

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಜಿಲ್ಲೆಯಾದ್ಯಂತ ಧಾರಾಕಾರವಾಗಿ ಸುರಿದ ಮಳೆ ಹಾಗೂ ನಿರ್ವಹಣೆ ಕೊರತೆಯಿಂದ ಕೊಡಗಿನ ಬಹುತೇಕ ರಸ್ತೆಗಳು ಈಗ ದುಸ್ಥಿತಿಗೆ ತಲುಪಿವೆ. ಗುಂಡಿ ಬಿದ್ದ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದು ಸವಾರರ ಪಾಲಿಗೆ ಸಾಹಸ ಕ್ರೀಡೆಯಲ್ಲಿ ಪಾಲ್ಗೊಂಡ ಅನುಭವ ನೀಡುತ್ತಿದೆ. ರಸ್ತೆ ದುಸ್ಥಿತಿ ಜನರಲ್ಲಿ ಜನಪ್ರತಿನಿಧಿಗಳು ಸೇರಿದ್ದಂತೆ ಆಡಳಿತ ವ್ಯವಸ್ಥೆ ಬಗ್ಗೆ ಆಕ್ರೋಶ ಮಡ್ಡುಗಟ್ಟುವಂತೆ ಮಾಡಿದೆ.
ಮುಂಗಾರು ಮಳೆ ಅಬ್ಬರಿಸುವ ಕೊಡಗಿನಲ್ಲಿ ಪ್ರತಿವರ್ಷ ಮಳೆಗಾಲ ಬಳಿಕ ರಸ್ತೆಗಳು ದುಸ್ಥಿತಿಗೆ ತಲುಪುವುದು ವಾಡಿಕೆಯಾಗಿದೆ. ಮಳೆ ಯಿಂದ ರಸ್ತೆ ಹಾಳಾಗದ್ದಂತೆ ಕಾಂಕ್ರೀಟ್ ರಸ್ತೆ ನಿರ್ಮಿಸುವ ಅಗತ್ಯತೆ ಇದೆ. ರಸ್ತೆ ಬದಿ ಸೂಕ್ತ ಚರಂಡಿ ನಿರ್ಮಾಣ ಮಾಡದಿರುವುದು ಹಾಗೂ ಇರುವ ಚರಂಡಿಯನ್ನು ಸಕಾಲದಲ್ಲಿ ನಿರ್ವಹಣೆ ಮಾಡದರಿಂದ ರಸ್ತೆ ಮೇಲೆ ನೀರು ಹರಿದು ಹೋಗುತ್ತದೆ. ಇದು ಕೂಡ ರಸ್ತೆ ತ್ವರಿತಗತಿಯಲ್ಲಿ ಹಾಳಾಗಳು ಕಾರಣವಾಗುತ್ತಿದೆ.
ರಸ್ತೆ ಕಾಮಗಾರಿಗೆ ಬಿಡುಗಡೆ ಆಗುವ ಅನುದಾನ ಪೂರ್ಣ ಪ್ರಮಾಣದಲ್ಲಿ ರಸ್ತೆ ಕಾಮಗಾರಿಗೆ ಬಳಕೆಯಾಗುತ್ತಿಲ್ಲ. ಕಮಿಷನ್ ರೂಪದಲ್ಲಿ ಹಣ ಸೋರಿಕೆ ಆಗುತ್ತಿರುವುದರಿಂದ ಗುಣಮಟ್ಟದ ರಸ್ತೆ ನಿರ್ಮಿಸಲು ಕೂಡ ಸಾಧ್ಯವಾಗುತ್ತಿಲ್ಲ. ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಒಂದು ಮಳೆಗೆ ರಸ್ತೆ ಹಾಳಾಗುವಂತಾಗಿದೆ.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರಸ್ತೆಗಳು ತುಂಬಾ ಹಾನಿಗೀಡಾಗಿವೆ. ಪ್ರಕೃತಿ ವಿಕೋಪ ಪರಿಹಾರ ಸೇರಿದ್ದಂತೆ ವಿವಿಧ ಮೂಲದ ಅನುದಾನ ಬಳಸಿಕೊಂಡು ತಕ್ಷಣ ಗುಣಮಟ್ಟದ ರಸ್ತೆ ನಿರ್ಮಿಸುವ ಅಗತ್ಯತೆ ಇದೆ. ಮಡಿಕೇರಿ ನಗರ ಸೇರಿದ್ದಂತೆ ಜಿಲ್ಲೆಯ ಮುಖ್ಯರಸ್ತೆಗಳು ಕೂಡ ಹಾನಿ ಗೀಡಾಗಿವೆ.
ಕೆಲವು ಭಾಗದಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿ ಪೂರ್ಣಗೊಳ್ಳದಿರುವುದು ಕೂಡ ಸಮಸ್ಯೆಯಾಗುತ್ತಿದೆ. ರಸ್ತೆ ದುಸ್ಥಿತಿ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನ ಸೆಳೆಯುವ ಕಾರ್ಯ ನಡೆಯುತ್ತಿದೆ. ಕೊಡಗಿನ ರಸ್ತೆಗಳು ಹಾನಿಗೀಡಾಗಿರುವ ಬಗ್ಗೆ ಲೌಡ್ ಸ್ಪೀಕರ್‌ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ.
**
ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸ್ಸು ನನಸ್ಸಲಾಗಲೇ ಇಲ್ಲ. ಗ್ರಾಮೀಣ ರಸ್ತೆಗಳ ದುಸ್ಥಿತಿ ನೋಡಿದರೆ, ಮತದಾನದ ಬಗ್ಗೆ ಜಿಗುಪ್ಸೆ ಹುಟ್ಟುತ್ತದೆ. ಬಾಚಳ್ಳಿ ಬಸ್‌ಸ್ಟಾಂಡ್‌ನಿಂದ ಬಿ.ಎನ್. ಶಾಂತಪ್ಪ ಅವರ ಮನೆವರೆಗೆ ರಸ್ತೆ ಸಂಪೂರ್ಣ ಹಾಳಾಗಿದೆ. ಚಿಗಟಳ್ಳಿ ರಸ್ತೆ, ಬಾಚಳ್ಳಿ ಫಾಲ್ಸ್ ರಸ್ತೆಯಲ್ಲಿ ವಾಹನ ಸಂಚಾರ ಅಸಾಧ್ಯವಾಗಿದೆ. ಗ್ರಾಮೀಣ ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಎಚ್.ಬಿ. ರಾಜಪ್ಪ, ಕೃಷಿಕರು, ಅಭಿಮಠ ಬಾಚಳ್ಳಿ.
**
ರೈತ ವಿರೋಧಿ ಸರ್ಕಾರ ಎನ್ನುವುದು ಇದಕ್ಕಾಗಿಯೇ. ಹೈವೆ ರಸ್ತೆಗಳಿಗೆ ಸಾವಿರಾರು ಕೋಟಿ ರೂ. ಖರ್ಚು ಮಾಡಲಾಗುತ್ತದೆ. ದೇಶದ ಅಭಿವೃದ್ಧಿ ರೈತರಿಂದಲೇ ಎಂಬ ಕಟುಸತ್ಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೂ ಗೊತ್ತಿದ್ದರೂ ಗ್ರಾಮೀಣಾಭಿವೃದ್ಧಿಗೆ ವಿಶೇಷ ಅನುದಾನ ಕಲ್ಪಿಸುತ್ತಿಲ್ಲ ಎಂಬುದೇ ದುರಂತ. ಯಡೂರು ಗ್ರಾಮದ ಸಂಪರ್ಕ ರಸ್ತೆಗಳು ಗುಂಡಿಬಿದ್ದಿವೆ. ಕುಶಾಲಪ್ಪ, ಕೃಷಿಕರು, ಯಡೂರು.
**
ಮಡಿಕೇರಿ ಕೊಡವ ಸಮಾಜ ಕಾಂಪ್ಲೆಕ್ಸ್‌ನಿಂದ ಕೆಳಗಿನ ಕೊಡವ ಸಮಾಜದ ಮೂಲಕ ಹಾದು ಹೋಗುವ ರಸ್ತೆ ದುಸ್ಥಿತಿಗೆ ತಲುಪಿದೆ. ಎರಡೂವರೆ ತಿಂಗಳ ಹಿಂದೆ ಅತ್ಯಾಧುನಿಕ ಫಾರಿನ್ ಟೆಕ್ನಾಲಜಿ ಬಳಸಿ ದುರಸ್ಥಿಯಾಗಿತ್ತು. ಈಗ ಪರಿಸ್ಥಿತಿ ಹೇಗಿದೆ ಎಂದು ನೋಡಬೇಕು. ನಗರಸಭೆ ಅಧ್ಯಕ್ಷರ ವಾರ್ಡ್ ಪ್ರದಕ್ಷಿಣೆ ಕಾರ್ಯಕ್ರಮ ಈ ಕಡೆ ನಡೆಯಲಿ. ತೆನ್ನೀರ ಮೈನ, ಕಾಂಗ್ರೆಸ್ ವಕ್ತಾರ, ಮಡಿಕೇರಿ.
**
ಕಂಡಂಗಾಲದಿಂದ ಕುಟ್ಟಂದಿ, ಬಿ. ಶೆಟ್ಟಿಗೇರಿ ಸಂಪರ್ಕಿಸುವ ಮುಖ್ಯ ರಸ್ತೆ ಹಲವು ವರ್ಷಗಳಿಂದ ಸಮಸ್ಯೆಯಾಗಿದೆ. ಕಿತ್ತು ಹೋಗಿರುವ ರಸ್ತೆ, ತೇಪೆ ಹಾಕಿರುವ ಡಾಂಬರು ಪ್ರಯಾಣಿಕರಿಗೆ ಅನಾನುಕೂಲವಾಗಿದೆ. ಹೆಚ್ಚು ಮಳೆ ಬೀಳುವ ಗ್ರಾಮಗಳಿಗೆ ವಿಶೇಷವಾಗಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು. ಚಂದುರ ಪವಿತಾ ತಂಗಮ್ಮ, ಮಾಜಿ ಸದಸ್ಯೆ, ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ.
**
ಮಡಿಕೇರಿ ತಹಸೀಲ್ದಾರ್ ಕಚೇರಿಯತ್ತ ತೆರಳುವ ರಸ್ತೆ ತುಂಬಾ ಹಾಳಾಗಿದೆ. ತಾಲೂಕು ಕಚೇರಿಗೆ ಪ್ರತಿನಿತ್ಯ ಬೇರೆ- ಬೇರೆ ಕೆಲಸಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಕಳೆದ ನಾಲ್ಕು ವರ್ಷದಿಂದ ದುಸ್ಥಿತಿಯಲ್ಲಿರುವ ರಸ್ತೆ ಸರಿ ಪಡಿಸುವ ಗೋಜಿಗೆ ಯಾರೂ ಹೋಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು. ಕಿರಿಯಮಾಡ ರತನ್ ತಮ್ಮಯ್ಯ, ವಕೀಲರು, ಮಡಿಕೇರಿ.
**
ವಿರಾಜಪೇಟೆಯಿಂದ ಸಿದ್ದಾಪುರಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಮಾರ್ಗದಲ್ಲಿ ವಾಹನ ಓಡಿಸಲು ಸವಾರರು ಹರಸಾಹಸ ಪಡಬೇಕು. ಗುಂಡಿ ಬಿದ್ದ ರಸ್ತೆಯಿಂದಾಗಿ ವಾಹನಗಳು ಹಾಳಾಗುತ್ತಿವೆ. ಅಲ್ಲದೇ, ಸಕಾಲದಲ್ಲಿ ನಿಗದಿತ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ತಕ್ಷಣ ಈ ರಸ್ತೆ ಸರಿ ಪಡಿಸಲು ಸಂಬಂಧಿಸಿದವರು ಗಮನ ಹರಿಸಬೇಕು. ಚೋಕಂಡ ಸಂಜು, ಗ್ರಾಮಸ್ಥರು, ಅಮ್ಮತ್ತಿ.
**
ವಿರಾಜಪೇಟೆ ಪಟ್ಟಣದಲ್ಲಿ ರಸ್ತೆಗಳು ತೀರಾ ದುಸ್ಥಿತಿಗೆ ತಲುಪಿದೆ. ಕೇರಳದತ್ತ ತೆರಳುವ ಮಲಬಾರ್ ರಸ್ತೆ ಹಾಗೂ ಅಮ್ಮತ್ತಿ ರಸ್ತೆ ತುಂಬಾ ಹಾಳಾಗಿದೆ. ರಸ್ತೆ ಸರಿ ಪಡಿಸಲು ಸಂಬಂಧಿಸಿದವರು ಗಮನ ಹರಿಸುತ್ತಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷೃ ಖಂಡಿಸಿ ಸಾರ್ವಜನಿಕರ ಬೆಂಬಲದೊಂದಿಗೆ ಪ್ರತಿಭಟನೆ ಮಾಡಲು ಯೋಚಿಸಲಾಗುತ್ತಿದೆ. ಮಾದಂಡ ತಿಮ್ಮಯ್ಯ, ಅಧ್ಯಕ್ಷರು, ವಿರಾಜಪೇಟೆ ನಗರ ಕಾಂಗ್ರೆಸ್.