ಪೌತಿ ಖಾತೆ ಮಾಡಿಸಲು ವಿಳಂಬ ಮಾಡುತ್ತಿದ್ದ ಶಿರಸ್ತೇದಾರ್​ಗೆ ಶಾಸಕರಿಂದ ತೀವ್ರ ತರಾಟೆ

Madikeri Photo
Published on

ಮಡಿಕೇರಿ: ಸಾರ್ವಜನಿಕರಿಗೆ ಪೌತಿ ಖಾತೆ ಮಾಡಿಸಲು ಕುಂಟು ನೆಪ ಹೇಳುತ್ತ, ಅಸಹಕಾರ ತೋರುತ್ತಿದ್ದ ಶಿರಸ್ತೇದಾರ ಸಂಜು ಕುಮಾರ್​ ಅವರನ್ನು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ತೀವ್ರ ತರಾಟೆಗೆ ತೆಗೆದುಕೊಂಡರು.

ಅಕ್ಟೋಬರ್ 27 ರಿಂದ ಜಿಲ್ಲೆಯಾದ್ಯಂತ ಪೌತಿ ಖಾತೆ ಮಾಡುವ ಅಭಿಯಾನ ಕೈಗೆತ್ತಿಕೊಳ್ಳಲಾಗಿದೆ. ಆದರೆ, ವಿರಾಜಪೇಟೆ ಶಿರಸ್ತೇದಾರ್ ಪೌತಿ ಖಾತೆ ಮಾಡಿಸುವ ವಿಚಾರದಲ್ಲಿ ಅಸಹಕಾರ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಶಾಸಕರೊಂದಿಗೆ ಅಳಲು ತೋಡಿಕೊಂಡಿದ್ದರು. ಗುರುವಾರ ಕಚೇರಿಗೆ ಆಗಮಿಸಿದ ಶಾಸಕ ಬೋಪಯ್ಯ, ಶಿರಸ್ತೇದಾರ್​​ರನ್ನು ತರಾಟೆಗೆ ತೆಗೆದುಕೊಂಡರು. ಅನಗತ್ಯ ನೆಪ ಹೇಳಿ ಸಾರ್ವಜನಿಕರಿಗೆ ತೊಂದರೆ ಮಾಡದಂತೆ ತಾಕೀತು ಮಾಡಿದರು. ಸುಲಭವಾಗಿ ಪೌತಿ ಖಾತೆ ಮಾಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು

ಬಳಿಕ ಮಾತನಾಡಿದ ಶಾಸಕರು, ಪೌತಿ ಖಾತೆ ಮಾಡಲು ಅಧಿಕೃತ ಸುತ್ತೋಲೆ ಬಂದಿಲ್ಲ ಅಂದು ತಾಲೂಕು ಕಚೇರಿಗೆ ಆಗಮಿಸಿದವರಿಗೆ ಶಿರಸ್ತೇದಾರ ಹೇಳಿದ್ದಾರೆ. ಆ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಕೆಲಸ ಶಿರಸ್ತೇದಾರರು ಮಾಡಿದ್ದಾರೆ. ತಾನು ಮುಖ್ಯಮಂತ್ರಿ ಗಮನ ಸೆಳೆದಿದ್ದರಿಂದ ಪೌತಿ ಖಾತೆ ಅಭಿಯಾನಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗಿರುವಾಗ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ತೊಂದರೆ ಆಗಬಾರದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಅರ್ಜಿ ವಿಲೇವಾರಿ ಆಗಲು ವಿಳಂಬವಾಗುತ್ತಿರುವ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ತಾಲೂಕು ಕಚೇರಿಗೆ ಪ್ರತಿವಾರ ಭೇಟಿ ನೀಡುವುದಾಗಿ ಕೆ.ಜಿ. ಬೋಪಯ್ಯ ಹೇಳಿದರು. ಅಕ್ರಮ- ಸಕ್ರಮ ಸಮಿತಿ ಅಧ್ಯಕ್ಷ ಗಿರೀಶ್ ಗಣಪತಿ, ಮಜೆಪಿ ಮುಖಂಡರಾದ ಮೂಕೊಂಡ ಶಶಿ ಸುಬ್ರಮಣಿ, ಮಲ್ಲಂಡ ಮಧು, ರಘು ನಾಣಯ್ಯ ಮತ್ತಿತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net