ಕೇಂದ್ರದ ಭರವಸೆಯ ಜನಪರ ಬಜೆಟ್

download
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಮಂಡಿಸಿದ ಮುಂಗಡ ಪತ್ರ ಬಗ್ಗೆ ಭರವಸೆಯ ಬಜೆಟ್ ಎಂಬ ಮೆಚ್ಚುಗೆ ವ್ಯಕ್ತವಾಗಿದೆ. ರೈತರು, ಯುವಜನರು, ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರು, ಆರ್ಥಿಕವಾಗಿ ದುರ್ಬಲರ ಅಭಿವೃದ್ಧಿಗೆ ಮುಂಗಡ ಪತ್ರದಲ್ಲಿ ಒತ್ತು ನೀಡಲಾಗಿದೆ.

ಮೂಲಭೂತ ಸವಲತ್ತುಗಳಿಂದ ವಂಚಿತರಾಗಿರುವವರಿಗೆ ಅಗತ್ಯ ಸವಲತ್ತು ಒದಗಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ. ಕೌಶಲ್ಯಾಭಿವೃದ್ಧಿಗೆ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ಪ್ರಕಟಿಸಲಾಗಿದೆ. ಬಡವರಿಗೆ ಉಚಿತ ಆಹಾರಧಾನ್ಯ ಒದಗಿಸುವ ಪ್ರಧಾನ ಮಂತ್ರಿ ಗರೀಬ್ ಯೋಜನೆ ವಿಸ್ತರಿಸಲಾಗಿದೆ. ಇದಕ್ಕಾಗಿ ೨ ಲಕ್ಷ ಕೋಟಿ ರೂಪಾಯಿ ಘೋಷಿಸಲಾಗಿದೆ.

ಹಸಿರು ಕ್ರಾಂತಿಗೆ ಒತ್ತು ನೀಡಲಾಗಿದ್ದು, ಹಸಿರು ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ಪ್ರಕಟಿಸಲಾಗಿದೆ. ಈ ಮೂಲಕ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಮೂಡಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವುದರ ಮೂಲಕ ಉದ್ಯೋಗ ಸೃಷ್ಟಿ ಮಾಡು ವತ್ತ ಗಮನ ಹರಿಸಲಾಗಿದೆ.

ರೈತರ ಕಲ್ಯಾಣಕ್ಕೂ ಕೇಂದ್ರ ಸರ್ಕಾರ ಮಹತ್ವ ನೀಡಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ೫ ವರ್ಷದಲ್ಲಿ ೧೪ ಕೋಟಿ ರೈತರಿಗೆ ೨.೭ ಲಕ್ಷ ಕೋಟಿ ರೂಪಾಯಿ ಹಣ ಹಂಚಿಕೆ ಮಾಡಲಾಗಿದೆ. ಮಹಿಳೆಯರ ಸಬಲೀಕರಣಕ್ಕೆ ಸ್ವಸಹಾಯ ಸಂಘಕ್ಕೆ ಆರ್ಥಿಕ ನೆರವು ಪ್ರಕಟಿಸ ಸಲಾಗಿದೆ.

ಏಳು ಪ್ರಮುಖ ಅಂಶಗಳನ್ನೊಳಗೊಂಡ ಮುಂಗಡ ಪತ್ರದ ಬಗ್ಗೆ ಜನವಲಯದಿಂದ ಸದಾಭಿಪ್ರಾಯ ವ್ಯಕ್ತವಾಗಿದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ೫ ಲಕ್ಷ ರೂಪಾಯಿಂದ ೭ ಲಕ್ಷಕ್ಕೆ ಏರಿಕೆ ಮಾಡಿರುವುದು ಸಾಕಷ್ಟು ಜನರಿಗೆ ಪ್ರಯೋಜನವಾಗಲಿದೆ. ಕೃಷಿಯಲ್ಲಿ ಸ್ಟಾರ್ಟಪ್‌ಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಸಿರಿ ಧಾನ್ಯಗಳ ಕೃಷಿ ಹೊಸ ಯೋಜನೆ ಘೋಷಿಸಲಾಗಿದೆ.

ಉದ್ಯೋಗ ಸೃಷ್ಟಿಗೆ ೧೦ ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ೫೬೩೦ ಕೋಟಿ ರೂಪಾಯಿ ಘೋಷಿಸಿರುವುದು ಕರ್ನಾಟಕಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ. ೮೧ ಲಕ್ಷ ಸ್ವಸಹಾಯ ಗುಂಪುಗಳಿಗೆ ಸಹಾಯಧನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

**
ಆದಾಯ ತೆರಿಗೆ ವಿನಾಯಿತಿ ಮೊತ್ತವನ್ನು ೫ ಲಕ್ಷ ರೂಪಾಯಿಯಿಂದ ೭ ಲಕ್ಷ ರೂಪಾಯಿವರೆಗೆ ಏರಿಕೆ ಮಾಡಿರುವುದರಿಂದ ಉದ್ಯೋಗಿ ಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಮಧ್ಯಮ ವರ್ಗದವರಿಗೂ ಆದಾಯ ತೆರಿಗೆ ವಿನಾಯಿತಿ ಸಿಗಲಿದೆ. ದೇಶದ ಅರ್ಥ ವ್ಯವಸ್ಥೆ ಸುಧಾರಿಸಲು ಮುಂಗಡ ಪತ್ರದಲ್ಲಿ ಅಗತ್ಯ ಘೋಷಣೆ ಮಾಡಿಲ್ಲ. ಮಂದ್ರೀರ ಮೋಹನ್ ದಾಸ್, ಲೆಕ್ಕಪರಿಶೋಧಕರು, ಮಡಿಕೇರಿ.

**
ಚುನಾವಣೆ ಗಮನದಲ್ಲಿಟ್ಟುಕೊಂಡು ಭರವಸೆ ಬಜೆಟ್ ರೂಪಿಸಲಾಗಿದೆ. ತೆರಿಗೆ ಏರಿಳಿತ ಮಾಡಲಾಗಿದೆ ಅಷ್ಟೇ. ಒಂದು ಕಡೆ ಏರಿಕೆ ಮಾಡಿ, ಮತ್ತೊಂದು ಕಡೆ ಇಳಿಕೆ ಮಾಡಿದ್ದಾರೆ. ಸಿರಿಧಾನ್ಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಯೋಜನೆ ಘೋಷಣೆ ಮಾಡಿರುವುದು ಒಳ್ಳೆಯದು. ಬಡವರಿಗೆ ಆಶಾದಾಯಕ ಬಜೆಟ್ ಆಗಿದೆ. ಕೆ.ಟಿ. ಬೇಬಿ ಮ್ಯಾಥ್ಯೂ, ಸಮಾಜ ಸೇವಕರು, ಮಡಿಕೇರಿ.

**
ಮೂಲಭೂತ ಸವಲತ್ತು ಒದಗಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ನಾಗರಿಕರಿಗೆ ಅಗತ್ಯ ಸೌಲಭ್ಯ ಒದಗಿಸುವುದು ಅತ್ಯಗತ್ಯ. ಕೃಷಿಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಹಸಿರು ಕ್ರಾಂತಿಗೆ ಆದ್ಯತೆ ನೀಡಬೇಕು. ಕೃಷಿ ಬೆಳವಣಿಗೆ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕಾಗಿದೆ. ಒಟ್ಟಿನಲ್ಲಿ ಉತ್ತಮ ಮುಂಗಡ ಪತ್ರ ಇದಾಗಿದೆ. ಕಾರೇರ ಕವನ್, ವಕೀಲರು, ಮಡಿಕೇರಿ.

**
ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಆ್ಯಪ್ ಮೂಲಕ ಪ್ರವಾಸಿ ತಾಣಗಳ ಮಾಹಿತಿ ನೀಡಲು ಮುಂದಾಗಿರುವುದು ಒಳ್ಳೆಯ ನಿರ್ಧಾರ. ೫೦ ಪ್ರವಾಸಿತಾಣಗಳ ಅಭಿವೃದ್ಧಿಗೆ ಮುಂದಾಗಿರುವುದು ಶ್ಲಾಘನೀಯ. ಮಧ್ಯಮ ಕೈಗಾರಿಕೆ ಅಭಿವೃದ್ಧಿಗೆ ೯ ಸಾವಿರ ಕೋಟಿ ರೂ. ಘೋಷಿಸಿರುವುದು ಒಳ್ಳೆಯದು. ವರ್ತಕರಿಗೂ ಉಪಕಾರಿಯಾದ ಬಜೆಟ್ ಆಗಿದೆ. ಅಂಬೆಕಲ್ ನವೀನ್ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್.

**
ಮೋದಿ ಸರ್ಕಾರವು ದೇಶದ ಬಡಜನರಿಗೆ ನೀಡಿದ ಗರೀಬ್ ಕಲ್ಯಾಣ ಯೋಜನೆ ಬಡವರ ಪಾಲಿಗೆ ವರದಾನವಾಗಿದೆ. ಬಡವರ ಏಳಿಗೆಗೆ ಒತ್ತು ನೀಡಿರುವುದು ಸಂತೋಷಕರ ವಿಚಾರ. ಕೃಷಿ ವಲಯಕ್ಕೆ ಕೊಡುಗೆಯಿದ್ದರೂ ಕೂಡ ಗೊಬ್ಬರ ಸಬ್ಸಿಡಿ ಕಡಿಮೆ ಮಾಡಿರು ವುದು ವಿಷಾದನೀಯ. ಹೊಸ ತೆರಿಗೆ ಪದ್ಧತಿ ಮತ್ತು ಶಿಕ್ಷಣ ವಲಯಕ್ಕೆ ಒತ್ತು ಕೊಟ್ಟಿರುವುದು ಸ್ವಾಗತರ್ಹ. ಪೋಡಮಾಡ ಭವಾನಿ ನಾಣಯ್ಯ, ಗೃಹಿಣಿ, ಬಾಳೆಲೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net