ಪಠ್ಯಪುಸ್ತಕದಲ್ಲಿ ವೀರಸೇನಾನಿಗಳ ಸಾಹಸ- ಅದರ್ಶ ಅಳವಡಿಸಲು ಅಗ್ರಹ

9mdks8 - Copy
Published on

ಮಡಿಕೇರಿ: ದೇಶ ಸೇವೆ ಮಾಡಿದ ವೀರಸೇನಾನಿಗಳ ಸಾಹಸ ಮತ್ತು ಆದರ್ಶಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸಬೇಕೆಂದು ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಮೇಜರ್ ಓಡಿಯಂಡ ಎಸ್. ಚಿಂಗಪ್ಪ (ನಿವೃತ್ತ) ಆಗ್ರಹಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಡಿಕೇರಿ ಸ್ಥಳೀಯ ಸಂಸ್ಥೆ ಹಾಗೂ ಕೊಡವ ಮಕ್ಕಡ ಕೂಟದಿಂದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಅವರ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶುಕ್ರವಾರ ಸ್ಕೌಟ್ಸ್ ಅಂಡ್ ಗೈಡ್ಸ್ ಭವನದಲ್ಲಿನ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ಕೆ.ಎಸ್. ತಿಮ್ಮಯ್ಯ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಸೇರಿದಂತೆ ಮಹಾನ್ ವ್ಯಕ್ತಿಗಳ ಸಾಹಸ, ಆದರ್ಶ ಪಠ್ಯಪುಸ್ತಕಗಳಲ್ಲಿ ಅಳವಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕೆಂದರು.

ಕೊಡಗಿನಲ್ಲಿ ಸಾಕಷ್ಟು ಸಂಘ-ಸಂಸ್ಥೆಗಳಿದ್ದರೂ ಒಗ್ಗಟ್ಟಿನ ಕೊರತೆಯಿಂದ ಅಭಿವೃದ್ಧಿಗೆ ಪೂರಕವಾದುದನ್ನು ಪಡೆಯುವಲ್ಲಿ ಹಿಂದೆಯೇ ಉಳಿದಿ ದ್ದೇವೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಭಾರತ ರತ್ನ ನೀಡುವುದು ಸೇರಿದ್ದಂತೆ ಹಲವು ವಿಚಾರಗಳಲ್ಲಿ ಕೊಡಗಿವರಿಗೆ ಅನ್ಯಾಯವಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊಡಗು ವೀರ ಸೇನಾನಿಗಳಿರುವ ನಾಡು. ಹಲವು ಮಹಾನ್ ವ್ಯಕ್ತಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಸ್ವಾರ್ಥ ರಹಿತ ಕೆಲಸಗಳಿಂದ ಹಲವರು ಇತಿಹಾಸದ ಪುಟಗಳಲ್ಲಿ ಜೀವಂತವಾಗಿ ಉಳಿದುಕೊಂಡಿದ್ದಾರೆಂದರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೀರ ಮರಣವನ್ನ ಪ್ಪುವ ಮೂಲಕ ದೇಶ ಪ್ರೇಮ ಮತ್ತು ನಿಸ್ವಾರ್ಥತೆ ಮೆರೆದಿದ್ದಾರೆ. ಇದು ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು. ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಸದುಪಯೋಗಪಡಿಸಿಕೊಂಡು ಮಹಾನ್ ವ್ಯಕ್ತಿಗಳ ಇತಿಹಾಸ ತಿಳಿದುಕೊಳ್ಳಬೇಕೆಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಡಾ.ದೊಡ್ಡೆರಂಗೇಗೌಡ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮಡಿಕೇರಿ ಸ್ಥಳೀಯ ಸಂಸ್ಥೆ ಅಧ್ಯಕ್ಷ ಬಿ.ಎಸ್. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸ್ಕೌಟ್ಸ್ ಆಯುಕ್ತ ಜಿಮ್ಮಿ ಸಿಕ್ವೇರಾ ಇದ್ದರು. ವಸಂತಿ ನಿರೂಪಿಸಿದರು. ಕುಮಾರಸ್ವಾು ಸ್ವಾಗತಿಸಿದರು. ಎಂ.ಕೆ. ಅಪ್ಪಣ್ಣ ವಂದಿಸಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಬೊಳ್ಳಜಿರ ಬಿ.ಅಯ್ಯಪ್ಪ, ನೂತನ ನೋಡಲ್ ಅಧಿಕಾರಿಯಾಗಿ ಆಯ್ಕೆಯಾದ ಡಾ.ದೊಡ್ಡರಂಗೇಗೌಡ ಅವರನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಸ್ಕಾರ್ಫ್ ಧರಿಸಿ ಸ್ವಾಗತಿಸಲಾಯಿತು.

ವಿಜೇತರ ವಿವರ
ಸ್ಕೌಟ್ಸ್ ವಿಭಾಗದಲ್ಲಿ ಮಡಿಕೇರಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಕೆ.ಎಂ. ಜಸ್ವಿತ್ ಚಿಣ್ಣಪ್ಪ ಪ್ರಥಮ, ಸಂತ ಮೈಕಲರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್.ಆರ್. ಮನೀಷ ದ್ವಿತೀಯ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಎಂ.ಎಚ್. ಜೇಷ್ಠ ಸುಬ್ಬಯ್ಯ ತೃತೀಯ ಬಹುಮಾನ ಪಡೆದುಕೊಂಡರು.

ಗೈಡ್ಸ್ ವಿಭಾಗದಲ್ಲಿ ಮಡಿಕೇರಿ ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯ ಎ.ಬಿ.ಅಧಿತಿ ಪ್ರಥಮ, ಸಂತ ಮೈಕಲರ ಕನ್ನಡ ಮಾಧ್ಯಮ ಶಾಲೆಯ ಕೆ.ಎ. ಶ್ವಾನಿತ್ ದ್ವಿತೀಯ, ಕೆ.ಎಫ್. ಸ್ನೇಹ ತೃತೀಯ ಬಹುಮಾನ ಪಡೆದುಕೊಂಡರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net