗಿದಿದ್ದು, ಕಾರ್ಯಕ್ರಮ ವೀಕ್ಷಿಸಲು ಯಾರು ಬೇಕಾದರೂ ಬರಬಹುದೆಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ ದೊಂದಿಗೆ ಆಹಾರ ಪದ್ಧತಿ, ಉಡುಗೆ- ತೊಡುಗೆ, ಪ್ರಾಕೃತಿಕ ವಿಶೇಷತೆ ಬಗ್ಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಶಿಬಿರಾರ್ಥಿಗಳಿಗೆ ನಿತ್ಯ ಯೋಗ, ಧ್ಯಾನ, ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮ ನಡೆಯಲಿವೆ. ಕೊಡಗಿನ ೧೦೦ ಬುಡಕಟ್ಟು ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನಗೊಳ್ಳಲಿದೆ.
ಮಕ್ಕಳ ಸರ್ವಾಂಗಿಣ ಪ್ರಗತಿಗೆ ಸಂಸ್ಥೆ ಶ್ರಮಿಸುತ್ತಿದೆ. ಕೇಂದ್ರ, ರಾಜ್ಯ ಸರ್ಕಾರ ಪೂರಕ ಸಹಕಾರ ನೀಡುತ್ತಿದೆ. ರಾಜ್ಯಪಾಲರು ಹಾಗೂ ಮುಖ್ಯ ಮಂತ್ರಿ ಮಾರ್ಗದರ್ಶನ ಸಂಸ್ಥೆಗೆ ಇದೆ. ಸ್ಕೌಟ್, ಗೈಡ್‌ನಲ್ಲಿ ವಿದ್ಯಾರ್ಥಿ ಹೆಚ್ಚಿಸಲು ಗಮನ ಹರಿಸಲಾಗಿದೆ. ಸಂಸ್ಥೆಯಿಂದ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ೧.೫೦ ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರಿಸರ, ಸಾಮಾಜಿಕ ಪ್ರಜ್ಞೆ ಮೂಡಿಸುವ ಕೆಲಸವಾಗುತ್ತಿದೆ ಎಂದು ಹೇಳಿದರು.
ಸ್ಕೌಟ್, ಗೈಡ್‌ನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ಸರ್ಕಾರಿ ಹುದ್ದೆಯಲ್ಲಿ ಮೀಸಲಾತಿ ಒದಗಿಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಕೆಯಾಗಿದೆ. ಈಗಾಗಲೇ ರೈಲ್ವೆ ವಲಯದಲ್ಲಿ ಮೀಸಲಾತಿ ಇದೆ. ಒಡಿಸ್ಸಾದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಮೀಸಲಾತಿ ಒದಗಿಸ ಲಾಗಿದೆ. ರಾಷ್ಟಪತಿ ಪುರಸ್ಕಾರ ಪರೀಕ್ಷೆಯಲ್ಲಿ ಉತ್ತೀರ್ಣರಾದ ೨ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮೀಸಲಾತಿ ದೊರೆಯುತಿತ್ತು. ಈ ಪರೀಕ್ಷೆಗೆ ಕೆಲ ವರ್ಷದಿಂದ ನಡೆಯದ ಹಿನ್ನೆಲೆ ಮೀಸಲಾತಿ ದೊರೆತ್ತಿಲ್ಲ ಎಂದರು.
ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯು, ಸ್ಥಾನಿಕ ಆಯುಕ್ತ ಎಚ್.ಆರ್. ಮುತ್ತಪ್ಪ, ತರಬೇತಿ ಆಯುಕ್ತೆ ಮೈಥಿಲಿ ರಾವ್, ಖಜಾಂಜಿ ಪುಷ್ಪಾವೇಣಿ, ಪ್ರಧಾನ ಕಾರ್ಯದರ್ಶಿ ವಸಂತಿ ಗೋಷ್ಠಿಯಲ್ಲಿದ್ದರು.