ಹರಾಜು ಕಾರ್ ತಂದೊಡ್ಡಿದ ಸಂಕಷ್ಟ

1mdks2 - Copy
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಅಬಕಾರಿ ಇಲಾಖೆಯ ಹರಾಜಿನಲ್ಲಿ ಪಾಲ್ಗೊಂಡು ೧೬ ವರ್ಷ ಹಿಂದೆ ಕಾರು ಖರೀದಿಸಿ ಪರಿತಪಿಸುತ್ತಿರುವ ವಿಚಿತ್ರ ವಿದ್ಯಮಾನ ಇದು. ಮಡಿಕೇರಿಯ ಅಜಾದ್‌ನಗರದಲ್ಲಿ ನೆಲೆಸಿರುವ ಎಂ.ಎಚ್. ನೂರುದ್ದೀನ್ ತನಗಾಗಿರುವ ಅನ್ಯಾಯಕ್ಕೆ ನ್ಯಾಯ ಕೋರಿ ಇಂದಿಗೂ ಗ್ರಾಹಕರ ವೇದಿಕೆಗೆ ಅಲೆದಾಡುತ್ತಿದ್ದಾರೆ.

ಅಬಕಾರಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದ ವಾಹನಗಳ ಬಹಿರಂಗ ಹರಾಜಿನಲ್ಲಿ ಪಾಲ್ಗೊಂಡು ೧೫-೦೨- ೨೦೦೭ ರಲ್ಲಿ ಖರೀದಿಸಿದ ಮಾರುತಿ ೮೦೦ ಕಾರ್ ಸಮಸ್ಯೆಯಾಗಿ ಕಾಡುತ್ತಿದೆ. ಹಣ, ಸಮಯ, ಮಾನಸಿಕ ನೆಮ್ಮದಿ ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಮಡಿಕೇರಿಯಲ್ಲಿರುವ ಅಬಕಾರಿ ಆವರಣದಲ್ಲಿ ನಡೆದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ೬೨ ಸಾವಿರ ರೂ.ಗೆ ಕೆಎ ೧೨ ಎಂ ೩೭೧೭ ನೋಂದಣಿ ಸಂಖ್ಯೆಯ ಮಾರುತಿ ೮೦೦ ಕಾರ್ ಬಿಡ್ಡ್ ಮಾಡಿದ್ದರು. ಬಿಡ್ಡ್ ಹಣದೊಂದಿಗೆ ಒಟ್ಟು ೬೯,೭೫೦ ರೂ. ಪಾವತಿಸಿ ಕಾರ್ ಖರೀದಿಸಿದ್ದರು.

ತನ್ನ ಹೆಸರಿಗೆ ವರ್ಗಾಯಿಸಲು ಅಬಕಾರಿ ಇಲಾಖೆಯಿಂದ ದಾಖಲೆ ಪತ್ರ ಪಡೆಯುವಾಗ ವಾಹನದ ನೋಂದಣಿ ಸಂಖ್ಯೆಯು ಕೆಎ ೨೨ ಎಂ ೩೭೧೭ ಎಂದು (ಕೆಎ ೧೨ ಕೊಡಗು, ಕೆಎ ೨೨ ಬೆಳಗಾವಿ) ದಾಖಲಾಗಿತ್ತು. ಸಾರಿಗೆ ಇಲಾಖೆ ಸೂಚನೆಯನ್ವಯ ನಕಲಿ ನೋಂದಣಿ ಸಂಖ್ಯೆ ಆಗಿರುವುದರಿಂದ ೬,೮೨೦ ರೂ. ರಸ್ತೆ ತೆರಿಗೆ ಪಾವತಿಸಿದ್ದರು. ಹಣ ಪಾವತಿಸಿದ ಬಳಿಕ ದಾಖಲೆ ವರ್ಗಾವಣೆ ಆಗದಿರುವ ಬಗ್ಗೆ ಪ್ರಶ್ನಿಸಿದ್ದಾಗ, ಹೊಸ ವಾಹನದ ಬೆಲೆಯ ಆಧಾರದಲ್ಲಿ ರಸ್ತೆ ತೆರಿಗೆ ಪಾವತಿಸಬೇಕೆಂಬ ಸೂಚನೆ ಆರ್‌ಟಿಒ ಕಚೇರಿಯಿಂದ ಬಂತು.

ಹೊಸ ವಾಹನದ ಬೆಲೆಯ ಆಧಾರದಲ್ಲಿ ತೆರಿಗೆ ಪಾವತಿಸಲು ನಿರಾಕರಿಸಿದ್ದ ಎಂ.ಎಚ್. ನೂರುದ್ದೀನ್ ೨೪-೦೩-೨೦೧೦ ರಲ್ಲಿ ಕೊಡಗು ಜಿಲ್ಲಾ ಗ್ರಾಹಕರ ವೇದಿಕೆಗೆ ಪರಿಹಾರ ಕೋರಿ ವಕೀಲ ಸುಮನ್ ಪಾಲಾಕ್ಷ ಮೂಲಕ ದೂರು ಸಲ್ಲಿಸಿದರು. ಅಬಕಾರಿ ಉಪ ಆಯುಕ್ತರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದರು.

ಅಬಕಾರಿ ಉಪ ಆಯುಕ್ತರು ಕಾರು ಹಿಂಪಡೆದುಕೊಂಡು ೯೦,೮೨೪ ರೂಪಾಯಿ ಹಣವನ್ನು ಶೇ.೧೦ ರಂತೆ ಬಡ್ಡಿ ಸೇರಿಸಿ ಕೊಡುವಂತೆ ಆದೇಶಿಸಿತ್ತು. ಇದರೊಂದಿಗೆ ೫ ಸಾವಿರ ರೂ. ಪರಿಹಾರ ಹಾಗೂ ೫೦೦ ರೂ. ದಾವಾ ವೆಚ್ಚ ನೀಡುವಂತೆ ಪ್ರತಿವಾದಿಗಳಿಗೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಅಬಕಾರಿ ಉಪ ಆಯುಕ್ತರು ಹಾಗೂ ಆರ್‌ಟಿಒ ಕರ್ನಾಟಕ ರಾಜ್ಯ ಗ್ರಾಹಕರ ಪರಿಹಾರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿ ದ್ದರು. ಈ ಬಗ್ಗೆ ಪುನರ್ ಪರಿಶೀಲಿಸುವಂತೆ ಆಯೋಗ, ಜಿಲ್ಲಾ ಗ್ರಾಹಕರ ವೇದಿಕೆಗೆ ಆದೇಶಿಸಿತ್ತು.

ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ಈ ಪ್ರಕರಣದ ಮರು ವಿಚಾರಣೆ ನಡೆದು ೨೦-೭-೨೦೧೩ ರಂದು ಆದೇಶ ಹೊರಡಿಸಲಾಯಿತು. ಕಾರು ಹಿಂಪಡೆದುಕೊಂಡು ೯೦,೮೨೪ ರೂ.ಗಳೊಂದಿಗೆ ೧೦ ಸಾವಿರ ರೂ. ಪರಿಹಾರ, ೫ ಸಾವಿರ ರೂ. ವೆಚ್ಚವನ್ನು ಶೇ.೮ ರಂತೆ ಬಡ್ಡಿ ಸಹಿತ ನೀಡು ವಂತೆ ಆದೇಶದಲ್ಲಿ ಸ್ಪಷ್ಟ ಪಡಿಸಲಾಯಿತು. ಈ ಆದೇಶವನ್ನು ಪ್ರಶ್ನಿಸಿ ಅಬಕಾರಿ ಉಪ ಆಯುಕ್ತರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿ ೧೭-೨-೨೦೧೪ ರಲ್ಲಿ ಕರ್ನಾಟಕ ಗ್ರಾಹಕರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದರು. ಗ್ರಾಹಕರ ಆಯೋಗವು ೮ ವರ್ಷ ನಂತರ (೧೦-೩-೨೦೨೨) ಜಿಲ್ಲಾ ಗ್ರಾಹಕರ ವೇದಿಕೆ ತೀರ್ಪನ್ನು ಎತ್ತಿ ಹಿಡಿಯಿತು.

ಜಿಲ್ಲಾ ಗ್ರಾಹಕರ ವೇದಿಕೆ ಆದೇಶ ಅನುಷ್ಠಾನಕ್ಕೆ ಕೋರಿ ನೂರುದ್ದೀನ್ ೨-೦೭-೨೦೨೨ ರಂದು ವೇದಿಕೆಗೆ ಅಮಲ್ಜಾರಿ ಅರ್ಜಿ ಸಲ್ಲಿಸಿದರು. ವೇದಿಕೆ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ೨೩-೮-೨೦೨೨ ರಂದು ಬಂಧನ ಆದೇಶ ಹೊರಡಿಸಿತ್ತು. ಈ ಬಗ್ಗೆ ಅಬಕಾರಿ ಆಯುಕ್ತರು ಗ್ರಾಹಕರ ಆಯೋಗಕ್ಕೆ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸುವುದರೊಂದಿಗೆ ಆದೇಶಕ್ಕೆ ೨೫-೦೮-೨೦೨೨ ರಂದು ತಡೆಯಾಜ್ಞೆ ತಂದಿದ್ದಾರೆ.

ಕೆಎ ೧೨ ಝಡ್ ೬೫೬೨…!
ಅಬಕಾರಿ ಇಲಾಖೆ ಬಹಿರಂಗ ಹರಾಜಿನಲ್ಲಿ ಮಾರುತಿ ೮೦೦ ಕಾರ್ ನೋಂದಣಿ ಸಂಖ್ಯೆ ಕೆಎ ೧೨ ಎಂ ೩೭೧೭ ಎಂದು ಉಲ್ಲೇಖಿಸಲಾಗಿತ್ತು. ದಾಖಲೆ ನೀಡುವ ವೇಳೆ ಕೆಎ ೨೨ ಎಂ ೩೭೧೭ ರಂದು ನೀಡಲಾಗಿತ್ತು. ೧೭-೦೨-೨೦೧೬ ರಂದು ಮಡಿಕೇರಿ ಆರ್‌ಟಿಒನಲ್ಲಿ ಎಂ.ಎಚ್. ನೂರುದ್ದೀನ್ ಹೆಸರಿಗೆ ಕಾರ್ ದಾಖಲೆ ವರ್ಗಾಯಿಸಲಾಗಿದೆ. ಇಲ್ಲಿ ನೋಂದಣಿ ಸಂಖ್ಯೆ ಕೆಎ ೧೨ ಝಡ್ ೬೫೬೨ ಎಂದಿದೆ.

ತನ್ನ ಹೆಸರಿಗೆ ಕಾರ್ ದಾಖಲೆ ಆಗಿರುವುದು ಇದುವರೆಗೂ ನೂರುದ್ದೀನ್ ಗಮನಕ್ಕೆ ಬಂದಿಲ್ಲ. ಕೊಡಗು ಜಿಲ್ಲಾ ಗ್ರಾಹಕರ ವೇದಿಕೆ, ಕರ್ನಾಟಕ ಗ್ರಾಹಕರ ಆಯೋಗದಲ್ಲಿ ವ್ಯಾಜ್ಯ ನಡೆಯುವ ಸಂದರ್ಭದಲ್ಲಿಯೂ ಸಾರಿಗೆ ಮತ್ತು ಅಬಕಾರಿ ಆಯುಕ್ತರು ಈ ದಾಖಲೆ ಸಲ್ಲಿಸಿರಲಿಲ್ಲ.

ಅಬಕಾರಿ ಆಯುಕ್ತರ ಬಂಧನ ಆದೇಶ ಹೊರಡಿಸುತ್ತಿದ್ದಂತೆ ಕರ್ನಾಟಕ ರಾಜ್ಯ ಗ್ರಾಹಕರ ಪರಿಹಾರ ಆಯೋಗಕ್ಕೆ ಆಗಸ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ಎಂ.ಎಚ್. ನೂರುದ್ದೀನ್ ಹೆಸರಿಗೆ ಕಾರ್ ನೋಂದಣಿ ಆಗಿರುವ ದಾಖಲೆ ಸಲ್ಲಿಸಲಾಗಿದೆ. ಈ ಹಿಂದಿನ ಅಬಕಾರಿ ಆಯುಕ್ತರು ಕಾರ್ ನೋಂದಣಿ ಆಗಿರುವ ಬಗ್ಗೆ ಮಾಹಿತಿ ನೀಡರಲಿಲ್ಲ. ನಾವು ನೀಡಿದ್ದೇವೆಂದು ಅಬಕಾರಿ ಆಯುಕ್ತ ಜಗದೀಶ್ ನಾಯ್ಕ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ರಸ್ತೆ ಬದಿ ನಿಂತಿರುವ ಕಾರ್
ಅಬಕಾರಿ ಹರಾಜಿನಲ್ಲಿ ಪಾಲ್ಗೊಂಡು ೨೦೦೭ ರಲ್ಲಿ ಖರೀದಿಸಿದ ಮಾರುತಿ ೮೦೦ ಕಾರನ್ನು ನೂರುದ್ದೀನ್ ರಸ್ತೆ ಬಂದಿ ನಿಲ್ಲಿಸಿದ್ದಾರೆ. ಈ ವಾಹನ ಹಿಂಪಡೆದುಕೊಳ್ಳುವಂತೆ ಅಬಕಾರಿ ಇಲಾಖೆಗೆ ಲಿಖಿತ ಅರ್ಜಿ ಸಲ್ಲಿಸಿದ ಬಳಿಕ ಕೊಡಗು ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದ್ದರು.
ನಿಂತಲ್ಲೇ ನಿಂತಿರುವ ಕಾರ್ ಬಳಕೆಗೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ.

೨೦೧೬ ರಲ್ಲಿ ನೂರುದ್ದೀನ್ ಹೆಸರಿಗೆ ಕಾರ್ ನೋಂದಣಿ ಆಗಿರುವ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಜಿಲ್ಲಾ ಗ್ರಾಹಕರ ವೇದಿಕೆ ನೀಡಿರುವ ತೀರ್ಪನ್ನು ಕರ್ನಾಟಕ ಗ್ರಾಹಕರ ಆಯೋಗ ವಜಾಗೊಳಿಸಿದ್ದಲ್ಲಿ ನೂರುದ್ದೀನ್ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಬಳಕೆಗೆ ಯೋಗ್ಯವಲ್ಲದ
ಕಾರ್ ಇಟ್ಟುಕೊಂಡು ನಾನೇನು ಮಾಡಲಿ ಎಂದು ಪ್ರಶ್ನಿಸುತ್ತಿದ್ದಾರೆ.

**
ಹದಿನಾರು ವರ್ಷ ಹಿಂದೆ ಅಬಕಾರಿ ಇಲಾಖೆಯ ಹರಾಜಿನಲ್ಲಿ ಖರೀದಿಸಿದ್ದ ಮಾರುತಿ ೮೦೦ ಕಾರ್ ವಿವಾದ ಇನ್ನೂ ಇತ್ಯರ್ಥಗೊಂಡಿಲ್ಲ. ಕೊಡಗು ಜಿಲ್ಲಾ ಗ್ರಾಹಕರ ವೇದಿಕೆ ಅಬಕಾರಿ ಆಯುಕ್ತರ ಬಂಧನಕ್ಕೆ ಆದೇಶ ಹೊರಡಿಸಿದ್ದು, ನನ್ನ ಹೋರಾಟಕ್ಕೆ ಸಿಕ್ಕ ಜಯ. ಕರ್ನಾಟಕ ರಾಜ್ಯ ಗ್ರಾಹಕರ ಪರಿಹಾರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ಪಡೆದಿರುವ ಮಾಹಿತಿ ನನಗೆ ಇನ್ನೂ ಬಂದಿಲ್ಲ. ಎಂ.ಎಚ್. ನೂರುದ್ದೀನ್, ಆಜಾದ್‌ನಗರ ನಿವಾಸಿ.

**

ಜಿಲ್ಲಾ ಗ್ರಾಹಕರ ವೇದಿಕೆ ನೀಡಿರುವ ಆದೇಶಕ್ಕೆ ಕರ್ನಾಟಕ ಗ್ರಾಹಕರ ಆಯೋಗದಲ್ಲಿ ತಡೆಯಾಜ್ಞೆ ತರಲಾಗಿದೆ. ನೂರುದ್ದೀನ್ ಅಬಕಾರಿ ಇಲಾಖೆ ಹರಾಜಿನಲ್ಲಿ ಖರೀದಿಸಿದ್ದ ಕಾರ್ ೨೦೧೬ನೇ ಇಸವಿಯಲ್ಲಿ ಆರ್‌ಟಿಒ ಕಚೇರಿಯಲ್ಲಿ ನೋಂದವಣಿ ಆಗಿದೆ. ಈ ಮಾಹಿತಿಯನ್ನು ಸಂಬಂಧಿಸಿದವರಿಗೆ ಈ ಹಿಂದಿನ ಅಬಕಾರಿ ಆಯುಕ್ತರು ತಂದಿರಲಿಲ್ಲ. ಆಯೋಗಕ್ಕೆ ದಾಖಲೆ ಸಲ್ಲಿಸಿದ್ದೇವೆ. ಜಗದೀಶ್ ನಾಯ್ಕ, ಅಬಕಾರಿ ಆಯುಕ್ತರು, ಕೊಡಗು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net