ಕೊಡಗು ಜಿಲ್ಲಾಡಳಿತ ಭವನ ಮುಂಭಾಗದ ರಸ್ತೆ ವಾಹನ ಸಂಚಾರಕ್ಕೆ ಮುಕ್ತ

27mdkj2 - Copy
Published on

ಮಡಿಕೇರಿ: ಜಿಲ್ಲಾಡಳಿತ ಭವನದ ಮುಂಭಾಗ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಬುಧವಾರ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಡಳಿತ ಭವನದ ಎದುರು ನಿರ್ಮಿಸಿರುವ ತಡೆಗೋಡೆ ಕುಸಿಯುವ ಆತಂಕದ ಹಿನ್ನೆಲೆಯಲ್ಲಿ ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿತ್ತು. ಇದೀಗ ಜಿಲ್ಲಾಧಿಕಾರಿ ಹೊಸ ಆದೇಶ ಹೊರಡಿಸುವುದರ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ದ್ವಿಚಕ್ರ, ತ್ರಿಚಕ್ರ ಹಾಗೂ ೭+೧ ಸೀಟರ್‌ವರೆಗೆ ೪ ಚಕ್ರಗಳ ಲಘು ಮೋಟಾರು ವಾಹನಗಳನ್ನು ಜಿಲ್ಲಾಡಳಿತ ಭವನದ ಮುಂಭಾಗದ ರಸ್ತೆಯಲ್ಲಿ ದ್ವಿಮುಖವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ. ೭+೧ ಸೀಟರ್‌ಗಿಂತ ಹೆಚ್ಚಿನ ಆಸನ ಸಾಮರ್ಥ್ಯದ ೪ ಚಕ್ರಗಳ ಲಘು ಮೋಟಾರು ವಾಹನಗಳು ೬ ಚಕ್ರಗಳ ಒಟ್ಟು ತೂಕ ೧೬.೨ ಟನ್ ಒಳಪಟ್ಟ ಸರಕು ಸಾಗಾಣಿಕ ವಾಹನಗಳು ಮಡಿಕೇರಿಯಿಂದ ಸಂಪಾಜೆ ಕಡೆಗೆ ಜಿಲ್ಲಾಡಳಿತ ಭವನ ಮುಂಭಾಗದ ರಸ್ತೆಯಲ್ಲಿ ಏಕಮುಖವಾಗಿ ಸಂಚರಿಸಬಹುದು.

ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ಗಳು (ಮಲ್ಟಿ ಆಕ್ಸಿಲ್, ಸ್ಲೀಪರ್ ಕೋಚ್ ಸಾರಿಗೆ ವಾಹನಗಳು), ಅನಿಲ, ರಸಗೊಬ್ಬರ ಹಾಗೂ ಇಂಧನ ಸಾಗಾಣಿಕೆ ವಾಹನಗಳು ಸಂಪಾಜೆಯಿಂದ ಮಡಿಕೇರಿ ಕಡೆಗೆ ಸಂಪಾಜೆ- ತಾಳತ್ತಮನೆ-ಮೇಕೇರಿ ಮಾರ್ಗವಾಗಿ ಮಡಿಕೇರಿ ಕಡೆಗೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net