ಕಾಫಿ ಬೆಳೆಗಾರರ ಪಂಪ್ ಸೆಟ್‌ಗೆ ಮೀಟರ್ ರಹಿತ ವಿದ್ಯುತ್ ಸಂಪರ್ಕಕ್ಕೆ ಆಗ್ರಹ

manu somaiah
Published on

ಮಡಿಕೇರಿ: ಕಾಫಿ ಬೆಳೆಗಾರರಿಗೆ ೧೦ ಎಚ್‌ಪಿವರೆಗಿನ ಪಂಪ್ ಸೆಟ್‌ಗೆ ಮೀಟರ್ ರಹಿತವಾಗಿ ಉಚಿತವಾಗಿ ವಿದ್ಯುತ್ ಸಂಪರ್ಕ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ಹೊರಡಿಸಿರುವ ಷರತ್ತುಗೊಳಪಟ್ಟ ಸುತ್ತೋಲೆ ವಿರೋಧಿಸುತ್ತೇವೆ. ಕೊಡಗು, ಹಾಸನ, ಚಿಕ್ಕಮಗಳೂರಿನ ಕಾಫಿ ಬೆಳೆಗಾರರು ವಿದ್ಯುತ್ ಬಿಲ್ ಪಾವತಿಸದೇ ತಮ್ಮ ಪ್ರತಿಭಟನೆ ದಾಖಲಿಸುವುದಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು.

ಇತರೆ ಬೆಳೆಗಳಿಗೆ ಮೀಟರ್ ರಹಿತವಾಗಿ ಉಚಿತ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಅದೇ ರೀತಿ ಕಾಫಿ ಬೆಳೆಗಾರರಿಗೂ ಉಚಿತ ವಿದ್ಯುತ್ ಸಂಪರ್ಕ ಒದಗಿಸಬೇಕು. ಕಾಫಿ ರಫ್ತುನಿಂದ ಕೋಟ್ಯಂತರ ರೂಪಾಯಿ ವಿದೇಶಿ ವಿನಿಮಯ ಬರುತ್ತಿದೆ. ಕಾಫಿ ಉದ್ದಿಮೆಯಿಂದ ದೊಡ್ಡ ಲಾಭ ಇದೆ. ಉಚಿತ ವಿದ್ಯುತ್ ಸಂಪರ್ಕ ಒದಗಿಸುವುದು ದೊಡ್ಡ ಹೊರೆಯಾಗುವುದಿಲ್ಲ ಎಂದಿದ್ದಾರೆ.

ಪ್ರಸ್ತುತ ಸರ್ಕಾರದ ಸುತ್ತೋಲೆಯನ್ವಯ ಯೂನಿಟ್‌ಗೆ ಮಾತ್ರ ಸವಲತ್ತು ಸಿಗಲಿದೆ. ಕನಿಷ್ಠ ದರ, ತೆರಿಗೆ ಹಣವನ್ನು ಬೆಳೆಗಾರರೇ ಪಾವತಿಸ ಬೇಕಾಗಿದೆ. ಬೆಳೆಗಾರರ ಖಾತೆಗೆ ಹಣ ಜಮಾ ಮಾಡುವ ಬದಲು ಸರ್ಕಾರ ನೇರವಾಗಿ ಸೆಸ್ಕ್‌ಗೆ ಹಣ ಪಾವತಿಸುವ ವ್ಯವಸ್ಥೆ ಮಾಡಲಿ. ಮೀಟರ್ ರಹಿತವಾಗಿ ಉಚಿತ ವಿದ್ಯುತ್ ಸಂಪರ್ಕ ಒದಗಿಸಬೇಕೆಂದು ಮನು ಸೋಮಯ್ಯ ಒತ್ತಾಯಿಸಿದರು.

ಕಳೆದ ಹಲವು ವರ್ಷದಿಂದ ಕಾಫಿ ಬೆಳೆಗಾರರು ಪ್ರಕೃತಿ ವಿಕೋಪಕ್ಕೆ ಸಿಲುಕಿದ್ದಾರೆ. ಎಕರೆಗೆ ೧ ಲಕ್ಷ ರೂ. ಪರಿಹಾರ ಒದಗಿಸಬೇಕು. ವಾಣಿಜ್ಯ- ಸಹಕಾರ ಸಂಸ್ಥೆಗಳಲ್ಲಿ ಮಾಡಿರುವ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಬೆಳೆ ನಷ್ಟಕ್ಕೆ ಪ್ರಸ್ತುತ ನೀಡುತ್ತಿರುವ ಪರಿಹಾರ ಮೊತ್ತವನ್ನು ೧೦ ಪಟ್ಟು ಹೆಚ್ಚು ಮಾಡಬೇಕೆಂದು ರೈತ ಸಂಘದ ಕಾನೂನು ಸಲಹೆಗಾರ ಹೇಮಚಂದ್ರ ಆಗ್ರಹಿಸಿದರು.

ಕಾಡಾನೆ ಹಾವಳಿ ತಡೆಗಟ್ಟಲು ರಾಷ್ಟ್ರೀಯ ಅರಣ್ಯ ನೀತಿ ರೂಪಿಸಬೇಕು. ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಸೆರೆಹಿಡಿದು ವಿದೇಶ ಕ್ಕೆ ಮಾರಾಟ ಮಾಡಬೇಕು. ಕಳಪೆ ರಸಗೊಬ್ಬರ ಮಾರಾಟ ಮಾಡುತ್ತಿರುವ ಏಜೆನ್ಸಿ ಹಾಗೂ ಸಂಘಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರಮಾಡ ಸುಜಯ್ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net