ಕೊಡಗಿನ ಸಮಸ್ಯೆಗಳಿಗೆ ಕೆಆರ್‌ಎಸ್ ಪಕ್ಷ ಪರಿಹಾರ

f0815a58-d50f-46c0-ad03-0006ec0d9f46
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಜಿಲ್ಲಾಸ್ಪತ್ರೆಯಲ್ಲಿ ಒಂದೇ ಒಂದು ಸ್ಕಾೃನಿಂಗ್ ಮಿಷನ್ ಇದೆ. ಸ್ಕಾೃನಿಂಗ್‌ಗೆ ಬರುವ ರೋಗಿಗಳನ್ನು ಎರಡ್ಮೂರು ದಿನ ಬಿಟ್ಟು ಬರುವಂತೆ ಕಳುಹಿಸಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷ ಜಿಲ್ಲಾಧ್ಯಕ್ಷ ಎನ್.ಎಂ. ಸಜೀರ್ ಆರೋಪಿಸಿದ್ದಾರೆ.
ಜಿಲ್ಲಾಸ್ಪತ್ರೆಯ ಅವ್ಯವಸ್ಥೆಯಿಂದಾಗಿ ರೋಗಿಗಳು ೭೦೦ ರೂಪಾಯಿ ಕೊಟ್ಟು ಖಾಸಗಿಯಾಗಿ ಸ್ಕಾೃನಿಂಗ್ ಮಾಡಿಸಿಕೊಳ್ಳುತ್ತಿದ್ದಾರೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ಬಡರೋಗಿಗಳಿಗೆ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ.

ಸರ್ಕಾರಿ ಕಚೇರಿಗಳಲ್ಲಿ ಲಂಚ ನೀಡಿದ್ದರೆ ಜನರ ಕೆಲಸ ಆಗುವುದಿಲ್ಲ. ಬಡವರ ಪರವಾಗಿ ರೂಪಿತಗೊಂಡಿರುವ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿ ಉತ್ತಮ ಶಿಕ್ಷಣ ನೀಡುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷೃ ಎದ್ದು ಕಾಣುತ್ತಿದ್ದು, ಕಂದಾಯ ಇಲಾಖೆಯಲ್ಲಿ ದಾಖಲಾತಿ ಸಕಾಲದಲ್ಲಿ ಆಗುತ್ತಿಲ್ಲ. ನ್ಯಾಯಬೆಲೆ ಅಂಗಡಿಗಳಲ್ಲಿ ಹಣ ವಸೂಲಿ, ತೂಕದಲ್ಲಿಮೋಸ, ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣದಿಂದ ಜನ ರೋಸಿ ಹೋಗಿದ್ದಾರೆ. ಬಡವರ ಪರವಾಗಿ ಕೆಆರ್‌ಎಸ್ ಪ್ರಾಮಾಣಿಕವಾಗಿ ದುಡಿಯುತ್ತಿದೆ ಎಂದು ಸಜೀರ್ ಹೇಳಿದರು.

ಕೆಆರ್‌ಎಸ್ ಪಕ್ಷದ ಪ್ರಣಾಳಿಕೆ ಬಗ್ಗೆ ಜನರಿಗೆ ಮಾಹಿತಿ ನೀಡಲು ಆಗಸ್ಟ್ ೨೨ ರಿಂದ ಕರುನಾಡು ಕಟ್ಟೋಣ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ೨೦ ಜಿಲ್ಲೆ ಪ್ರವಾಸ ಮುಗಿಸಿ ಕೊಡಗಿಗೆ ಆಗಮಿಸಿದ್ದೇನೆ. ಮಂಗಳವಾರ ಸೋಮವಾರಪೇಟೆ, ಕುಶಾಲನಗರ ಭಾಗದಲ್ಲಿ ಅಭಿಯಾನ ನಡೆಸಿದ್ದು, ಬುಧವಾರ ಮಡಿಕೇರಿಯಲ್ಲಿ ಅಭಿಯಾನ ನಡೆಸಲಾಗಿದೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನಸಿಂಧು ಸ್ವಾಮಿ ಹೇಳಿದರು.

ಕೆಆರ್‌ಎಸ್ ಪಕ್ಷದ ಪ್ರಮುಖರಾದ ಡೇನಿಯಲ್, ಎ.ಸಿ. ಮಂಜುನಾಥ್, ಮಹದೇವಣ್ಣ, ನಿತೀಶ್‌ಕುಮಾರ್ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net