

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಮಡಿಕೇರಿಯಲ್ಲಿ ಶುಕ್ರವಾರ ೬೮ ನೇ ವನ್ಯಜೀವಿ ಸಪ್ತಾಹ ಪ್ರಯುಕ್ತ ಬೈಸಿಕಲ್ ಜಾಥಾ ಹಾಗೂ ಸ್ವಚ್ಚತಾ ಕಾರ್ಯ ನಡೆಯಿತು.ಅರಣ್ಯ ಇಲಾಖೆಯೊಂದಿಗೆ ಶಾಲಾ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್, ಗ್ರೀನ್ ಸಿಟಿ ಫೋರಂ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಬೆಂಗಳೂರಿನ ಅಡ ವೈಲ್ಡ್ ಅಲರ್ಟ್ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸೈಕಲ್ ಜಾಥಾ ನಡೆಯಿತು.
ಸೈಕಲ್ ಜಾಥಾ ಮತ್ತು ಸ್ವಚ್ಚತಾ ಕಾರ್ಯಕ್ಕೆ ಹಸಿರು ನಿಶಾನೆ ಮೂಲಕ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ, ಪ್ರತಿಯೊಬ್ಬರೂ ಪ್ಲಾಸ್ಟಿಕ್ ತ್ಯಜಿಸುವ ಮೂಲಕ ತಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕೆಂದರು.
ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಪಣ ತೊಡುವ ಮೂಲಕ ಸ್ವಚ್ಛ ಹಾಗೂ ಹಸಿರು ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕೆಂದರು.
ವನ್ಯಜೀವಿ ಸಪ್ತಾಹ ಅಂಗವಾಗಿ ಅರಣ್ಯ ಇಲಾಖೆಯಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್‌ನ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ. ಪ್ರೇಮಕುಮಾರ್, ಸ್ವಚ್ಛ ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆ ಕುರಿತು ತಿಳಿಸಿದರು.
ಮಡಿಕೇರಿ ನಗರದ ಅರಣ್ಯ ಭವನದಿಂದ ಪ್ರಾರಂಭವಾದ ಜಾಥಾವು ಮುಖ್ಯ ರಸ್ತೆ ಮೂಲಕ ಸಾಗಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತ, ಜನರಲ್ ತಿಮ್ಮಯ್ಯ ವೃತ್ತ ಹಾಗೂ ಮಹದೇವಪೇಟೆ ಮುಖಾಂತರ ೪.೫ ಕಿಲೋ ಮೀಟರ್‌ವರೆಗೆ ನಡೆದ ಸೈಕಲ್ ಜಾಥಾವು ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಸಮಾಪನಗೊಂಡಿತು.
ಬೆಂಗಳೂರಿನ ಅಡ ವೈಲ್ಡ್ ಅಲರ್ಟ್ ಸಂಸ್ಥೆ ವತಿಯಿಂದ ವನ್ಯಜೀವಿ ಸಪ್ತಾಹ ಅಂಗವಾಗಿ ಹೊರತಂದಿರುವ ಬಟ್ಟೆ ಕೈಚೀಲವನ್ನು ಜಿಲ್ಲಾಧಿಕಾರಿ ಡಾ ಬಿ.ಸಿ. ಸತೀಶ್ ಬಿಡುಗಡೆಗೊಳಿಸಿದರು.
ಜಿಲ್ಲಾಧಿಕಾರಿ ಡಾ ಬಿ.ಸಿ.ಸತೀಶ್ ಜಾಥಾದಲ್ಲಿ ಬೈಸಿಕಲ್ ತುಳಿಯುವ ಮೂಲಕ ಗಮನ ಸೆಳೆದರು. ವನ್ಯಜೀವಿ ವಿಭಾಗದ ಡಿಸಿಎಫ್ ಶಿವರಾಮ್ ಬಾಬು, ಎಸಿಎಫ್‌ಗಳಾದ ಶ್ರೀನಿವಾಸಮೂರ್ತಿ, ಎ.ಎ. ಗೋಪಾಲ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ, ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ, ಮಾಜಿ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಪ್ರಮುಖರಾದ ಅರುಣ್ ಅಪ್ಪಚ್ಚು, ಬೆಂಗಳೂರಿನ ಅಡ ವೈಲ್ಡ್ ಅಲರ್ಟ್ ಸಂಸ್ಥೆ ಸಂಸ್ಥಾಪಕ ಪವನ್ ಜೋ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಅಂಬೆಕಲ್ ನವೀನ್ (ಮಡಿಕೇರಿ), ಕೆ.ಎಸ್.ಮೂರ್ತಿ (ಕುಶಾಲನಗರ) ಮತ್ತಿತರರು ಇದ್ದರು.
ವನ್ಯಜೀವಿ ಸಪ್ತಾಹ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಕೂಡಿಗೆ ಸೈನಿಕ ಶಾಲೆ, ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿ ಗಳು ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್, ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ವಿವಿಧ ಸಂಘ- ಸಂಸ್ಥೆ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಬೆಂಗಳೂರಿನ ಅಡ ವೈಲ್ಡ್ ಅಲರ್ಟ್ ಸಂಸ್ಥೆಯತಿಂದ ವನ್ಯಜೀವಿ ಸಪ್ತಾಹ ಅಂಗವಾಗಿ ಹೊರ ತಂದಿರುವ ಬಟ್ಟೆ ಕೈಚೀಲವನ್ನು ಜಾಥಾದಲ್ಲಿ ಪಾಲ್ಗೊಂಡಿದ್ದವರಿಗೆ ವಿತರಿಸಲಾಯಿತು.