ಮಡಿಕೇರಿ ಶಾಸಕರ ಆಪ್ತ ಮೊಟ್ಟೆ ಎಸೆತ ಆರೋಪಿ ಸಂಪತ್

20mdka1 - Copy
Published on

ಮಡಿಕೇರಿ: ಗುಡ್ಡೆಹೊಸೂರಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಸಂಪತ್ ಮಡಿಕೇರಿ ಶಾಸಕರ ಆಪ್ತ ಗುತ್ತಿಗೆದಾರ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ಗೌಡ ಆರೋಪಿಸಿದ್ದಾರೆ.

ಮೊಟ್ಟೆ ಎಸೆದ ಪ್ರಕರಣ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ತಮ್ಮ ಆಪ್ತನನ್ನು ಕಾಂಗ್ರೆಸ್ ಕಾರ್ಯಕರ್ತ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಆ ಮೂಲಕ ತನ್ನ ಆಪ್ತ ಬೀದಿಗೆ ಬೀಳುವಂತೆ ಮಾಡಿದ್ದಾರೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ಮಡಿಕೇರಿ ಶಾಸಕ , ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರೊಂದಿಗೆ ಸಂಪತ್ ಇರುವ ಫೋಟೋ ಇದೇ ಸಂದರ್ಭ ಬಿಡುಗಡೆ ಮಾಡಿ ದರು. ಇದರೊಂದಿಗೆ ಸಂಪತ್ ಫೇಸ್ ಬುಕ್ ಖಾತೆಯಲ್ಲಿ ಹಿಂದು ಪರ ಚಟುವಟಿಕೆಗಳ ಮಾಹಿತಿ ಮತ್ತು ವಿಡಿಯೋ ಹಾಕಿರುವುದನ್ನು ಬಹಿರಂಗ ಪಡಿಸಿದರು. ಫೇಸ್ ಬುಕ್ ಸಂಪತ್ ಯಾರೆಂದು ಸತ್ಯ ಹೇಳುತ್ತದೆ ಎಂದರು.

ಗುಡ್ಡೆಹೊಸೂರಿನಲ್ಲಿ ಕಾರಿಗೆ ಕಲ್ಲು ಹೊಡೆಯುತ್ತಿದ್ದಂತೆ ಕುಶಾಲನಗರ ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಸಂಪತ್‌ನನ್ನು ವಶಕ್ಕೆ ಪಡೆದುಕೊಂಡಿದ್ದರು. ಆದರೆ, ತದನಂತರ ಪ್ರಕರಣ ದಾಖಲಿಸದೆ ಅವರನ್ನು ಬಿಟ್ಟು ಕಳುಹಿಸಲು ಯಾರ ಒತ್ತಡ ಕಾರಣವೆಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.

ಶೇ.೪೦ ಕಮಿಷನ್ ಪಡೆಯುವ ವಿಚಾರ ಸಿದ್ದರಾಮಯ್ಯ ಮೂಲಕ ರಾಜ್ಯದ ಜನತೆಗೆ ತಿಳಿಯುತ್ತದೆ. ಕೊಡಗಿನ ಶಾಸಕರ ಮುಖವಾಡ ಬಯಲಾಗುತ್ತೆ ಎಂಬ ಕಾರಣಕ್ಕಾಗಿ ಸಿದ್ದರಾಮಯ್ಯ ಅವರಿಗೆ ಅಡ್ಡಿ ಪಡಿಸುವ ಕಾರ್ಯ ನಡೆದಿದೆ. ಪೊಲೀಸರ ಸಮ್ಮುಖದಲ್ಲಿ ನಡೆದ ಘಟನೆ ನೋಡಿದ್ದಾಗ ಇದು ಶಾಸಕರ ಆದೇಶದಂತೆ ನಡೆದಿದೆ ಎಂದು ಆರೋಪಿಸಿದರು.

ಶಾಸಕರಿಗೆ ಸೋಲುವ ಭೀತಿಯಿಂದ ಆ.೨೬ ರಂದು ಮಡಿಕೇರಿ ಚಲೋ ತಡೆಯುವ ಉದ್ದೇಶದಿಂದ ಬಿಜೆಪಿ ಅದೇ ದಿನ ಜನಜಾಗೃತಿ ಸಮಾವೇಶಕ್ಕೆ ಮುಂದಾಗಿದೆ. ನಿಮಗೆ ಕೊಡಗು ಬಂದ್ ಮಾಡಿಸಬಹುದು. ಆದರೆ, ನಮಗೆ ರಾಜ್ಯ ಬಂದ್ ಮಾಡಿಸುವ ಶಕ್ತಿ ಇದೆ. ಆರ್‌ಎಸ್‌ಎಸ್ ಕಪಿಮುಷ್ಠಿಯಲ್ಲಿ, ಬ್ರಿಟಿಷ್ ಸಂತತಿ ಹಿಡಿತದಲ್ಲಿರುವ ಕೊಡಗಿಗೆ ಸ್ವಾತಂತ್ರೃ ಸಿಗುವಂತೆ ಮಾಡುವ ಕೆಲಸ ಕಾಂಗ್ರೆಸ್ ಮಾಡಲಿದೆ ಎಂದರು.

ಆ.೨೬ ರ ಮಡಿಕೇರಿ ಚಲೋ ನಡೆಯಲಿದೆ. ಕೊಡಗಿನಿಂದ ೧೫ ರಿಂದ ೨೦ ಸಾವಿರ ಕಾಂಗ್ರೆಸ್ ಕಾರ್ಯಕರ್ತರು ಸೇರಲಿದ್ದಾರೆ. ಸಿದ್ದರಾಮಯ್ಯ ಕಾರಿಗೆ ಒಂದು ಮೊಟ್ಟೆ ಹೊಡೆದಿದ್ದಾರೆ. ಇಬ್ಬರು ಶಾಸಕರ ಕಾರಿಗೆ ನೂರು- ನೂರು ಮೊಟ್ಟೆ ಹೊಡೆಯುವ ಶಕ್ತಿ ಕಾಂಗ್ರೆಸ್ ಕಾರ್ಯಕರ್ತರಿಗೆ ಇದೆ. ಆದರೆ, ಬಿಜೆಪಿ ಸಂಸ್ಕೃತಿ, ಲಜ್ಜೆಗೇಡಿತನ ನಾವು ಮಾಡುವುದಿಲ್ಲ. ಮೊಟ್ಟೆ ಎಸೆದಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.

ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಡಿ.ಯು. ಕಿರಣ್ (ಸೋಮವಾರಪೇಟೆ), ಸಿರಾಜುದ್ದೀನ್ (ನಾಪೋಕ್ಲು), ಉಮ್ಮರ್ ಫಾರೂಕ್ (ವಿರಾಜಪೇಟೆ), ದರ್ಶನ್ ಪೆಮ್ಮಯ್ಯ (ಮಡಿಕೇರಿ), ಕಾರ್ಯದರ್ಶಿ ಸಿ. ದೇವರಾಜು (ಸೋಮವಾರಪೇಟೆ), ಉಪಾಧ್ಯಕ್ಷ ಟಿ.ವಿ. ಲೋಹಿತ್ (ಮಡಿಕೇರಿ) ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net