ಜಿಲ್ಲಾಮಟ್ಟದ ಮಕ್ಕಳ ಕಲಿಕಾ ಹಬ್ಬಕ್ಕೆ ಚಾಲನೆ

13mdkf4 - Copy
Published on

ವಿಜಯವಾಣಿ ಸುದ್ದಿಜಾಲ ಮೂರ್ನಾಡು

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಸಂಯುಕ್ರಾಶ್ರಯದಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಕಲಿಕಾ ಹಬ್ಬ ಕ್ಕೆ ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಚಾಲನೆ ದೊರೆಯಿತು.

ಮೂರು ದಿನ ನಡೆಯುವ ಕಲಿಕಾ ಹಬ್ಬಕ್ಕೆ ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಚಂದ್ರಶೇಖರ್ ಚಾಲನೆ ನೀಡಿದರು. ಕಲಿಕಾ ಹಬ್ಬದಿಂದ ಮಕ್ಕಳ ಜ್ಞಾನಾರ್ಜನೆಗೆ ಹೆಚ್ಚಿನ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಸದಾ ಚಲನಶೀಲತೆ, ಕ್ರೀಯಾಶೀಲತೆಯಿಂದ ಇರಬೇಕು. ಆ ನಿಟ್ಟಿನಲ್ಲಿ ಪಠ್ಯೇತರ ಚಟುವಟಿಕೆಗಳಾದ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕ್ರಿಯಾಶೀಲತೆ ಬೆಳೆಸಿಕೊಳ್ಳಲು ಕಲಿಕಾ ಹಬ್ಬ ಸಹಕಾರಿಯಾಗಲಿದೆ ಎಂದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸಿ.ರಂಗಧಾಮಯ್ಯ ಮಾತನಾಡಿ, ಸರ್ಕಾರ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಗಳಿಗೆ ಕಲಿಕಾ ಹಬ್ಬ ಏರ್ಪಡಿಸಿದೆ. ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಕಲಿಕಾ ಹಬ್ಬ ಉತ್ತಮ ವೇದಿಕೆ ಆಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಹ ಕಾರ್ಯದರ್ಶಿ ಎಚ್.ಎಸ್. ಚೇತನ್ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆ ಯಲ್ಲಿ ಹಿಂದೆ ಉಳಿಯಬಾರದೆಂಬ ಉದ್ದೇಶದಿಂದ ಸರ್ಕಾರ ಕಲಿಕಾ ಹಬ್ಬ್ನ ಹಮ್ಮಿಕೊಂಡಿದೆ. ಕಲಿಕೆಯನ್ನು ಸಂತಸದಿಂದ ಪಡೆಯ ಬೇಕು. ಆ ನಿಟ್ಟಿನಲ್ಲಿ ಸರ್ಕಾರ ಹೊಸ ಹೊಸ ಯೋಜನೆ ಹಾಕಿಕೊಂಡು ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತಮ ಅವಕಾಶ ಕಲ್ಪಿಸಿದೆ ಎಂದರು.
ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಚ್.ಬಿ. ದಿನೇಶ್ ಮಾತನಾಡಿ, ಕಲಿಕಾ ಹಬ್ಬದಿಂದ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮ್ಮಲ್ಲಿರುವ ಪ್ರತಿಭಾ ಕಲಾ ಪ್ರದರ್ಶನಕ್ಕೆ ಸಹಕಾರಿಯಾಗಿದೆ ಎಂದು ಹೇಳಿದರು.

ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘ ಅಧ್ಯಕ್ಷ ಎಚ್.ಕೆ. ಕುಮಾರ್ ಮಾತನಾಡಿ, ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿಂದ ಕಲಿಕೆಯಲ್ಲಿ ಮುಂದೆ ಇದ್ದಾರೆ. ಕಲಿಕೆ ಜೊತೆಗೆ ನೃತ್ಯ, ಭಾಷಣ, ಕಲೆ, ಸಂಗೀತ, ಇತರೆ ಚಟುವಟಿಕೆಗಳಲ್ಲಿ ಮುಂದೆ ಇದ್ದಾರೆ. ಆ ನಿಟ್ಟಿನಲ್ಲಿ ಕಲಿಕಾ ಹಬ್ಬ ಉತ್ತಮ ಅವಕಾಶವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್, ಮೂರ್ನಾಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಅಧ್ಯಕ್ಷ ಸೋಮಶೇಖರ್, ಜಿಲ್ಲಾ ವೃತ್ತಿ ಶಿಕ್ಷಕರ ಸಂಘ ಅಧ್ಯಕ್ಷ ಜಿಮ್ಮಿ ಸೀಕ್ವೇರಾ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಮೋಹನ್ ಪೆರಾಜೆ ಮಾತನಾಡಿದರು.

ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಗಿರಿಜನ ಹಾಡಿ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಮೂರ್ನಾಡು ವಾಟೆಕಾಡು ಶಾಲೆ ವಿದ್ಯಾರ್ಥಿಗಳು ಬನ್ನಿ ಕೂಡಿ ಹಾಡೋಣ ನೃತ್ಯ ಪ್ರದರ್ಶಿಸಿದರು. ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹುಲಿವೇಷ ನೃತ್ಯ ಪ್ರದರ್ಶನ ಮಾಡಿದರು. ಕೃಷ್ಣ ಮತ್ತು ಪಾರ್ಥ ಪೌರಾಣಿಕ ನಾಟಕದ ನೃತ್ಯ ಪ್ರದರ್ಶನ ಗಮನ ಸೆಳೆಯಿತು.

ಚಪ್ಪರ, ಗದ್ದೆ ಉಳುವ ರೈತ, ಹಂಪಿ, ಕಲ್ಲಿನ ರಥ ಮತ್ತಿತರ ವಸ್ತುಪ್ರದರ್ಶನ ಗಮನ ಸೆಳೆಯಿತು. ಮೂರ್ನಾಡು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ, ಕಂಸಾಳೆ, ನೃತ್ಯ ಪ್ರದರ್ಶನ ನೋಡುಗರನ್ನು ಆಕರ್ಷಿಸಿತು. ಎನ್‌ಸಿಸಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಭಾರತೀಯ ಸೇವಾ ದಳ ತಂಡಗಳು ಪಾಲ್ಗೊಂಡಿದ್ದರು. ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡು ಗಮನ ಸೆಳೆದರು. ಸ್ತಬ್ಧ ಚಿತ್ರದ ಮೂಲಕ ಮೆರವಣಿಗೆ ನಡೆಯಿತು.

ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘ ಜಿಲ್ಲಾಧ್ಯಕ್ಷ ಕೆ.ಪಿ.ಗುರುರಾಜ್, ಶಿಕ್ಷಣಾಧಿಕಾರಿ ದೊಡ್ಡೇಗೌಡ, ವಿಷಯ ಪರಿವೀಕ್ಷಕಿ ಬಿಂದು, ಮೂರ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಲಲಿತ, ಚಿತ್ರಕಲೆ ಶಿಕ್ಷಕ ಉ.ರಾ. ನಾಗೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net