ಮಡಿಕೇರಿಯಲ್ಲಿ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ

Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕುಲಪತಿ ಪ್ರೊ.ಶರಣಪ್ಪ ವಿ. ಹುಲಸೆ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಉನ್ನತ ಶಿಕ್ಷಣ ಎಲ್ಲರಿಗೂ, ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕದಾದ್ಯಂತ ಪ್ರಸ್ತುತ ಜಿಲ್ಲಾ ಕೇಂದ್ರಗಳಲ್ಲಿ ೨೩ ಪ್ರಾದೇಶಿಕ ಕೇಂದ್ರ ತೆರೆದಿದೆ. ವಿದ್ಯಾರ್ಥಿಗಳಿಗೆ ರೆಗ್ಯೂಲರ್ ವಿಶ್ವವಿದ್ಯಾನಿಲಯಗಳ ಉನ್ನತ ಶಿಕ್ಷಣಕ್ಕೆ ಸರಿಸಮನಾಗಿ ಮನೆ ಬಾಗಿಲಿಗೆ ಉನ್ನತ ಶಿಕ್ಷಣ ಕೊಡುವಲ್ಲಿ ಮುಂಚೂಣಿಯಲ್ಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಾದ್ಯಂತ ೨೩ ಪ್ರಾದೇಶಿಕ ಕೇಂದ್ರಗಳು ಮತ್ತು ೧೪೦ ಕಲಿಕಾರ್ಥಿ ಸಹಾಯ ಕೇಂದ್ರಗಳ ಮೂಲಕ ವಿದ್ಯಾರ್ಥಿ ಸ್ನೇಹಿ ಶಿಕ್ಷಣ ಸೇವೆ ಒದಗಿಸುತ್ತ ಬಂದಿರುತ್ತದೆ. ಯುಜಿಸಿ ಮಾನ್ಯತೆ ಪಡೆದಿರುವ ೬೪ ಸ್ನಾತಕ/ಸ್ನಾತಕೋತ್ತರ ಪದವಿ, ಡಿಪ್ರೋಮಾ ಶಿಕ್ಷಣ ಕ್ರಮಗಳಿಗೆ ಪ್ರವೇಶಾತಿ ನೀಡುತ್ತಿದೆ. ಯುಜಿಸಿ ನಿಯಮಾವಳಿ ಪ್ರಕಾರ ಪೂರ್ಣಾವಧಿಯಲ್ಲಿ (ಭೌತಿಕ ಶಿಕ್ಷಣ) ಒಂದು ಕೋರ್ಸ್ ಮತ್ತು ದೂರಶಿಕ್ಷಣದಲ್ಲಿ ಇನ್ನೊಂದು ಕೋರ್ಸ್ ಅನ್ನು ಏಕಕಾಲದಲ್ಲೇ ಮಾಡಲು ಅವಕಾಶವಿರುತ್ತದೆ ಎಂದರು.

ವಿವಿಧ ಕಾರಣದಿಂದ ಶಿಕ್ಷಣ ಮುಂದುವರೆಸಲು ಸಾಧ್ಯವಾಗದಿದ್ದರೆ, ಅಂತಹ ವಿದ್ಯಾರ್ಥಿಗಳು ಆರ್ಹತಾ ಮಾನದಂಡ ಪೂರೈಸಿ ೨ನೇ ಮತ್ತು ೩ನೇ ವರ್ಷಕ್ಕೆ ಮುಕ್ತ ವಿವಿಯಲ್ಲಿ ಲ್ಯಾಟರಲ್ ಪ್ರವೇಶ ಅಥವಾ ನೇರ ಪ್ರವೇಶ ಅಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರೆಸಬಹುದಾಗಿದೆ.

ಮಡಿಕೇರಿಯಲ್ಲಿ ೨೦೨೧ರಲ್ಲಿ ಡಿಸಂಬರ್ ತಿಂಗಳಲ್ಲಿ ಪ್ರಾದೇಶಿಕ ಕೇಂದ್ರ ಸ್ಧಾಪಿಸುವುದರ ಮೂಲಕ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದೆ. ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಇರುವ ಹಳೆಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿದೆ. ವಾರ್ಷಿಕ, ಸೆಮಿಸ್ಟರ್ ಪರೀಕ್ಷೆ ಮಡಿಕೇರಿ ಪ್ರಾದೇಶಿಕ ಕೇಂದ್ರದಲ್ಲೇ ನಡೆಯುತ್ತವೆ. ವಾರಾಂತ್ಯ ಸಂಪರ್ಕ ತರಗತಿ ಮತ್ತು ವಿಜ್ಞಾನ ವಿಷಯಗಳಿಗೆ ಪ್ರಯೋಗಿಕ ತರಗತಿಗಳನ್ನು ಕಲಿಕಾರ್ಥಿ ಸಹಾಯ ಕೇಂದ್ರದಲ್ಲಿ ನಡೆಸಲು ಕ್ರಮವಹಿಸಲಾಗುತ್ತಿದೆ ಎಂದರು.

೨೦೨೨-೨೩ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿಯ ಪ್ರವೇಶಾತಿ ಪ್ರಕಟಣೆ ಪ್ರಾರಂಭವಾಗಿದ್ದು, ಪ್ರವೇಶಾತಿ ಪ್ರಕ್ರಿಯೆಗಳು ನಡೆಯುತ್ತಿವೆ, ಮಾರ್ಚ್ ೩೧ ಕೊನೆ ದಿನಾಂಕವಾಗಿರುತ್ತದೆ. ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಲ್ಐ, ಬಿಎಸ್ಸಿ, ಎಂಎ, ಎಂಸಿಜೆ, ಎಂಕಾಂ, ಎಂಎಲ್ಐಎಸ್ಸಿ, ಎಂಎಸ್ಸಿ, ಎಂಬಿಎ, ಪಿಜಿ ಡಿಪ್ರೋಮಾ ಪ್ರೋಗ್ರಾಮ್ಸ್, ಡಿಪ್ರೋಮಾ ಪ್ರೋಗ್ರಾಮ್ಸ್, ಸರ್ಟಿಫಿಕೇಟ್ ಪ್ರೋಗ್ರಾಮ್ಸ್ಗಳಿಗೆ ಮಡಿಕೇರಿ ಪ್ರಾದೇಶಿಕ ಕೇಂದ್ರದಲ್ಲಿ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ.

ಕಲಿಕಾರ್ಥಿ ಸಹಾಯ ಕೇಂದ್ರ ವೀರಾಜಪೇಟೆಯಲ್ಲಿ ಇದ್ದು, ಮುಂದಿನ ದಿನಗಳಲ್ಲಿ ಪ್ರತಿ ತಾಲೂಕು ಕೇಂದ್ರಗಳಲ್ಲೂ ಕಲಿಕಾರ್ಥಿ ಸಹಾಯ ಕೇಂದ್ರ ತೆರೆಯಲು ತೀರ್ಮಾನಿಸಿದೆ ಎಂದರು. ಗೋಷ್ಠಿಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಭಾಸ್ಕರ್, ಪ್ರಾದೇಶಿಕ ನಿರ್ದೇಶಕಿ ಮುಕ್ಕಾಟೀರ ಸ್ಮಿತಾ ಸುಬ್ಬಯ್ಯ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net